ಬೆಂಗಳೂರು (ಆ.31): ಮಹಾರಾಷ್ಟ್ರದಲ್ಲಿ ಸೋಂಕು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಆ ರಾಜ್ಯದ ಜತೆ ಗಡಿ ಹಂಚಿಕೊಂಡಿರುವ ಬೆಳಗಾವಿ, ವಿಜಯಪುರ, ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಹಿಂಪಡೆದು ಆದೇಶಿಸಲಾಗಿದೆ.
ಈ ಹಿಂದಿನ ಆದೇಶದಲ್ಲಿ ಕೇರಳ ಹಾಗೂ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಬೆಳಗಾವಿ, ವಿಜಯಪುರ, ಬೀದರ್, ಕಲಬುರಗಿ ಸೇರಿ ಎಂಟು ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಘೋಷಿಸಲಾಗಿತ್ತು. ಪ್ರಸ್ತುತ ಮಹಾರಾಷ್ಟ್ರದಲ್ಲಿ ಸೋಂಕು ಕಡಿಮೆ ಇರುವುದರಿಂದ ಮಹಾರಾಷ್ಟ್ರದ ಗಡಿ ಜಿಲ್ಲೆಗಳಿಗೆ ವಾರಾಂತ್ಯದ ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ. ಉಳಿದಂತೆ ದಕ್ಷಿಣ ಕನ್ನಡ, ಉಡುಪಿ, ಹಾಸನ, ಕೊಡಗು ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಮುಂದುವರೆಸಲಾಗಿದೆ.
ರಾಜ್ಯದಲ್ಲಿ ಪ್ರತಿ ವಾರದಲ್ಲಿ ಒಂದು ದಿನ ಲಸಿಕಾ ಉತ್ಸವ : ಸುಧಾಕರ್
ವಾರಾಂತ್ಯದ ಕರ್ಫ್ಯೂ ಇರುವ ಜಿಲ್ಲೆಗಳಲ್ಲಿ ಪರೀಕ್ಷೆ ಕಾರಣಕ್ಕೆ ಸಂಚರಿಸುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಉಳಿದಂತೆ ರಾತ್ರಿ ಕರ್ಫ್ಯೂ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ರಾತ್ರಿ ಕರ್ಫ್ಯೂ ಮುಂದುವರೆಯಲಿದೆ.