ಚಿಕ್ಕಬಳ್ಳಾಪುರ ಜಿಲ್ಲೆಯ ರೇಷ್ಮೆ ಸೀರೆಗೆ ರಾಜ್ಯ ಪ್ರಶಸ್ತಿಯ ಗರಿ

By Kannadaprabha News  |  First Published Aug 4, 2021, 9:50 AM IST
  • ಆಧುನಿಕತೆಗೆ ಸವಾಲೊಡ್ಡುವ ರೀತಿಯಲ್ಲಿ ಕೈ ಮಗ್ಗದಲ್ಲಿ ಅಪ್ಪಟ ರೇಷ್ಮೆ
  • ಎಂಬೋಜ್‌  ಬ್ರೋಕೆಡ್‌ ಕುಟ್ಟು ಸೀರೆಯನ್ನು ವಿಶಿಷ್ಟ ಮತ್ತು ವಿಭಿನ್ನ ವಿನ್ಯಾಸದಲ್ಲಿ ನೇಯ್ಗೆ
  • ಬಾಗೇಪಲ್ಲಿ ತಾಲೂಕಿನ ಬೋಯಿಪಲ್ಲಿ ಗ್ರಾಮದ ಕೈ ಮಗ್ಗ ನೇಕಾರ ವೆಂಕಟರವಣ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

 ಚಿಕ್ಕಬಳ್ಳಾಪುರ (ಆ.03): ಆಧುನಿಕತೆಗೆ ಸವಾಲೊಡ್ಡುವ ರೀತಿಯಲ್ಲಿ ಕೈ ಮಗ್ಗದಲ್ಲಿ ಅಪ್ಪಟ ರೇಷ್ಮೆ ಎಂಬೋಜ್‌  ಬ್ರೋಕೆಡ್‌ ಕುಟ್ಟು ಸೀರೆಯನ್ನು ವಿಶಿಷ್ಟ ಮತ್ತು ವಿಭಿನ್ನ ವಿನ್ಯಾಸದಲ್ಲಿ ನೇಯ್ಗೆ ಮಾಡುವ ಮೂಲಕ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಬೋಯಿಪಲ್ಲಿ ಗ್ರಾಮದ ಕೈ ಮಗ್ಗ ನೇಕಾರ ವೆಂಕಟರವಣ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

ಇವರ ಸಾಧನೆಗೆ ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದ್ದು, 2021-22 ನೇ ಸಾಲಿನಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನಕ್ಕೆ ಇವರ ರೇಷ್ಮೆ ಸೀರೆಯನ್ನು ಆಯ್ಕೆ ಮಾಡುವ ಮೂಲಕ ನಗದು ಬಹುಮಾನದ ಘೋಷಣೆ ಮಾಡಿದೆ. ಆ. 7 ರಂದು ಬೆಂಗಳೂರಿನ ವಿಕಾಸಸೌಧದಲ್ಲಿ ನಡೆಯುವ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಜಿಲ್ಲೆಯ ನೇಕಾರನಿಗೆ ಸನ್ಮಾನದ ಗೌರವ ಸಮರ್ಪಣೆ ಆಗಲಿದೆ.

Tap to resize

Latest Videos

ಕಾಂಜಿವರಂ, ರೇಷ್ಮೆ ಸೀರೆ ಬಹುಕಾಲದವರೆಗೆ ಹಾಳಾಗದಂತೆ ಕಾಪಾಡೋದು ಹೇಗೆ?

ಯಾರು ಇವರು?

ಜಿಲ್ಲೆಯ ಅತ್ಯಂತ ಹಿಂದುಳಿದ ತಾಲೂಕಾದ ಬಾಗೇಪಲ್ಲಿ ತಾಲೂಕು ಬಿಳ್ಳೂರು ಅಂಚೆ ವ್ಯಾಪ್ತಿಯ 44 ವರ್ಷ ವಯೋಮಾನದ ವೆಂಕಟರವಣ ಅವರು ಕಳೆದ 20 ವರ್ಷಗಳಿಂದ ಕೈ ಮಗ್ಗ ನೇಯ್ಗೆಯಲ್ಲಿ ತೊಡಗಿಕೊಂಡಿದ್ದಾರೆ. ಕೈ ಮಗ್ಗದ ಮೂಲಕ ಅಪ್ಪಟ ರೇಷ್ಮೆ ಸೀರೆಗಳನ್ನು ವರ್ಣರಂಜಿತ ವಿನ್ಯಾಸ ಮತ್ತು ವಿಭಿನ್ನ, ವಿನೂತನ ಶೈಲಿಯಲ್ಲಿ ನೇಯ್ಗೆ ಮಾಡುವ ಕೌಶಲ್ಯವನ್ನು ಕರಗತ ಮಾಡಿಕೊಂಡಿದ್ದಾರೆ. ಈ ಬಾರಿ ರಾಜ್ಯಮಟ್ಟದಲ್ಲಿ ವೆಂಕರವಣ ನೇಯ್ಗೆ ಮಾಡಿರುವ ರೇಷ್ಮೆ ಸೀರೆ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲೆಯ ಕೀರ್ತಿಯನ್ನು ಎತ್ತಿಹಿಡಿದಿದೆ.

ರೇಷ್ಮೆ ಸೀರೆ ಬೆಲೆ ಎಷ್ಟು?

ವೆಂಕಟರವಣ ತಮ್ಮ ಕೈಚಳಕದಲ್ಲಿ ನೇಯ್ಗೆ ಮಾಡುವ ರೇಷ್ಮೆ ಸೀರೆ ಬೆಲೆ ಬರೋಬ್ಬರಿ 20 ಸಾವಿರ ರು., ಶುದ್ಧ ರೇಷ್ಮೆ ಬಳಸಿ ಸೀರೆಯನ್ನು ಕೈಮಗ್ಗದಲ್ಲಿ ನೇಯ್ಗೆ ಮಾಡಲು 10 ದಿನಗಳ ಅವಧಿ ಬೇಕಾಗುತ್ತದೆ. ನೆರೆಯ ಆಂಧ್ರದ ಧರ್ಮಾವರಂನಿಂದ ರೇಷ್ಮೆ ಸೀರೆಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಖರೀದಿಸುವ ಈ ನೇಕಾರ, ಮಾರುಕಟ್ಟೆಗೆ ಧರ್ಮಾವರಂ, ಬೆಂಗಳೂರು ನಗರಗಳನ್ನು ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ.

 ಬೆಂಗಳೂರಿನ ವಿಕಾಸ ಸೌಧದಲ್ಲಿ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಂದು ನಡೆಯುವ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತ ನೇಕಾರ ವೆಂಕಟರವಣ ಅವರಿಗೆ ಗೌರವ ಸನ್ಮಾನದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಪ್ರಶಸ್ತಿ 25 ಸಾವಿರ ರೂಪಾಯಿ ನಗದು, ಸ್ಮರಣಿಕೆ ಮತ್ತು ಪ್ರಮಾಣಪತ್ರವನ್ನು ಒಳಗೊಂಡಿರುತ್ತದೆ. ವಿಶಿಷ್ಟಕೌಶಲ್ಯದ ನೇಕಾರ ವೆಂಕಟರವಣ ರನ್ನು ಗುರುತಿಸಿ 2019-20 ನೇ ಸಾಲಿನಲ್ಲಿ ರಾಷ್ಟ್ರೀಯ ಕೈ ಮಗ್ಗ ದಿನಾಚರಣೆಯ ಪ್ರಯುಕ್ತ ಜಿಲ್ಲಾಡಳಿತ ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಗಿತ್ತು ಎಂದು ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಶಿವಕುಮಾರ್‌ ತಿಳಿಸಿದ್ದಾರೆ.

click me!