
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಮಾ.11): ಬಿಬಿಎಂಪಿ ವ್ಯಾಪ್ತಿಗೆ ಹೊಸ ಗ್ರಾಮ, ಪ್ರದೇಶಗಳನ್ನು ಸೇರ್ಪಡೆಗೆ ಸಂಬಂಧಿಸಿದಂತೆ ‘ವಾರ್ಡ್‌ಗಳ ಪುನರ್ ವಿಂಗಡಣಾ ಸಮಿತಿ’ಯು ನಗರದ ಶಾಸಕರಿಂದ ಪ್ರಸ್ತಾವನೆ ಪಡೆಯಲು ನಿರ್ಧರಿಸಿದ್ದು, ಈಗಾಗಲೇ ಮಹದೇವಪುರ ವಿಧಾನಸಭಾ ಕ್ಷೇತ್ರದ 20 ಗ್ರಾಮಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆ ಮಾಡುವಂತೆ ಪ್ರಸ್ತಾವನೆ ಬಂದಿದೆ. ಈ ಮೂಲಕ ಬಿಬಿಎಂಪಿ ವ್ಯಾಪ್ತಿ ಹಾಗೂ ವಾರ್ಡ್‌ಗಳ ಪುನರ್ ರಚನೆ ಕಾರ್ಯ ಆರಂಭಗೊಂಡಂತಾಗಿದೆ.
‘ಕನ್ನಡಪ್ರಭ’ಕ್ಕೆ ಲಭ್ಯ ಮಾಹಿತಿ ಪ್ರಕಾರ ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಒಟ್ಟು 7 ಗ್ರಾಮ ಪಂಚಾಯಿತಿಯ 20 ಗ್ರಾಮಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆ ಮಾಡುವಂತೆ ಸಚಿವ ಅರವಿಂದ ಲಿಂಬಾವಳಿ ಅವರು ರಾಜ್ಯ ಸರ್ಕಾರ ಬಿಬಿಎಂಪಿ ಆಯುಕ್ತರ ಅಧ್ಯಕ್ಷತೆಯ ‘ವಾರ್ಡ್ ಪುನರ್ ವಿಂಗಡಣಾ ಸಮಿತಿ’ಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಉಳಿದ ಶಾಸಕರು ಸಹ ಈ ಬಗೆಗಿನ ಪ್ರಕ್ರಿಯೆ ಆರಂಭಿಸಿದ್ದು, ಶೀಘ್ರವೇ ಸಮಿತಿಗೆ ತಮ್ಮ ಶಿಫಾರಸು ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ರಾಜ್ಯ ಸರ್ಕಾರವು ಬೆಂಗಳೂರಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ರಚನೆ ಮಾಡಿ, ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಏರಿಕೆಗೆ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಹೊಂದಿಕೊಂಡಿರುವ ಗ್ರಾಮ ಮತ್ತು ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಂಡು ವಾರ್ಡ್‌ಗಳನ್ನು ಪುನರ್ ವಿಂಗಡಣೆಗೆ ಬಿಬಿಎಂಪಿ ಆಯುಕ್ತರ ಅಧ್ಯಕ್ಷತೆಯ ವಿಂಗಡಣಾ ಸಮಿತಿಗೆ ಆರು ತಿಂಗಳ ಅವಕಾಶ ನೀಡಿ ಸರ್ಕಾರ ಆದೇಶಿಸಿತ್ತು. ಈಗಾಗಲೇ ನಾಲ್ಕು ತಿಂಗಳು ಪೂರ್ಣಗೊಂಡಿದ್ದು, ಇನ್ನು ಎರಡು ತಿಂಗಳು ಮಾತ್ರ ಬಾಕಿ ಇದೆ. ಹೀಗಾಗಿ ವಾರ್ಡ್ ಪುನರ್ ವಿಂಗಡಣಾ ಸಮಿತಿಯು ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆ ಮಾಡಬಹುದಾದ ಗ್ರಾಮ ಹಾಗೂ ಪ್ರದೇಶಗಳ ಮಾಹಿತಿ ನೀಡುವಂತೆ ಬಿಬಿಎಂಪಿ ಹೊರ ವಲಯದ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಶಾಸಕರಿಗೆ ಕೋರಿದೆ.
ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹ ದಾಖಲೆ?
ಹೊಸ ಪ್ರದೇಶ ಸೇರ್ಪಡೆಯೇ ಮೊದಲ ಹಂತ:
ಬಿಬಿಎಂಪಿ ಪುನರ್ ರಚನೆಗೆ ಹೊಸ ಪ್ರದೇಶ ಸೇರ್ಪಡೆ ಮೊದಲ ಹಂತವಾಗಿದೆ. ಯಾವ ಯಾವ ಪ್ರದೇಶಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕೆಂಬುದು ಅಂತಿಮಗೊಂಡರೆ ನಂತರ 198 ವಾರ್ಡ್‌ಗಳಲ್ಲಿ ಸುಲಭವಾಗಿ 243ಕ್ಕೆ ಏರಿಕೆ ಮಾಡಬಹುದಾಗಿದೆ. ಬಿಬಿಎಂಪಿ ವ್ಯಾಪ್ತಿಯ ಒಟ್ಟು ಜನ ಸಂಖ್ಯೆಯನ್ನು 243 ವಾರ್ಡ್‌ಗೆ ಸಮಾನವಾಗಿ ಹಂಚಿಕೆ ಮಾಡಿ, ಗಡಿ ಗುರುತಿಸಿ ವಾರ್ಡ್ ಪುನರ್ ವಿಂಗಡಣೆ ಮಾಡಲಾಗುವುದು ಎಂದು ವಾರ್ಡ್ ಪುನರ್ ವಿಂಗಡನಾ ಸಮಿತಿ ಅಧ್ಯಕ್ಷ ಎನ್.ಮಂಜುನಾಥ ಪ್ರಸಾದ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.ವಿಧಾನಮಂಡಲ ಅಧಿವೇಶನ ಮುಕ್ತಾಯಗೊಳ್ಳುತ್ತಿದ್ದಂತೆ ಬಿಬಿಎಂಪಿ ವ್ಯಾಪ್ತಿಯ ಶಾಸಕರಿಂದ ಪ್ರಸ್ತಾವನೆಗಳನ್ನು ಪಡೆದು ಬಿಬಿಎಂಪಿ ಪುನರ್ ವಿಂಗಡಣೆ ಕಾರ್ಯ ಆರಂಭಿಸಲಾಗುವುದು. ನಿಗಧಿತ ಅವಧಿಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ವಾರ್ಡ್ ಪುನರ್ ವಿಂಗಡಣಾ ಸಮಿತಿ ಅಧ್ಯಕ್ಷ ಎನ್.ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ಪ್ರಸ್ತಾವನೆಯಲ್ಲಿರುವ 20 ಗ್ರಾಮಗಳ ವಿವರ
ಗ್ರಾಮ ಪಂಚಾಯಿತಿ ಗ್ರಾಮಗಳು ಗ್ರಾಮ ಸಂಖ್ಯೆ
ಹಾಲನಾಯಕನ ಹಳ್ಳಿ ಹಾಲನಾಯಕನ ಹಳ್ಳಿ, ಹಾಡು ಸಿದ್ದಾಪುರ, ಚಿಕ್ಕನಾಯಕನಹಳ್ಳಿ 3
ಕೊಡತಿ ಕೊಡತಿ, ಸೂಲನಕುಂಟೆ, ಸೂಲನಕುಂಟೆ ಕಾಲೋನಿ, ಮುಳ್ಳೂರು, ಕಾಚಮಾರನಹಳ್ಳಿ, ವಾಲೆಪುರ 6
ಬಿದರಳ್ಳಿ ಮಾರಗೊಂಡನಹಳ್ಳಿ 1
ಕಿತ್ತಗನೂರು ಕಿತ್ತಗನೂರು, ಹಳೆಹಳ್ಳಿ, ಕುರುಡು ಸೊಣ್ಣಪ್ಪನಹಳ್ಳಿ 3
ಸೀಗೆಹಳ್ಳಿ ಸೀಗೆಹಳ್ಳಿ, ಕೆ.ದೊಮಸಂದ್ರ 2
ಕನ್ನಮಂಗಲ ಕನ್ನಮಂಗಲ, ಕಾಜಿಸೊನ್ನೆನಹಳ್ಳಿ 2
ಆವಲಹಳ್ಳಿ ಆವಲಹಳ್ಳಿ, ಚಿಮ್ಮಸಂದ್ರ ವಿರೇನಹಳ್ಳಿ 3