ರಾಜ್ಯದಲ್ಲಿ ಪ್ರತಿ ವಾರದಲ್ಲಿ ಒಂದು ದಿನ ಲಸಿಕಾ ಉತ್ಸವ : ಸುಧಾಕರ್
- ಪ್ರತಿ ಬುಧವಾರ ವಿಶೇಷ ಲಸಿಕಾ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ
- ಇನ್ನು ಮುಂದೆ ಪ್ರತಿ ದಿನ ಐದು ಲಕ್ಷ ಲಸಿಕೆ ಹಾಕುವ ಉದ್ದೇಶವನ್ನು ಹೊಂದಲಾಗಿದ್ದು, ಅದನ್ನು ದ್ವಿಗುಣ ಮಾಡುವ ಗುರಿ ಇದೆ
- ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ
ಬೆಂಗಳೂರು (ಆ.31): ಪ್ರತಿ ಬುಧವಾರ ವಿಶೇಷ ಲಸಿಕಾ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ. ಜತೆಗೆ ಇನ್ನು ಮುಂದೆ ಪ್ರತಿ ದಿನ ಐದು ಲಕ್ಷ ಲಸಿಕೆ ಹಾಕುವ ಉದ್ದೇಶವನ್ನು ಹೊಂದಲಾಗಿದ್ದು, ಅದನ್ನು ದ್ವಿಗುಣ ಮಾಡುವ ಗುರಿ ಇದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಕೋವಿಡ್ ಲಸಿಕಾ ಅಭಿಯಾನ ಮತ್ತು ಮುಂದಿನ ದಿನದಲ್ಲಿ ಅಳವಡಿಸಿಕೊಳ್ಳಬೇಕಿರುವ ಕಾರ್ಯತಂತ್ರಗಳ ಕುರಿತು ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬೆಂಗ್ಳೂರಲ್ಲಿ 24/7 ಕೊರೋನಾ ಲಸಿಕೆ ಲಭ್ಯ..!
ಡಿಸೆಂಬರ್ ತಿಂಗಳ ವೇಳೆಗೆ 4.90 ಕೋಟಿ ಜನರಿಗೆ ಎರಡು ಡೋಸ್ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದ್ದು, ಅದನ್ನು ತಲುಪುವ ವಿಶ್ವಾಸ ಇದೆ. ಆಗಸ್ಟ್ ತಿಂಗಳಲ್ಲಿ 1.10 ಕೋಟಿ ಲಸಿಕೆ ಕೇಂದ್ರ ಸರ್ಕಾರದಿಂದ ಬಂದಿದೆ. ನಾನು ಮತ್ತು ಮುಖ್ಯಮಂತ್ರಿಗಳು ಕೇಂದ್ರದ ಮಟ್ಟದಲ್ಲಿ ಚರ್ಚಿಸಿದ ಬಳಿಕ ಸಮರ್ಪಕವಾಗಿ ಪೂರೈಕೆಯಾಗುತ್ತಿದೆ. ಇನ್ನು ಮುಂದೆ ಪ್ರತಿ ದಿನ ಐದು ಲಕ್ಷ ಲಸಿಕೆ ನೀಡಲಾಗುವುದು. ಪ್ರತಿ ಬುಧವಾರ ಲಸಿಕಾ ಉತ್ಸವ ನಡೆಸಿ ಈ ಪ್ರಮಾಣವನ್ನು 5 ರಿಂದ 10 ಲಕ್ಷಕ್ಕೆ ಹೆಚ್ಚಳ ಮಾಡಲಾಗುವುದು. ಇದರಿಂದ ಒಂದೂವರೆಯಿಂದ ಎರಡು ಕೋಟಿ ಲಸಿಕೆಯನ್ನು ಒಂದು ತಿಂಗಳಲ್ಲಿ ನೀಡಬಹುದು. ಇಡೀ ದೇಶದಲ್ಲಿ ಲಸಿಕೆ ಕಾರ್ಯ ಪೂರ್ಣಗೊಂಡ ನಗರ ಬೆಂಗಳೂರು ಆಗಬೇಕು ಎಂಬ ಗುರಿಯನ್ನಿಟ್ಟುಕೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ 4 ಕೋಟಿ ಲಸಿಕೆ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಕೋಟಿ ಲಸಿಕೆ ನೀಡಲಾಗಿದೆ. ಎರಡನೇ ಡೋಸ್ ಲಸಿಕೆಯನ್ನು ಶೇ.20ರಷ್ಟುಮಂದಿ ಪಡೆದುಕೊಂಡಿದ್ದರೆ, ಬೆಂಗಳೂರಲ್ಲಿ ಶೇ.27ರಷ್ಟುಮಂದಿಗೆ ಲಸಿಕೆ ನೀಡಲಾಗಿದೆ. ಕೊಳಗೇರಿ ನಿವಾಸಿಗಳಿಗೆ ಪ್ರತಿ ದಿನ ವಿಶೇಷ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಅವರು ವಾಸ ಮಾಡುವ ಸ್ಥಳದಲ್ಲಿಯೇ ಸಿಬ್ಬಂದಿ ನಿಯೋಜಿಸಿ ಅಲ್ಲಿಯೇ ಲಸಿಕೆ ನೀಡಲಾಗುವುದು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮೊದಲಾದ ಗಡಿಭಾಗದ ಜಿಲ್ಲೆಗಳಲ್ಲಿ ಲಸಿಕೆ ವಿತರಣೆಗೆ ಆದ್ಯತೆ ನೀಡಲಾಗಿದೆ. ಕೇರಳ ಗಡಿಯ 20 ಕಿ.ಮೀ. ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಹಾಕಲಾಗುತ್ತಿದೆ. ಡಿಸೆಂಬರ್ ಅಂತ್ಯಕ್ಕೆ ಎರಡೂ ಡೋಸ್ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆ ಎಂದರು.
ಎರಡನೇ ಡೋಸ್ ಪಡೆದವರು ತಪ್ಪು ದೂರವಾಣಿ ಸಂಖ್ಯೆ ನೀಡುತ್ತಿದ್ದಾರೆ. ಮೊದಲ ಡೋಸ್ ಪಡೆಯುವಾಗ ಒಂದು ನಂಬರ್ ನೀಡುತ್ತಿದ್ದು, ಎರಡನೇ ಡೋಸ್ ಪಡೆದಾಗ ಮತ್ತೊಂದು ನಂಬರ್ ನೀಡುತ್ತಿದ್ದಾರೆ. ಜನರ ಈ ನಡೆ ಸಮಸ್ಯೆ ತಂದಿದೆ. ಎರಡನೇ ಡೋಸ್ ಪಡೆದವರ ನಿಖರ ಅಂಕಿ-ಅಂಶ ಸಿಗುತ್ತಿಲ್ಲ. ಮೊದಲ ಡೋಸ್ ಪಡೆದಾಗ ನೀಡಿದ ಫೋನ್ ನಂಬರ್ ಅನ್ನೇ ಎರಡನೇ ಡೋಸ್ ಪಡೆದಾಗಲೂ ನೀಡಬೇಕು. ಇಲ್ಲದಿದ್ದರೆ ಲಸಿಕೆ ಪಡೆದವರ ಪ್ರಮಾಣದ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗುವುದಿಲ್ಲ ಎಂದು ಸಚಿವರು ತಿಳಿಸಿದರು.