ಸುದೀರ್ಘವಾಗಿ ಮಠ ನಡೆಸಿದ ಶಿವಕುಮಾರ ಶ್ರೀಗಳು

By Kannadaprabha News  |  First Published Apr 2, 2023, 5:12 AM IST

ಜಗತ್ತಿನಲ್ಲಿ 89 ವರ್ಷಗಳ ಕಾಲ ಮಠವನ್ನು ಮುನ್ನಡೆಸಿಕೊಂಡು ಸುದೀರ್ಘ ಸೇವೆ ಮಾಡಿದವರು ಶಿವಕುಮಾರ ಸ್ವಾಮೀಜಿ ಅವರು. ಈ ರೀತಿಯ ಸುದೀರ್ಘ ಸೇವೆ ಸಲ್ಲಿಸಿದ ಇನ್ನೊಬ್ಬ ಮಠಾಧೀಶರು ಸಿಗುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮಿ ಅಭಿಪ್ರಾಯಪಟ್ಟರು.


  ತುಮಕೂರು :  ಜಗತ್ತಿನಲ್ಲಿ 89 ವರ್ಷಗಳ ಕಾಲ ಮಠವನ್ನು ಮುನ್ನಡೆಸಿಕೊಂಡು ಸುದೀರ್ಘ ಸೇವೆ ಮಾಡಿದವರು ಶಿವಕುಮಾರ ಸ್ವಾಮೀಜಿ ಅವರು. ಈ ರೀತಿಯ ಸುದೀರ್ಘ ಸೇವೆ ಸಲ್ಲಿಸಿದ ಇನ್ನೊಬ್ಬ ಮಠಾಧೀಶರು ಸಿಗುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮಿ ಅಭಿಪ್ರಾಯಪಟ್ಟರು.

ಸಿದ್ಧಗಂಗಾ ಮಠದಲ್ಲಿ ನಡೆದ ಲಿಂ. ಡಾ. ಶಿವಕುಮಾರ ಸ್ವಾಮೀಜಿ ರವರ 116ನೇ ಜಯಂತಿ ಹಾಗೂ ಗುರುವಂದನಾ ಸಮಾರಂಭದ ಸಾನಿದ್ಯ ವಹಿಸಿ ಮಾತನಾಡಿದರು.

Tap to resize

Latest Videos

ಮಠದ ಮಕ್ಕಳನ್ನು ನೋಡಿದಾಗ ಮತ್ತು ಹಳೆಯ ವಿದ್ಯಾರ್ಥಿಗಳ ಸಾಧನೆಯನ್ನು ಕೇಳಿದಾಗ ಶ್ರೀಗಳು ಅತೀವ ಸಂತೋಷ ಪಡುತ್ತಿದ್ದರು. ಮಕ್ಕಳಿಗೂ ಎಂದೂ ಪ್ರಸಾದ ನಿಲ್ಲದಂತೆ ಎಚ್ಚರ ವಹಿಸಿದ್ದರು. ಸ್ವತಃ ಶ್ರೀಗಳೇ ನಿಂತು ಅಡುಗೆ ಮಾಡಿ ಬಡಿಸುತ್ತಿದ್ದರು. ಏಪ್ರಿಲ್‌ 1 ಅಂದರೆ ಪವಿತ್ರವಾದ ಮಹಾ ದಿವಸ. ಶಿವಕುಮಾರ ಶ್ರೀಗಳು ಈ ಭೂಮಿಯಲ್ಲಿ ಅವತರಿಸಿದ ದಿನ. ಶ್ರೀಗಳ ವ್ಯಕ್ತಿತ್ವ ಬಹಳ ದೊಡ್ಡದು. ಸಿದ್ಧಗಂಗಾ ಮಠವೇ ಶ್ರೀಗಳ ಜಗತ್ತು ಆಗಿತ್ತು. ಯಾವುದೇ ದೇಶ, ರಾಜ್ಯಗಳಿಗೆ ಶ್ರೀಗಳು ಹೋಗದೆ ಇಡೀ ಜಗತ್ತನ್ನೇ ಸಿದ್ಧಗಂಗಾ ಮಠದತ್ತ ಆಕರ್ಷಿಸುವ ವ್ಯಕ್ತಿತ್ವ ಉಳ್ಳವರಾಗಿದ್ದರು. ಸಿದ್ಧಗಂಗೆ ಮತ್ತು ಸುತ್ತೂರು ಈ ಭಾಗದ ಸಮಾಜಕ್ಕೆ ಎರಡು ಕಣ್ಣುಗಳಿದ್ದಂತೆ. ಪೂಜ್ಯರ ಕಾಯಕ ಶಕ್ತಿಯ ಫಲ ಸಿದ್ಧಗಂಗಾ ಮಠ ಇಂದು ಜಗತ್ತಿನಾದ್ಯಂತ ಇಷ್ಟುಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದರು.

ಹೋಲಿಕೆ ಮಾಡಲಾಗದ ವ್ಯಕ್ತಿತ್ವ:

ಸುತ್ತೂರು ಮಠದ ಡಾ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸಿದ್ಧಗಂಗೆಯನ್ನು ಪ್ರಜ್ವಲಮಾನವಾಗಿ ಬೆಳೆಸಿದ ಮಹಾನ್‌ ಬೆಳಕು ಡಾ. ಶಿವಕುಮಾರ ಸ್ವಾಮೀಜಿಗಳು. ಶ್ರೀಗಳಿಗೆ ಅವರೇ ಹೋಲಿಕೆ. ಮತ್ತೊಬ್ಬರನ್ನು ಹೋಲಿಕೆ ಮಾಡಲಾಗದಷ್ಟುಎತ್ತರಕ್ಕೆ ಬೆಳೆದ ಮಹಾತಪಸ್ವಿಗಳು. ಪೂಜ್ಯರು ಜೀವಿತಾವಧಿಯಲ್ಲೆ ದಂತ ಕಥೆಯಾಗಿ ಬದುಕು ನಡೆಸಿದವರು. ಅಪರಿಮಿತವಾದ ಶಕ್ತಿ ಶ್ರೀಗಳಲ್ಲಿ ಸಂಚಯಗೊಂಡಿತ್ತು. ಜಂಗಮ ಸ್ವರೂಪಿಯಾಗುವ ಶಕ್ತಿ ಅಂತರ್ಗತವಾಗಿದ್ದರಿಂದ ಲೋಕಾರ್ಥವಾಗಿ ಬೆಳೆಯಲು ಸಾಧ್ಯವಾಯಿತು ಎಂದರು.

ಜಗಜ್ಯೋತಿ ಬಸವಣ್ಣನವರ ಮಾತಿಗೆ ಅನ್ವರ್ಥವಾಗಿ ಸಿದ್ಧಗಂಗಾ ಶ್ರೀಗಳು ಮಠದ ಕಾಯಕವನ್ನು ಮಾಡಿದ್ದಾರೆ. ಪೂಜಾ ನಿಷ್ಠರಾಗಿ ಸೂರ್ಯೋದಯಕ್ಕೂ ಮುನ್ನ ಪೂಜಾ ಕೈಂಕರ್ಯವನ್ನು ಮುಗಿಸಿ, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಬಸವಣ್ಣನವರ ತತ್ವಾದರ್ಶಗಳನ್ನು ನಾಟಕದ ಮೂಲಕ ಸಮಾಜಕ್ಕೆ ಬಿತ್ತರಿಸಿದರು. ಸಿದ್ಧಗಂಗಾ ಶ್ರೀಗಳು ಮಠದ ಆಸ್ತಿ ನೋಡಿ ಮಠದ ಉತ್ತರಾಧಿಕಾರಿಯಾಗಲಿಲ್ಲ. ಉದ್ದಾನ ಶಿವಯೋಗಿಗಳು ಉತ್ತರಾಧಿಕಾರಿಯಾಗುವಂತೆ ಹೇಳಿದ ತಕ್ಷಣ ಹಿಂದೆ-ಮುಂದೆ ನೋಡದೆ, ಪೋಷಕರನ್ನು ಕೇಳದೆ ಒಮ್ಮೆಲೇ ಒಪ್ಪಿಗೆ ಸೂಚಿಸಿದ ದಿವ್ಯ ಚೇತನ ಎಂದು ಬಣ್ಣಿಸಿದರು.

ಸಮಾರಂಭದಲ್ಲಿ ರಾಜ್ಯಸಭಾ ಮಾಜಿ ಸದಸ್ಯ ಹಾಗೂ ಬೆಳಗಾವಿ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪ್ರಭಾಕರ ಕೋರೆ, ಆಶಾ ಕೋರೆ, ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಂತೇಶ ಕವಟಗಿ ಮಠ, ಎಸ್‌ಐಟಿ ನಿರ್ದೇಶಕರಾದ ಡಾ. ಎಂ.ಎನ್‌. ಚನ್ನಬಸಪ್ಪ, ತುಮಕೂರು ವಿವಿ ಕುಲಪತಿ ಪ್ರೊ. ವೆಂಕಟೇಶ್ವರಲು, ಜಿ.ಪಂ. ಮಾಜಿ ಅಧ್ಯಕ್ಷ ಮರಿಸ್ವಾಮಿ, ರುದ್ರೇಶ್‌, ಚಿದಾನಂದ್‌, ಎಸ್‌ಐಟಿ ಸಿಇಓ ಶಿವಕುಮಾರಯ್ಯ, ಸಿದ್ಧಗಂಗಾ ಆಸ್ಪತ್ರೆಯ ಡಾ. ಎಸ್‌. ಪರಮೇಶ್‌, ಜಿ.ಎಸ್‌. ರೇಣುಕಪ್ಪ, ದೀಪಕ್‌ ಇತರರಿದ್ದರು.

ಎಲ್ಲ ಮಠಗಳಿಗೆ ವಿವಿ ಇದ್ದಂತೆ: ಕೆರೆಕೋಡಿ ಶ್ರೀ

ಕೆರೆಕೋಡಿ-ರಂಗಾಪುರದ ಗುರುಪರದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಸಿದ್ಧಗಂಗಾ ಮಠ ಎಲ್ಲ ಮಠಮಾನ್ಯಗಳಿಗೆ ವಿಶ್ವವಿದ್ಯಾನಿಲಯ ಇದ್ದಂತೆ. ಸಿದ್ಧಗಂಗಾ ಶ್ರೀಗಳ ಕುಲಪತಿಗಳ ರೀತಿ ನಮಗೆಲ್ಲಾ ಮಾರ್ಗದರ್ಶಕರಾಗಿದ್ದರು. ಶ್ರೀಮಠದ ಮಾರ್ಗದರ್ಶನದಲ್ಲಿ ನಮ್ಮ ಮಠಗಳು ಮುನ್ನಡೆಯುತ್ತಿವೆ. ಶ್ರೀಗಳ ಶಕ್ತಿ ನಮಗೂ ಪ್ರೇರಣೆಯಾಗಿದೆ ಎಂದರು. ಪೂಜ್ಯರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಇಂದಿಗೂ ನಾವೆಲ್ಲಾ ಮುನ್ನಡೆಯುತ್ತಿದ್ದೇವೆ. ಶ್ರೀಗಳು ಕಾಯಕದಲ್ಲಿ ಯಾವುದನ್ನೂ ಲೆಕ್ಕಿಸದೆ ಬಡ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿ, ನೊಂದವರ ಕಷ್ಟಕಾರ್ಪಣ್ಯ ನಿವಾರಿಸುತ್ತಾ ಬದುಕು ನಡೆಸಿದವರು. ಗಂಗೆ ಪಾಪ ಕಳೆಯುತ್ತಾಳೆ, ಚಂದ್ರ ತಂಪೆರೆಯುತ್ತಾನೆ, ಕಾಮಧೇನು ಬೇಡಿದ್ದನ್ನೆಲ್ಲಾ ಕೊಡುವ ರೀತಿ ಈ ಮೂರು ಶಕ್ತಿಗಳನ್ನು ಅನುಗ್ರಹಿಸುವ ಶಕ್ತಿ ಪೂಜ್ಯರಿಗೆ ಇತ್ತು ಎಂದು ಅವರು ಹೇಳಿದರು.

click me!