ಸಮಾಜದಲ್ಲಿ ಶಾಂತಿ ಕದಡುವ ರೀತಿ ಹಾಗೂ ಕಾನೂನನ್ನು ತಾವೇ ಕೈಗೆ ತೆಗೆದುಕೊಂಡು ಬಟ್ಟೆ ಅಂಗಡಿಗಳ ಬಂದು, ಯಾವುದೇ ವ್ಯಕ್ತಿಗೆ ನಿರ್ಬಂಧಿಸುವುದು ಕಾನೂನು ಬಾಹಿರ. ಇದನ್ನು ಯಾರೂ ಮಾಡುವಂತಿಲ್ಲ ಎಂದು ದಾವಣಗೆರೆ ಎಸ್ಪಿ ಹನುಮಂತರಾಯ ಎಚ್ಚರಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ದಾವಣಗೆರೆ(ಮೇ.19): ರಂಜಾನ್ ವೇಳೆ ಅನ್ಯ ಕೋಮಿನವರ ಅಂಗಡಿಯಲ್ಲಿ ಬಟ್ಟೆಖರೀದಿಸಬಾರದೆಂಬ ಮುಸ್ಲಿಂ ಧರ್ಮೀಯರ ವೀಡಿಯೋ ವೈರಲ್ ಆದ ಹಿನ್ನೆಲೆ ಕೆಟಿಜೆ ನಗರ, ಬಸವ ನಗರ, ಹರಿಹರ ನಗರದದಲ್ಲಿ ಒಟ್ಟು 3 ಪ್ರಕರಣ ದಾಖಲಾಗಿದ್ದು, 2 ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟ ಹನುಮಂತರಾಯ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಟಿಜೆ ನಗರ ಠಾಣೆ ಕೇಸ್‌ಗೆ ಸಂಬಂಧಿಸಿದಂತೆ ವಿನೋಬ ನಗರದ ಫಯಾಜ್ ಅಹಮದ್, ಸೈಯದ್ ಅಪಾಪ್ ಅಹಮ್ಮದ್ ಅಲಿಯಾಸ್ ಅಪು, ಇಮ್ತಿಯಾಜ್ ಹಾಗೂ ಮನ್ಸೂರ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಬಸವ ನಗರ ಠಾಣೆ ಕೇಸಿಗೆ ಸಂಬಂಧಿಸಿದಂತೆ ಚಾಮರಾಜ ಪೇಟೆಯ ಖಾಲಿದ್ ಪೈಲ್ವಾನ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಹರಿಹರ ನಗರ ಠಾಣೆ ಕೇಸಿಗೆ
ಸಂಬಂಧಿಸಿದಂತೆ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಕೆರೆ ಅನುದಾನ ಗೋಲ್‌ಮಾಲ್‌ಗೆ ಬ್ರೇಕ್ ಹಾಕಲು ಗ್ರಾಮಸ್ಥರ ಮಾಸ್ಟರ್ ಪ್ಲಾನ್..!
ರಂಜಾನ್ ಅಂಗವಾಗಿ ಮುಸ್ಲಿಂ ಮಹಿಳೆಯರು ಬಟ್ಟೆಖರೀದಿಗಾಗಿ ಬಟ್ಟೆ ಅಂಗಡಿಗೆ ಭೇಟಿ ನೀಡಿದ್ದ ವೇಳೆ ಮೇ.14ರಂದು ಬಡಾವಣೆ ಠಾಣೆ ವ್ಯಾಪ್ತಿಯ ಚೇತನ ಹೊಟೆಲ್ ರಸ್ತೆಯ ಬಿಎಸ್ ಚನ್ನಬಸಪ್ಪ ಬಟ್ಟೆಅಂಗಡಿ, ಬಸವ ನಗರ ಠಾಣೆ ವ್ಯಾಪ್ತಿಯ ಗಡಿಯಾರ ಕಂಬದ ಬಳಿ ವಿಜಯಲಕ್ಷ್ಮೀ ರಸ್ತೆಯ ಮಲಬಾರ್ ಕಾಟನ್ಸ್ ಹಾಗೂ ಹರಿಹರದ ದೇವಸ್ಥಾನ ರಸ್ತೆಯ ನವೀನ್ ಕಟ್‌ಪೀಸ್ ಬಟ್ಟೆಅಂಗಡಿಗಳ ಬಳಿ ಕೆಲ ಮುಸ್ಲಿಂ ಯುವಕರು ಅದೇ ಜನಾಂಗ ಕೆಲ ಮುಸ್ಲಿಂ
ಮಹಿಳೆಯರಿಗೆ ನಿಲ್ಲಿಸಿ, ಬಟ್ಟೆಕವರ್ ಬಿಸಾಡಿ, ಜೋರು ಮಾಡುವ ದೃಶ್ಯಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು ಎಂದು ತಿಳಿಸಿದರು.
ಪೊಲೀಸ್ ಇಲಾಖೆ ಗಮನಕ್ಕೆ ಈ ವಿಚಾರ ಬರುತ್ತಿದ್ದಂತೆ ಇಂತಹ ಘಟನೆಗಳು ಸಮಾಜದಲ್ಲಿ ಶಾಂತಿ ಕದಡುವ ರೀತಿ ಹಾಗೂ ಕಾನೂನನ್ನು ತಾವೇ ಕೈಗೆ ತೆಗೆದುಕೊಂಡು ಬಟ್ಟೆಅಂಗಡಿಗಳ ಬಂದು, ಯಾವುದೇ ವ್ಯಕ್ತಿಗೆ ನಿರ್ಬಂಧಿಸುವುದು ಕಾನೂನು ಬಾಹಿರ. ಇದನ್ನು ಯಾರೂ ಮಾಡುವಂತಿಲ್ಲ. ಇದನ್ನು ವೀಡಿಯೋ ಮಾಡಿ, ವಾಟ್ಸಪ್, ಫೇಸ್ ಬುಕ್‌ಗೆ ಹರಿಬಿಡುವುದರಿಂದ ಜನರಲ್ಲಿ ಭಯ, ಪ್ರಚೋದನೆ ನೀಡಿದಂತಾಗುತ್ತದೆ ಎಂದು ಅವರು ಎಚ್ಚರಿಸಿದರು.
ಇದಕ್ಕೆಲ್ಲಾ ಕಡಿವಾಣ ಹಾಕಲು ಕೆಟಿಜೆ ನಗರ, ಬಸವ ನಗರ, ಹರಿಹರ ನಗರ ಠಾಣೆಯಲ್ಲಿ ಒಟ್ಟು 3 ಕೇಸ್ ದಾಖಲಿಸಿ, 2 ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ವಿಚಾರಣೆಗೆ ವಶಕ್ಕೆ ಪಡೆಯಲಾಗಿದೆ. ವಿಚಾರಣೆ ಮುಂದುವರಿದಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದರು.
‘ನೈತಿಕ ಪೊಲೀಸ್ ಗಿರಿ’ಗೆ ಅವಕಾಶವಿಲ್ಲ: ಎಸ್ಪಿ ಖಡಕ್ ವಾರ್ನಿಂಗ್
ದಾವಣಗೆರೆ ನಗರ, ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿಗೆ ಅವಕಾಶವೇ ಇಲ್ಲ. ಯಾರಾದರೂ ಇಂತಹ ವರ್ತನೆ ತೋರಿದರೆ ಪೊಲೀಸ್ ಇಲಾಖೆ ಸಹಿಸುವುದೂ ಇಲ್ಲ ಎಂದು ಎಸ್ಪಿ ಹನುಮಂತರಾಯ ಕಿಡಿಗೇಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಯಾರೇ ಆಗಿದ್ದರೂ ಅಂತಹವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುವುದು ನಿಶ್ಚಿತ. ಕೊರೋನಾ ನಿಯಂತ್ರಣಕ್ಕೆ ಕೇಂದ್ರ-ರಾಜ್ಯ ಸರ್ಕಾರಗಳು, ವಿವಿಧ ಇಲಾಖೆಗಳ ನಿರ್ದೇಶನಗಳಿದ್ದು,
ಇಂತಹ ಪರಿಸ್ಥಿತಿಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತಹ ಘಟನೆಗಳಲ್ಲಿ ಯಾರೇ ಪಾಲ್ಗೊಂಡಿದ್ದರೂ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲೂ ಕೇಸ್ ದಾಖಲಿಸಿ, ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.