ಕೊಳಚೆ ಪ್ರದೇಶ ಸಮಸ್ಯೆ ಅಧ್ಯಯನಕ್ಕೆ ಸಮಿತಿ ರಚನೆ; ಸಚಿವ ಈಶ್ವರಪ್ಪ

By Kannadaprabha News  |  First Published May 19, 2020, 11:02 AM IST

ಶಿವಮೊಗ್ಗ ಪಾಲಿಕೆ ವ್ಯಾಪ್ತಿಯಲ್ಲಿ ಘೋಷಿಸಲಾಗಿರುವ ಹಾಗೂ ಘೋಷಿಸದಿರುವ ಕೊಳಚೆ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಅಗತ್ಯ ಸೌಲಭ್ಯ ಒದಗಿಸಿ, ಕಂದಾಯ ನಿಗ​ದಿಪಡಿಸುವ ಹಾಗೂ ಅಲ್ಲಿನ ಅರ್ಹ ನಿವಾಸಿಗಳಿಗೆ ಹಕ್ಕುಪತ್ರ ಒದಗಿಸುವ ಬಗ್ಗೆ ಸಮಿತಿಯ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಚಿವ ಈಶ್ವರಪ್ಪ ತಿಳಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 


ಶಿವಮೊಗ್ಗ(ಮೇ.19): ಮಹಾನಗರಪಾಲಿಕೆ ವ್ಯಾಪ್ತಿಯ ಘೋಷಿತ ಹಾಗೂ ಅಘೋಷಿತ ಕೊಳಚೆ ಪ್ರದೇಶಗಳಲ್ಲಿನ ಸಮಸ್ಯೆ ಕುರಿತು ವಾಸ್ತವ ವರದಿ ಪಡೆದು ಕ್ರಮ ಕೈಗೊಳ್ಳಲು ವಿಪ ಸದಸ್ಯ ಆಯನೂರು ಮಂಜುನಾಥ್‌ ಹಾಗೂ ಪ್ರಸನ್ನಕುಮಾರ್‌ ನೇತೃತ್ವದಲ್ಲಿ 10 ಜನರ ತಂಡ ರಚಿಸಲಾಗಿದೆ ಎಂದು ಸೋಮವಾರ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

ಕಾರ್ಪೊರೇಟರ್‌ಗಳು ಹಾಗೂ ಅಧಿ​ಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಾಲಿಕೆ ವ್ಯಾಪ್ತಿಯಲ್ಲಿ ಘೋಷಿಸಲಾಗಿರುವ ಹಾಗೂ ಘೋಷಿಸದಿರುವ ಕೊಳಚೆ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಅಗತ್ಯ ಸೌಲಭ್ಯ ಒದಗಿಸಿ, ಕಂದಾಯ ನಿಗ​ದಿಪಡಿಸುವ ಹಾಗೂ ಅಲ್ಲಿನ ಅರ್ಹ ನಿವಾಸಿಗಳಿಗೆ ಹಕ್ಕುಪತ್ರ ಒದಗಿಸುವ ಬಗ್ಗೆಯೂ ಸಮಿತಿ ವರದಿ ನೀಡಿದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇದರಿಂದಾಗಿ ಪಾಲಿಕೆಯ ಆದಾಯವೂ ಹೆಚ್ಚಾಗಲಿದೆ ಎಂದರು.

Tap to resize

Latest Videos

ಮುಂದಿನ ಒಂದು ವಾರದ ಅವ​ಧಿಯೊಳಗಾಗಿ ಪಾಲಿಕೆ ವ್ಯಾಪ್ತಿಯ ಯಾವುದೇ ವಾರ್ಡುಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಕಂಡುಬರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಅ​ಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು. ಆಶ್ರಯ ಮನೆ, ಚರಂಡಿಗಳ ನಿರ್ಮಾಣ ಮುಂತಾದ ಅಭಿವೃದ್ದಿ ಕಾರ್ಯಗಳಲ್ಲಿ ಕಾಮಗಾರಿ ಅಪೂರ್ಣವಾಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿಬರುತ್ತಿವೆ. ಅಂತಹ ಗುತ್ತಿಗೆದಾರರನ್ನು ಕರೆದು ಎಚ್ಚರಿಕೆ ನೀಡಬೇಕಲ್ಲದೆ ಅಂತಹ ಗುತ್ತಿಗೆದಾರರ ಮೇಲೆ ಕಾನೂನು ರೀತ್ಯ ಮೊಕದ್ದಮೆ ದಾಖಲಿಸಬೇಕು ಎಂದು ಹೇಳಿದರು.

ಮೊಬೈಲ್‌ ತರಂಗಾಂತರ ವೇಗ ಹೆಚ್ಚಿಸಲು ಅಗತ್ಯ ಕ್ರಮ: ಸಂಸದ ಬಿ.ವೈ.ರಾಘವೇಂದ್ರ

ನಗರದ ಬಹುತೇಕ ವಾರ್ಡುಗಳಲ್ಲಿ ಕೈಗೊಳ್ಳಲಾಗಿರುವ ಯುಜಿಡಿ ಕಾಮಗಾರಿ ಪೂರ್ಣಗೊಳ್ಳದೆ ಉಳಿದಿವೆ. ಅವುಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಇಂತಹ ಕಾರ್ಯನಿರ್ವಹಿಸುವಲ್ಲಿ ನಿರ್ಲಕ್ಷ್ಯ ವಹಿಸುವ ಅ​ಧಿಕಾರಿಗಳ ವರ್ತನೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದು ಎಚ್ಚರಿಸಿದ ಅವರು, ನಗರದ ಕೆಲವು ಭಾಗಗಳಲ್ಲಿ ಪಾಲಿಕೆಯ ಆಸ್ತಿ ಒತ್ತುವರಿಯಾಗಿರುವ ಬಗ್ಗೆ ದೂರುಗಳಿವೆ. ಆ ವಾರ್ಡಿನ ಪ್ರತಿನಿ​ಧಿಗಳು ಒತ್ತುವರಿಯಾದ ಆಸ್ತಿಗಳ
ವಿವರ ನೀಡುವಂತೆ ತಿಳಿಸಿದರು.

ಪ್ರತಿ ಮಳೆಗಾಲದಲ್ಲೂ ನಗರದ ರಾಜಕಾಲುವೆಗಳಲ್ಲಿ ನೀರು ತುಂಬಿ ಜನವಸತಿ ಪ್ರದೇಶಕ್ಕೆ ಹರಿದು ತೀವ್ರ ತೊಂದರೆ ಉಂಟು ಮಾಡುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ಈಗಾಗಲೇ ಆರಂಭಿಸಲಾಗಿರುವ ರಾಜಾಕಾಲುವೆಗಳ ಕಾಮಗಾರಿಗಳನ್ನು ಮಳೆ ಬೀಳುವುದರೊಳಗಾಗಿ ಅಥವಾ ಮುಂದಿನ 15ದಿನಗಳೊಳಗಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಪಾಲಿಕೆ ವ್ಯಾಪ್ತಿಯ 5 ಕೆರೆಗಳ ಅಭಿವೃದ್ಧಿ ಹಾಗೂ ಜಿಪಂ ವ್ಯಾಪ್ತಿಗೊಳಪಟ್ಟು
ನಗರದ ಒಟ್ಟು 72 ಕೆರೆಗಳಲ್ಲಿ 25 ಕೆರೆಗಳನ್ನು ಅಭಿವೃದ್ಧಿಗೆ ಉದ್ದೇಶಿಸಲಾಗಿದ್ದು, ಶೀಘ್ರದಲ್ಲಿ ಕಾಮಗಾರಿಗಳು ಆರಂಭಗೊಳ್ಳಲಿವೆ ಎಂದು ಹೇಳಿದರು.

ಪಾಲಿಕೆ ವಿರೋಧಪಕ್ಷದ ಮುಖಂಡ ಯೋಗೀಶ್‌ ಮಾತನಾಡಿ, ನಗರದ ರಾಜಾಕಾಲುವೆಗೆ ಶಿಕಾರಿಪುರದಲ್ಲಿ ಮಾಡಿರುವಂತೆ ಇಲ್ಲಿಯೂ ಸ್ಮಾರ್ಟ್‌ಸಿಟಿ ಯೋಜನೆಯಡಿ ಕವರ್‌ ಡಕ್ಟ್ ಮಾಡಲು ಕ್ರಮ ಕೈಗೊಳ್ಳಬೇಕು. ಇದರಿಂದ ನಗರದ ಸೌಂದರ್ಯ ಹೆಚ್ಚಲಿದೆ ಎಂದ ಅವರು, ನಿವೃತ್ತಿಯಿಂದ ತೆರವಾಗಿರುವ 124 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು. ಕೇಂದ್ರದ ಮೂಲಕ 14ನೇ ಹಣಕಾಸು ಯೋಜನೆಯಡಿ ಬರಬೇಕಾದ ಅನುದಾನ ನಿಧಾನವಾಗಿದ್ದು,
ಕೂಡಲೇ ಬಿಡುಗಡೆಗೆ ಸರ್ಕಾರಕ್ಕೆ ಒತ್ತಾಯಿಸಲು ಸಚಿವರಲ್ಲಿ ಮನವಿ ಮಾಡಿದರು.

ಮೇಯರ್‌ ಸುವರ್ಣ ಶಂಕರ್‌, ಉಪಮೇಯರ್‌ ಸುರೇಖಾ, ಆಯುಕ್ತ ಚಿದಾನಂದ ಎಸ್‌.ವಟಾರೆ, ವಿಪ ಸದಸ್ಯ ಆಯನೂರು ಮಂಜುನಾಥ್‌, ಆರ್‌.ಪ್ರಸನ್ನಕುಮಾರ್‌, ಚುನಾಯಿತ ಪ್ರತಿನಿ​ಧಿಗಳು, ಅ​ಧಿಕಾರಿಗಳು ಇದ್ದರು.

"

click me!