ಅಪ್ರಾಪ್ತ ವಯಸ್ಸಿನವರಿಗೆ ವಾಹನ ನೀಡಿದರೆ ವಾಹನದ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಹೇಳಿದರು.
ಮಂಗಳೂರು (ಜು.2) ಅಪ್ರಾಪ್ತ ವಯಸ್ಸಿನವರಿಗೆ ವಾಹನ ನೀಡಿದರೆ ವಾಹನದ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಹೇಳಿದರು.
ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶನಿವಾರ ನಡೆದ ಪೊಲೀಸ್ ಫೋನ್-ಇನ್ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಕಾಟಿಪಳ್ಳ ಪ್ರದೇಶದಲ್ಲಿ ಅಪ್ರಾಪ್ತ ವಯಸ್ಸಿನವರು ಹೆಲ್ಮೆಟ್ ಧರಿಸದೆ ಮೂರು ಜನ ಕುಳಿತುಕೊಂಡು ಅತಿ ವೇಗವಾಗಿ ದ್ವಿಚಕ್ರ ವಾಹನಗಳನ್ನು ಚಲಾಯಿಸುವ ಪ್ರಕರಣ ಹೆಚ್ಚಾಗುತ್ತಿದೆ. ಪೊಲೀಸರು ಈ ಬಗ್ಗೆ ನಿಗಾ ಇಟ್ಟು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಹಾಸನ: ಬೈಕ್ ವೀಲ್ಹಿಂಗ್ ಹುಚ್ಚಾಟದ ವೇಳೆ ಭೀಕರ ಅಪಘಾತ, ಇಬ್ಬರು ಯುವತಿಯರಿಗೆ ಗಂಭೀರ ಗಾಯ
ಸುರತ್ಕಲ್ ಪರಿಸರದಲ್ಲಿ ಗುಣಮಟ್ಟದ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸಂಚಾರ ನಿಯಮ ಉಲ್ಲಂಘಿಸುವುದರ ವಿರುದ್ಧ ಗಮನ ವಹಿಸಲಾಗುತ್ತಿದೆ. ಕಾನೂನು ಉಲ್ಲಂಘಿಸಿ ವಾಹನ ಚಲಾಯಿಸುವ ಅಪ್ರಾಪ್ತರ ಹೆತ್ತವರನ್ನು ಕರೆಸಿ ಎಚ್ಚರಿಕೆ ನೀಡಲಾಗುತ್ತಿದೆ. ಶಾಲೆಗಳಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಕಮಿಷನರ್ ಹೇಳಿದರು.
ಕೆಪಿಟಿ-ಕಾವೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. 10 ವರ್ಷದಲ್ಲಿ 30ಕ್ಕಿಂತಲೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೇರಳದ ವಿದ್ಯಾರ್ಥಿಗಳು ಸಂಚಾರ ನಿಯಮ ಉಲ್ಲಂಘಿಸಿ ಸಂಚರಿಸುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ. ವಿಮಾನ ನಿಲ್ದಾಣ ರಸ್ತೆ, ಹೆಚ್ಚಾಗಿ ವಿಐಪಿಗಳು ಸಂಚರಿಸುವುದರಿಂದ ಅಲ್ಲಿ ಹಂಫ್ಸ್ ಹಾಕಲು ಅವಕಾಶ ಇಲ್ಲ. ವೇಗ ನಿಯಂತ್ರಣಕ್ಕೆ ಪರ್ಯಾಯ ವ್ಯವಸ್ಥೆ ಏನಾದರೂ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ಜಿ.ಕೆ.ಭಟ್ ಒತ್ತಾಯಿಸಿದರು.
ನಗರದಲ್ಲಿ ಕೆಲವೊಂದು ಬಾರ್ ಮತ್ತು ವೈನ್‌ಶಾಪ್‌ಗಳು ಸಮಯ ಪಾಲನೆ ಮಾಡುತ್ತಿಲ್ಲ ಎಂದು ನಾಗರಿಕರೊಬ್ಬರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್, ನಗರದ ಎಲ್ಲ ಬಾರ್ ಹಾಗೂ ವೈನ್‌ಶಾಪ್‌ಗಳ ಸಿಸಿ ಕ್ಯಾಮರಾ ಪರಿಶೀಲನೆ ನಡೆಸುತ್ತಿದ್ದೇವೆ. ಈಗಾಗಲೇ ಕೆಲವೊಂದು ವೈನ್‌ಶಾಪ್, ಬಾರ್‌ಗಳು ನಿಯಮ ಮೀರಿರುವುದು ಕಂಡು ಬಂದಿದೆ. ಸೂಕ್ತ ಕ್ರಮಕ್ಕೆ ಅಬಕಾರಿ ಇಲಾಖೆಗೆ ಮನವಿ ಮಾಡಿದ್ದೇವೆ. ಅವರು ದಂಡ ಕೂಡಾ ವಿಧಿಸಿದ್ದಾರೆ ಎಂದರು.
ಬಸ್‌ಗಳಲ್ಲಿ ಕರ್ಕಶ ಹಾರ್ನ್ ಮಿತಿ ಮೀರಿದೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಬಿಜೈ ನಿವಾಸಿಯೊಬ್ಬರು ದೂರಿದರು. ಈಗಾಗಲೇ ಬಸ್ ಮಾಲೀಕರ ಸಭೆ ನಡೆಸಿದ್ದು, ಸೂಚನೆ ನೀಡಲಾಗಿದೆ. ಪೊಲೀಸರು ಕೂಡಾ ನಿರಂತರ ಕಾರ್ಯಾಚರಣೆ ನಡೆಸಿ ಕರ್ಕಶ ಹಾರ್ನ್‌ಗಳನ್ನು ತೆರವು ಮಾಡುತ್ತಿದ್ದಾರೆ ಎಂದು ಕಮಿಷನರ್ ಹೇಳಿದರು.
ಕಾವೂರು ವೃತ್ತ ಅಪಾಯಕಾರಿಯಾಗಿದ್ದು, ಅಲ್ಲಿ ಕಾಯಂ ಸಂಚಾರ ಪೊಲೀಸರನ್ನು ನೇಮಿಸಬೇಕು. ಇಲ್ಲಿ ನಾಲ್ಕು ರಸ್ತೆಗಳು ಸೇರುವುದರಿಂದ ನಿರಂತರವಾಗಿ ವಾಹನಗಳು ಸಂಚರಿಸುತ್ತಿರುತ್ತವೆ. ಹಿರಿಯ ನಾಗರಿಕರಿಗೆ ರಸ್ತೆ ದಾಟಲು ಕಷ್ಟವಾಗುತ್ತಿದೆ. ಇಂದಿರಾ ಕ್ಯಾಂಟೀನ್ ಬಳಿ ಫುಟ್‌ಪಾತ್‌ನಲ್ಲಿ ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಮಾಡುತ್ತಿದ್ದಾರೆ. ಇದರಿಂದ ಪಾದಚಾರಿಗಳಿಗೆ ನಡೆದಾಡಲು ತೊಂದರೆಯಾಗುತ್ತಿದೆ ಎಂದು ಹಿರಿಯ ಮಹಿಳೆಯೊಬ್ಬರು ದೂರಿದರು.
ರಸ್ತೆಯಲ್ಲಿ ಮನಬಂದಂತೆ ಪುಂಡರ ವ್ಹೀಲಿಂಗ್: ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಡಿಸಿಪಿಗಳಾದ ಅಂಶು ಕುಮಾರ್, ದಿನೇಶ್ ಕುಮಾರ್, ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ, ಸಿಸಿಆರ್‌ಬಿ ಎಸಿಪಿ ರವೀಶ್ ನಾಯಕ್ ಇದ್ದರು.