ಸಮವಸ್ತ್ರದ ಗುಣಮಟ್ಟಚನ್ನಾಗಿಲ್ಲ - ಮಕ್ಕಳಿಗೆ ಒಳ್ಳೆ ಬಟ್ಟೆಕೊಡಿಸಿ : ಕೃಷ್ಣಪ್ಪ

By Kannadaprabha News  |  First Published Aug 2, 2023, 4:27 AM IST

ಶಾಲಾ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಮಫತ್‌ ಲಾಲ್‌ ಬಟ್ಟೆಯಲ್ಲಿ ಸಮವಸ್ತ್ರ ಕೊಡುಸ್ರೀ, ಮಕ್ಕಳು ಚನ್ನಾಗಿ ಕಾಣ್ಲಿ. ಈಗಿರುವ ಬಟ್ಟೆಗಳು ಮೂರು ತಿಂಗಳಿಗೇ ಹರಿದು ಹೋಗುತ್ವೆ. ಬಣ್ಣ ಮಾಸುತ್ತೆ. ನೋಡಕ್ಕೇ ಆಗಲ್ಲ. ಹಾಗಾಗಿ ಒಳ್ಳೆ ಗುಣಮಟ್ಟದ ಮಫತ್‌ ಲಾಲ್‌ನ ಬಟ್ಟೆಯನ್ನೇ ಕೊಡಿಸಿ.


 ತುರುವೇಕೆರೆ :  ಶಾಲಾ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಮಫತ್‌ ಲಾಲ್‌ ಬಟ್ಟೆಯಲ್ಲಿ ಸಮವಸ್ತ್ರ ಕೊಡುಸ್ರೀ, ಮಕ್ಕಳು ಚನ್ನಾಗಿ ಕಾಣ್ಲಿ. ಈಗಿರುವ ಬಟ್ಟೆಗಳು ಮೂರು ತಿಂಗಳಿಗೇ ಹರಿದು ಹೋಗುತ್ವೆ. ಬಣ್ಣ ಮಾಸುತ್ತೆ. ನೋಡಕ್ಕೇ ಆಗಲ್ಲ. ಹಾಗಾಗಿ ಒಳ್ಳೆ ಗುಣಮಟ್ಟದ ಮಫತ್‌ ಲಾಲ್‌ನ ಬಟ್ಟೆಯನ್ನೇ ಕೊಡಿಸಿ.

ಹೀಗೆ ಹೇಳಿದ್ದು ಶಾಸಕ ಎಂ.ಟಿ.ಕೃಷ್ಣಪ್ಪ. ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಸಮವಸ್ತ್ರದ ಗುಣಮಟ್ಟಚನ್ನಾಗಿಲ್ಲ ಎಂದು ಕೃಷ್ಣಪ್ಪ ಬಿಇಒ ಪದ್ಮನಾಭ್‌ಗೆ ಶೈಕ್ಷಣಿಕ ಪ್ರಗತಿ ಬಗ್ಗೆ ಪ್ರಶ್ನೆ ಕೇಳುತ್ತಿದ್ದ ಸಂದರ್ಭದಲ್ಲಿ ಮಕ್ಕಳಿಗೆ ಮಫತ್‌ ಲಾಲ್‌ ಬಟ್ಟೆಕೊಡಿ ಎಂದು ಸಲಹೆ ನೀಡಿದರು.

Latest Videos

undefined

ಇದಕ್ಕೆ ಉತ್ತರಿಸಿದ ಪದ್ಮನಾಭ್‌ ಸಮವಸ್ತ್ರಗಳ ಬಗ್ಗೆ ನಿರ್ಧಾರ ಮಾಡುವವರು ಮತ್ತು ಸರಬರಾಜು ಆಗುವುದು ಮೇಲ್ಮಟ್ಟದಲ್ಲೇ ಸಾರ್‌ ಎಂದು ಸಮಜಾಯಿಸಿ ನೀಡಿದರು.

ಹಿಂದುಳಿದ ವರ್ಗಗಳ ವಸತಿ ಶಾಲೆಯ ಸಹಾಯಕ ನಿರ್ದೇಶಕರು ಹಾಸ್ಟೆಲ್‌ಗಳಿಗೆ ಹೋಗಿ ಚೆಕ್‌ ಮಾಡಿ. ಬಡವರ ಮಕ್ಕಳು ಅಂತ ತಾತ್ಸಾರ ಮಾಡಬೇಡಿ, ಒಳ್ಳೆ ಊಟ ನೀಡಿ ಎಂದ ಅವರು ಗೃಹಲಕ್ಷ್ಮೇ ಯೋಜನೆ ನೋಂದಣಿಗೆ ಕೆಲವು ಸೈಬರ್‌ ಕೇಂದ್ರಗಳಲ್ಲೇ ಹಣ ವಸೂಲಿ ಮಾಡಲಾಗುತ್ತಿದೆ ಎಂದು ದೂರು ಬಂದಿದೆ. ಅವುಗಳನ್ನು ಗುಪ್ತವಾಗಿ ಪತ್ತೆ ಹಚ್ಚಿ ಅಂತಹ ಕೇಂದ್ರಗಳ ಲೈಸೆನ್ಸ್‌ ರದ್ದುಪಡಿಸಿ ಎಂದು ಶಾಸಕರು ತಹಸೀಲ್ದಾರ್‌ ಮತ್ತು ಸಿಡಿಪಿಒಗೆ ಸೂಚಿಸಿದರು.

ಕಳೆದ ಹತ್ತು ಹದಿನೈದು ವರ್ಷಗಳಿಂದ ಅರಣ್ಯ ಇಲಾಖೆಯಿಂದ ಕೋಟ್ಯಂತರ ಸಸಿ ನೆಡಲಾಗಿದೆ. ಅದಕ್ಕಾಗಿ ಲೆಕ್ಕವಿಲ್ಲದಷ್ಟುಹಣವನ್ನೂ ಖರ್ಚು ಮಾಡಲಾಗಿದೆ. ಆದರೆ ಅವೆಲ್ಲಾ ಜೀವಂತವಾಗಿದ್ದರೆ ಇವತ್ತು ಓಡಾಡಲೂ ಜಾಗ ಇರುತ್ತಿರಲಿಲ್ಲ. ಇವೆಲ್ಲವೂ ತಿನ್ನುವವರ ಪಾಲಾಗಿದೆ ಎಂದು ಶಾಸಕ ಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದರು.

ಕೆಡಿಪಿ ಸಭೆಯಲ್ಲಿ ತಹಸೀಲ್ದಾರ್‌ ವೈ.ಎಂ.ರೇಣುಕುಮಾರ್‌, ಇಒ ಸತೀಶ್‌ ಕುಮಾರ್‌, ತಾಪಂ ಆಡಳಿತಾಧಿಕಾರಿ ಸಹಕಾರ ಸಂಘಗಳ ಉಪನಿಬಂಧಕರಾದ ಎಚ್‌.ಮೂರ್ತಿ ಉಪಸ್ಥಿತರಿದ್ದರು. ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಆಗಮಿಸಿ ತಮ್ಮ ಇಲಾಖೆಯ ಪ್ರಗತಿ ಕುರಿತು ಸಭೆಗೆ ಮಾಹಿತಿ ನೀಡಿದರು.

ರೆಡಿಮೇಡ್ ಸಮವಸ್ತ್ರ ಇಲ್ಲ

ಬೆಂಗಳೂರು : ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ 2023-24ನೇ ಸಾಲಿನಲ್ಲಿ ಶಾಲಾ ಮಕ್ಕಳಿಗೆ ಈಗಾಗಲೇ ಒಂದು ಜೊತೆ ಸಿದ್ಧಪಡಿಸಿದ ಸಮವಸ್ತ್ರ ನೀಡಿರುವ ಶಿಕ್ಷಣ ಇಲಾಖೆ ಇದೀಗ 2ನೇ ಜೊತೆ ನೀಡಲು ಸಿದ್ಧತೆ ನಡೆಸಿದೆ. ಆದರೆ ಈ ಎರಡನೇ ಜೊತೆ ಸಮವಸ್ತ್ರದ ಬಟ್ಟೆಯನ್ನು ಮಾತ್ರ ಸರ್ಕಾರ ಉಚಿತವಾಗಿ ನೀಡಲಿದ್ದು, ಬಟ್ಟೆಯ ಹೊಲಿಗೆ ವೆಚ್ಚವನ್ನು ಮಕ್ಕಳ ಪೋಷಕರೇ ಭರಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಇದರಿಂದ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿವರೆಗೆ ಓದುತ್ತಿರುವ 45,45,749 ವಿದ್ಯಾರ್ಥಿಗಳ ಪೋಷಕರಿಗೆ ಸಮವಸ್ತ್ರದ ಬಟ್ಟೆಯನ್ನು ಹೊಲಿಸಿಕೊಳ್ಳುವ ವೆಚ್ಚ ಭರಿಸಬೇಕಾಗಿದೆ. ಒಂದು ಜೊತೆ ಬಟ್ಟೆ ಹೊಲಿಸಲು ಅಂದಾಜು ಸರಾಸರಿ 600-700 ರು. ವೆಚ್ಚವಾಗಲಿದೆ.

ಬಾಗಲಕೋಟೆ: ನೋಡ ಬನ್ನಿ ಹಳಿಂಗಳಿ ಸರ್ಕಾರಿ ಶಾಲೆ..!

2022-23ನೇ ಸಾಲಿನಲ್ಲಿ ಎರಡನೇ ಜೊತೆ ಸಮವಸ್ತ್ರ ವಿತರಿಸದ ಸರ್ಕಾರ ಈಗ ಅದೇ ಸಮವಸ್ತ್ರಗಳನ್ನೇ 2023-24ನೇ ಸಾಲಿಗೆ ವಿತರಿಸುತ್ತಿದೆ. ಸಮವಸ್ತ್ರ ಸರಬರಾಜಿಗೆ ಟೆಂಡರ್‌ ಪಡೆದಿದ್ದ ಮಹಾರಾಷ್ಟ್ರ ಮೂಲದ ಕಂಪನಿಯಿಂದ ಈಗ ಸರಬರಾಜು ಪ್ರಕ್ರಿಯೆ ಆರಂಭಿಸಿದ್ದು, ಬಟ್ಟೆಯನ್ನು ಮಾತ್ರ ಕಂಪನಿ ಸರಬರಾಜು ಮಾಡಲಿದೆ. ಹೊಲಿಗೆಯ ವೆಚ್ಚವನ್ನು ಪೋಷಕರೇ ಭರಿಸಬೇಕು ಎಂದು ಇಲಾಖೆ ಹೇಳಿದೆ.

ವರ್ಷವಿಡಿ ಒಂದೇ ಜೊತೆ ಸಮವಸ್ತ್ರ ತೊಟ್ಟು ಮಕ್ಕಳು ಶಾಲೆಗೆ ಬರಲಾಗುವುದಿಲ್ಲ. ಶುಚಿತ್ವದ ಪ್ರಶ್ನೆಯೂ ಇದೆ ಎನ್ನುವ ಕಾರಣಕ್ಕೆ ಕೆಲ ವರ್ಷಗಳಿಂದ ವಿದ್ಯಾ ವಿಕಾಸ ಯೋಜನೆಯಡಿ 1ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಎರಡನೇ ಜೊತೆ ಸಮವಸ್ತ್ರ ನೀಡಲಾಗುತ್ತಿದೆ. ಆದರೆ, ಕೋವಿಡ್‌ ಕಾರಣದಿಂದ 2019-20ರಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಎರಡನೇ ಜೊತೆ ಸಮವಸ್ತ್ರವನ್ನು ನೀಡಲಾಗಿಲ್ಲ. ಕಳೆದ 2022-23ನೇ ಸಾಲಿನಲ್ಲಿ ಕೂಡ ಎರಡನೇ ಜೊತೆ ಸಮವಸ್ತ್ರ ನೀಡಲು ಆದೇಶ ಮಾಡಲಾಗಿತ್ತಾದರೂ ಕಾರಣಾಂತರಗಳಿಂದ ಸರಬರಾಜಾಗಿರಲಿಲ್ಲ. ಮಹಾರಾಷ್ಟ್ರದ ಪದಮಚಂದ್‌ ವಿಲಾಪ್‌ಚಂದ್‌ ಜೈನ್‌ ಎಂಬ ಸಂಸ್ಥೆಗೆ ಸಮವಸ್ತ್ರ ಸರಬರಾಜಿಗೆ ಕಾರ್ಯಾದೇಶ ನೀಡಲಾಗಿತ್ತು. ಆ ಪ್ರಕಾರ ತಾಲ್ಲೂಕು ಮಟ್ಟದವರೆಗೆ ಅಂದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿವರೆಗೆ ಈ ಸಂಸ್ಥೆ ಸಮವಸ್ತ್ರ ಸರಬರಾಜು ಮಾಡಲಿದೆ. ಅಲ್ಲಿಂದ ಶಾಲೆಗಳಿಗೆ ಕಳುಹಿಸುವ ಜವಾಬ್ದಾರಿ ಇಲಾಖಾ ಅಧಿಕಾರಿಗಳದ್ದು ಎಂದು ಇಲಾಖೆಯ ಸುತ್ತೋಲೆಯಲ್ಲಿ ವಿವರಿಸಲಾಗಿದೆ.

click me!