
ಬೆಂಗಳೂರು: ನಗರದ ಸಂಜಯನಗರದಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ. ಕಾರಿನ ಚಕ್ರಕ್ಕೆ ಸಿಲುಕಿ ಬೀದಿ ನಾಯಿ ರಾಕಿ ಅಲಿಯಾಸ್ ಕರಿಯಾ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಕಾರು ಚಾಲಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸ್ಥಳೀಯ ನಿವಾಸಿ ಜೀವಿಕಾ ಗೌಡ ಎಂಬುವವರು ನೀಡಿದ ದೂರಿನ ಆಧಾರದಲ್ಲಿ ಸಂಜಯನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರುದಾರರ ಮಾಹಿತಿ ಪ್ರಕಾರ, ಫೆಬ್ರವರಿ 11 ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ಇನೋವಾ KA 04 M1 9992 ಕಾರಿನ ಚಾಲಕ ನಿರ್ಲಕ್ಷ್ಯವಾಗಿ ವಾಹನ ಚಲಾಯಿಸಿದ್ದು, ರಸ್ತೆ ಮೇಲೆ ಇದ್ದ ನಾಯಿಯ ಮೇಲೆ ಕಾರು ಹತ್ತಿಸಿದ್ದಾನೆ. ಈ ಘಟನೆ ವೇಳೆ ನಾಯಿ ಕಾರಿನ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಯು ರಾಕಿ ಮೇಲೆ ಕಾರು ಹತ್ತಿಸಿದ ಬಳಿಕ ಅದನ್ನು ಉಳಿಸಲು ಯಾವುದೇ ಪ್ರಯತ್ನ ನಡೆಸದೇ ಅಲ್ಲಿಂದ ತೆರಳಿದ್ದಾನೆ ಎಂದು ಜೀವಿಕಾ ಗೌಡ ಆರೋಪಿಸಿದ್ದಾರೆ. ಈ ನಿರ್ಲಕ್ಷ್ಯ ಹಾಗೂ ಅಮಾನವೀಯ ವರ್ತನೆಯ ಹಿನ್ನೆಲೆಯಲ್ಲಿ ಕಾರು ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಸ್ಥಳೀಯ ನಿವಾಸಿಯ ದೂರಿನ ಆಧಾರದಲ್ಲಿ ಸಂಜಯನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ್ದಾರೆ. ಕಾರು ಚಾಲಕನ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಕೂಡ ಕೈಗೊಳ್ಳಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗೆ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ.