ಶೀತಲಗೃಹದಲ್ಲಿ ಇಟ್ಟು ರಕ್ಷಣೆ, ಬೆಲೆ ಬಂದಾಗ ಮಾರಾಟ, ರಫ್ತಿಗೆ ಸಿಎಂ ಯಡಿಯೂರಪ್ಪ ಸೂಚನೆ| ದೀರ್ಘ ಕಾಲದ ಸಂರಕ್ಷಿಸಲು ಸಾಧ್ಯವಾಗದಂತಹ ತರಕಾರಿ ಹಾಗೂ ಹಣ್ಣುಗಳನ್ನು ದೇಶದ ಇತರ ರಾಜ್ಯಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲು ಹಾಗೂ ವಿದೇಶಗಳಿಗೆ ರಫ್ತು ಮಾಡಲು ಯತ್ನಿಸುವಂತೆ ಸೂಚನೆ|
ಬೆಂಗಳೂರು(ಏ.24): ಕೊರೋನಾ ಪರಿಣಾಮ ದರ ಕುಸಿತದ ಸಂಕಷ್ಟಕ್ಕೆ ಸಿಲುಕಿರುವ ತರಕಾರಿ ಬೆಳೆಗಾರರ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ, ರೈತರಿಂದ ತರಕಾರಿ ಖರೀದಿ ಮಾಡಿ ಶೀತಲಗೃಹದಲ್ಲಿ ಸಂಗ್ರಹಿಸಲು ಮುಂದಾಗಿದೆ.
ನಗರದಲ್ಲಿ ಗುರುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಬಗೆಗೆ ಸ್ಪಷ್ಟ ಸೂಚನೆ ನೀಡಿದ್ದು, ಸಂರಕ್ಷಿಸಲು ಸಾಧ್ಯವಿರುವ ತರಕಾರಿಗಳನ್ನು ಖರೀದಿ ಮಾಡಿ ಶೀತಲ ಗೃಹದಲ್ಲಿಟ್ಟು, ಬೆಲೆ ಬಂದಾಗ ಮಾರಾಟ ಮಾಡಬೇಕು ಎಂದು ತಿಳಿಸಿದ್ದಾರೆ.
ಅಲ್ಲದೆ, ದೀರ್ಘ ಕಾಲದ ಸಂರಕ್ಷಿಸಲು ಸಾಧ್ಯವಾಗದಂತಹ ತರಕಾರಿ ಹಾಗೂ ಹಣ್ಣುಗಳನ್ನು ದೇಶದ ಇತರ ರಾಜ್ಯಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಲು ಹಾಗೂ ವಿದೇಶಗಳಿಗೆ ರಫ್ತು ಮಾಡಲು ಯತ್ನಿಸುವಂತೆ ಸೂಚಿಸಿದ್ದಾರೆ.
ಕೊರೋನಾ ಅಟ್ಟಹಾಸ: 'ಸೋಂಕು ನಿಯಂತ್ರಣಕ್ಕೆ ಬಂದ್ರೆ ಮಾತ್ರ ಲಾಕ್‌ಡೌನ್ ವಾಪಸ್'
ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ, ಕುಂಠಿತಗೊಂಡ ಅಭಿವೃದ್ಧಿ ಕಾಮಗಾರಿ, ನಷ್ಟಕ್ಕೆ ಸಿಲುಕಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಹಾಗೂ ಪ್ರವಾಸೋದ್ಯಮಕ್ಕೆ ಚೇತರಿಕೆ ನೀಡುವ ಉದ್ದೇಶದಿಂದ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಮುಖ್ಯಮಂತ್ರಿಯವರು ಹಲವು ನಿರ್ದೇಶನಗಳನ್ನು ನೀಡಿದರು. ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ತುರ್ತಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ತುರ್ತು ಕ್ರಮ ಕೈಗೊಳ್ಳಬೇಕು. ರಾಜ್ಯದ ಅಣೆಕಟ್ಟೆಗಳಲ್ಲಿ ಹೆಚ್ಚು ನೀರು ಸಂಗ್ರಹವಾಗಿದ್ದರೆ, ಅದನ್ನು ರೈತರ ಬೆಳೆಗಳಿಗೆ ಮತ್ತು ಕುಡಿಯುವ ನೀರಿಗೆ ಹರಿಸುವಂತೆ ಸೂಚಿಸಿದರು.
ಕಳೆದ ವರ್ಷ ರಾಜ್ಯ ಅತಿವೃಷ್ಟಿಹಾಗೂ ಅನಾವೃಷ್ಟಿಯಿಂದ ಅನುಭವಿಸಿದ ಸಮಸ್ಯೆ ಮರುಕಳಿಸದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಅಣೆಕಟ್ಟೆಗಳಲ್ಲಿ ಇರುವ ನೀರಿನ ಮಾಹಿತಿಯನ್ನು ನಿತ್ಯ ಪಡೆದುಕೊಳ್ಳುವಂತೆ ತಾಕೀತು ಮಾಡಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೊಬ್ಬರಕ್ಕೆ ಬೇಡಿಕೆ ಕಡಿಮೆ ಇರುವುದರಿಂದ ಇರುವ ಬೆಲೆಗಿಂತ ರೈತರಿಗೆ ಕಡಿಮೆ ಬೆಲೆಗೆ ಗೊಬ್ಬರ ಮಾರಾಟ ಮಾಡಲಾಗುವುದು ಎನ್ನುವುದನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಮನದಟ್ಟು ಮಾಡಿದ್ದಾರೆ. ಅದನ್ನು ರೈತರಿಗೆ ಮನವರಿಕೆ ಮಾಡಿ ಆತಂಕ ದೂರ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಕೋವಿಡ್‌ನಿಂದಾಗಿ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುವುದರಿಂದ ದೇಶಿಯ ಪ್ರವಾಸಿಗರನ್ನು ಆಕರ್ಷಿಸಲು ಗಮನಹರಿಸಬೇಕು. ಇದಲ್ಲದೇ, ಕೋವಿಡ್ ಇಲ್ಲದಿರುವ ಪ್ರವಾಸಿ ತಾಣಗಳ ಬಗ್ಗೆ ಹೆಚ್ಚು ಪ್ರಚಾರ ನೀಡಿ ಪ್ರವಾಸಿಗರನ್ನು ಸೆಳೆಯಬೇಕು ಎಂದು ತಿಳಿಸಿದರು.
ದೂರದರ್ಶನದ ಮೂಲಕ ಮಕ್ಕಳಿಗೆ ಪಾಠ ಮಾಡುವುದು ಸೇರಿದಂತೆ ಇತರ ಶೈಕ್ಷಣಿಕ ಚಟುವಟಿಕೆಗಳನ್ನು ಶಾಲೆ ತೆರೆಯುವವರೆಗೆ ನಡೆಸಬೇಕು. ಸಾರಿಗೆ ಇಲಾಖೆಯಲ್ಲಿ ಕೋವಿಡ್‌ನಿಂದ ಬಸ್ ಸಂಚಾರ ಕಡಿಮೆ ಇರುವುದರಿಂದ ಕೆಎಸ್‌ಆರ್‌ಟಿಸಿ ನೂರಾರು ಕೋಟಿ ರು. ನಷ್ಟದಲ್ಲಿದೆ. ಹೀಗಾಗಿ ಬಸ್‌ಗಳನ್ನು ಗೂಡ್ಸ್ ಸಾರಿಗೆಯಾಗಿ ಬಳಸಿಕೊಂಡು ಅದರ ಮೂಲಕ ಆದಾಯ ಗಳಿಸಲು ಯತ್ನಿಸಲು ಅವರು ಸೂಚಿಸಿದರು.
ಬಳಕೆ ಆಗದ ಸರ್ಕಾರಿ ಜಮೀನು ವಶಕ್ಕೆ ಸಿಎಂ ಬಿಎಸ್‌ವೈ ಸೂಚನೆ
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ವಿವಿಧ ಸಂಘ ಸಂಸ್ಥೆಗಳು ಸರ್ಕಾರಿ ಜಾಗವನ್ನು ಗುತ್ತಿಗೆ ಪಡೆದು, ಗುತ್ತಿಗೆ ಷರತ್ತು ಉಲ್ಲಂಘಿಸಿರುವಂತಹ ಪ್ರಕರಣಗಳಿದ್ದರೆ ಅವುಗಳನ್ನು ಪತ್ತೆ ಮಾಡಬೇಕು. ಅಂತಹ ಸಂಘ ಸಂಸ್ಥೆಗಳಿಂದ ಸರ್ಕಾರಿ ಜಮೀನು ಹಿಂಪಡೆಯಲು ಕ್ರಮ ಕೈಗೊಳ್ಳುವಂತೆಯೂ ಯಡಿಯೂರಪ್ಪ ಅವರು ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.