* ಸದ್ಯ 4 ದಿನ ಸಂಚಾರ, ಮುಂದೆ ವಾರದ 7 ದಿನಗಳಲ್ಲಿ ಸೇವೆ ಸಲ್ಲಿಸಲಿ
* ಸಾರ್ವಜನಿಕರಿಗೆ ಅನುಕೂಲವಾಗಲು ಬೆಳಿಗ್ಗೆ ಹಾಗೂ ಸಂಜೆ ಸೇವೆ ನೀಡಲಿ
* ಬೀದರ್‌ನಿಂದ ವಿಮಾನ ಸೇವೆಗೆ ಚಾಲನೆ ನೀಡಿದ ಕೇಂದ್ರ ಸಚಿವ ಖೂಬಾ
ಬೀದರ್(ಜೂ.15): ಕಳೆದ ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದ ನಾಗರಿಕ ವಿಮಾನ ಯಾನ ಸೇವೆ ಬುಧವಾರದಿಂದ ಮತ್ತೆ ಪುನರಾಂಭವಾಗಿದ್ದು ಜಿಲ್ಲೆಯ ಜನರಿಗೆ ಸಂತಸ ತಂದಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅಭಿಪ್ರಾಯ ವ್ಯಕ್ತಪಡಿಸಿದರು.
ಬುಧವಾರ ಬೀದರ್ ವಿಮಾನ ನಿಲ್ದಾಣದಲ್ಲಿ ಬೀದರ್ ಬೆಂಗಳೂರು ಮಧ್ಯ ಪುನರ್ ಪ್ರಾರಂಭಿಸಿರುವ ಸ್ಟಾರ್‌ಏರ್ ವಿಮಾನ ಸೇವೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 2008ರಲ್ಲಿಯೇ ಇಲ್ಲಿ ಟರ್ಮಿನಲ್ ನಿರ್ಮಾಣ ಮಾಡಲಾಗಿತ್ತು ಅನೇಕ ಸರ್ಕಾರ ಮತ್ತು ಜನಪ್ರತಿನಿಧಿಗಳು ಬಂದರೂ ಕಾರ್ಯ ಪ್ರಾರಂಭವಾಗಿರಲಿಲ್ಲ ಎಂದರು.
ಜೂ. 15ರಿಂದ ವಿಮಾನಯಾನ ಸೇವೆ ಆರಂಭ: ಬೆಂಗ್ಳೂರಿಂದ ಬೀದರ್‌ಗೆ ಬರೀ 50 ನಿಮಿಷ ಸಾಕು..!
ತಾವು 2014ರಲ್ಲಿ ಸಂಸದರಾಗಿ ಸತತ ಪ್ರಯತ್ನ ಮಾಡಿ 2020ರ ಫೆಬ್ರವರಿ 7ರಂದು ಬೀದರ್ ಬೆಂಗಳೂರು ಮಧ್ಯ ಮೊದಲ ವಿಮಾನ ಸೇವೆ ಆರಂಭಿಸಲಾಯಿತು. ಆದರೆ ಕೊವಿಡ್ ಮತ್ತಿತರ ಕಾರಣಗಳಿಂದ ಟ್ರೂಜೆಟ್ ವಿಮಾನ ಸೇವೆ ನಿಲ್ಲಿಸಲಾಯಿತು.
ಇಂದು ಸ್ಟಾರ್‌ಏರ್‌ನವರು ಕೇಂದ್ರ ಸರ್ಕಾರದ ಮನವಿಯಂತೆ ಬೀದರ್ ಜಿಲ್ಲೆಗೆ ತಮ್ಮ ಸೇವೆಯನ್ನು ವಾರದಲ್ಲಿ 4 ದಿನ ಒದಗಿಸಿತ್ತಿದ್ದು, ಮುಂದಿನ ದಿನಮಾನಗಳಲ್ಲಿ ವಾರದ 7 ದಿನ ತಮ್ಮ ವಿಮಾನ ಸೇವೆಯನ್ನು ಜಿಲ್ಲೆಯ ಜನರಿಗೆ ಒದಗಿಸಬೇಕು ಹಾಗೂ ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ಈ ವಿಮಾನ ಸೇವೆ ನೀಡಬೇಕೆಂದು ಸ್ಟಾರ್‌ಏರ್ ಅವರಲ್ಲಿ ಮನವಿ ಮಾಡಿದರು.
Prophet Row: ನೂಪುರ್ ಶರ್ಮಾ ಬಂಧನಕ್ಕೆ ಆಗ್ರಹಿಸಿ ಬೀದರ್‌ನಲ್ಲಿ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ
ಉಡಾನ್ ಯೋಜನೆಯಲ್ಲಿ ಸ್ಟಾರ್‌ಏರ್ ವಿಮಾನ ಸೇವೆ ಒದಗಿಸಲಾಗುತ್ತಿದ್ದು, ಪ್ರಯಾಣಿಕರು ಕಡಿಮೆ ಇದ್ದರೂ ಅವರು ನಿರಂತರವಾಗಿ ಸೇವೆ ಒದಗಿಸುತ್ತಾರೆ. ಈ ಸೇವೆ ಬೆಳಿಗ್ಗೆ ಮತ್ತು ಸಂಜೆ ಮಾಡಿದರೆ ಇನ್ನೂ ಅನುಕೂಲವಾಗಲಿದೆ ಮತ್ತು ಬೀದರ್ ವಿಮಾನ ನಿಲ್ದಾಣದ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಸ್ಟಾರ್‌ಏರ್‌ನ ವ್ಯವಸ್ಥಾಪಕ ಮಂಡಳಿಯವರು ನಮ್ಮ ಜಿಲ್ಲೆಗೆ ಉತ್ತಮ ಸೇವೆ ಕೊಡಬೇಕು, ಇದನ್ನು ಪುನರಾಂಭಿಸಿದ್ದಕ್ಕೆ ಜಿಲ್ಲೆಯ ಜನರ ಪರವಾಗಿ ಸಚಿವರು ಅಭಿನಂದನೆಗಳನ್ನು ಸಲ್ಲಿಸಿದರು.
ಬೆಂಗಳೂರಿನಿಂದ ಬಂದ ಮೊದಲ ಸ್ಟಾರ್‌ಏರ್ ವಿಮಾನದಲ್ಲಿ 49 ಪ್ರಯಾಣಿಕರು ಆಗಮಿಸಿದರೆ, ಬೀದರ್‌ನಿಂದ 42 ಪ್ರಯಾಣಿಕರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ವಿಮಾನ ಸೇವೆಯ ಆರಂಭ ತುಂಬಾ ಚೆನ್ನಾಗಿ ಆಗಿದೆ ಎಂದು ಸ್ಟಾರ್‌ಏರ್ ಸಂಸ್ಥೆ ಪ್ರಮುಖರು ಹೇಳಿದರು. ಬೀದರ್‌ನಿಂದ ಬೆಂಗಳೂರಿಗೆ ಮೊದಲ ಟಿಕೆಟ್ ಬುಕ್ ಮಾಡಿದ್ದ ಮಹ್ಮದ ಮುರ್ತುಜಾ ಖಾನ್ ಎಂಬ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್‌ನ್ನು ಸಚಿವರು ಹಾಗೂ ಗಣ್ಯರು ವಿತರಿಸಿದರು.
ಕಾರ್ಯಕ್ರಮದಲ್ಲಿ ಎಒಸಿ ಸಮೀರ ಸೋಂದಿ, ಕೆಎಸ್‌ಐಐಡಿಸಿ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಶಾಸಕ ರಹೀಮ್ ಖಾನ್, ಬುಡಾ ಅಧ್ಯಕ್ಷ ಬಾಬು ವಾಲಿ, ಎಸ್‌ಪಿ ಡೆಕ್ಕಾ ಕಿಶೋರ ಬಾಬು, ಬೀದರ್ ವಿಮಾನ ನಿಲ್ದಾಣದ ನಿರ್ದೇಶಕ ಅಮಿತ್ ಮಿಶ್ರಾ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಸ್ಟಾರ್‌ಏರ್ ಹಿರಿಯ ವ್ಯವಸ್ಥಾಪಕರಾದ ಕಿರಣ ಸೇರಿದಂತೆ ಇತರರು ಉಪಸ್ಥಿತರಿದ್ದರು.