‘ಮಂತ್ರಿಸ್ಥಾನ ಕೊಡದಿದ್ರೆ 10 ಬಿಜೆಪಿ ಶಾಸಕರ ರಾಜೀನಾಮೆ ’

By Kannadaprabha News  |  First Published Feb 29, 2020, 10:15 AM IST

ಒಂದು ವೇಳೆ ನಮ್ಮವರಿಗೆ ಸಚಿವ ಸ್ಥಾನ ನೀಡದಿದ್ದಲ್ಲಿ 10 ಶಾಸಕರಿಂದ ರಾಜೀನಾಮೆ ಕೊಡಿಸಲಾಗುವುದು ಎಂದು ಸ್ವಾಮೀಜಿಯೋರ್ವರು ಎಚ್ಚರಿಕೆ ರವಾನಿಸಿದ್ದಾರೆ. 


ಲಬುರಗಿ [ಫೆ.29]:  ಪ್ರಸಕ್ತ ಬಿಜೆಪಿ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕದ, ಅದರಲ್ಲೂ ಕಲಬುರಗಿಯ ಶಾಸಕರಿಗೆ ಸಚಿವಗಿರಿ ದಕ್ಕಿಲ್ಲ ಎಂಬ ಅಸಮಾಧಾನ ಹೊರಹಾಕಿರುವ ಶ್ರೀಶೈಲ ಸಾರಂಗ ಮಠದ ಡಾ ಸಾರಂಗಧರ ದೇಶೀಕೇಂದ್ರ ಸ್ವಾಮೀಜಿ ಮುಂದಿನ ವರ್ಷದ ಒಳಗಾಗಿ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ್‌ಗೆ (ಅಪ್ಪುಗೌಡ) ಸಚಿವ ಸ್ಥಾನ ನೀಡದೇ ಹೋದ್ರೆ 10 ಶಾಸಕರಿಂದ ರಾಜೀನಾಮೆ ಕೊಡಿಸುವಷ್ಟುತಾಕತ್ತು ತಮ್ಮ ಬಳಿ ಇದೆ ಎಂದು ಹೇಳುವ ಮೂಲಕ ನೇರವಾಗಿ ಸಿಎಂ ಯಡಿಯೂರಪ್ಪನವರಿಗೇ ಎಚ್ಚರಿಕೆ ನೀಡಿದ್ದಾರೆ.

ಕಲಬುರಗಿ (ದ) ಶಾಸಕ ದತ್ತಾತ್ರೇಯ ರೇವೂರ್‌ 38ನೇ ಜನ್ಮ ದಿನಾಚರಣೆ, ಉದ್ಯೋಗ ಮೇಳದ ಅಂಗವಾಗಿ ಎನ್‌ವಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಡಾ.ಸಾರಂಗಧರ ಶ್ರೀಗಳು, ಇತ್ತೀಚೆಗೆ ಸ್ವಾಮೀಜಿಗಳ ನಿಯೋಗ ತೆಗೆದುಕೊಂಡು ಹೋಗಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪನವನ್ನು ಭೇಟಿ ಮಾಡಿ ಕಲ್ಯಾಣ ಕರ್ನಾಟಕಕ್ಕೆ ಸಚಿವರನ್ನಾಗಿ ಮಾಡಲು ಕೇಳಿದ್ದೆವು. ಆದರೆ ಸದ್ಯದ ಸ್ಥಿತಿಯಲ್ಲಿ ಸಾಧ್ಯವಿಲ್ಲ, ಒಂದು ವರ್ಷದ ನಂತರ ಸಚಿವರನ್ನಾಗಿ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. ಮಾತು ಕೊಟ್ಟಂತೆ ಮುಂದಿನ ವರ್ಷದ ಒಳಗಾಗಿ ಸಚಿವ ಸ್ಥಾನ ನೀಡದೆ ಹೋದರೆ ನಾವು ಸುಮ್ಮನಿರೋದಿಲ್ಲ. ಅಪ್ಪುಗೌಡಗಂತೂ ರಾಜೀನಾಮೆ ಕೊಟ್ಟು ಮನ್ಯಾಗ ಕೂಡಂತ ಹೇಳ್ತೀವಿ, ಇವರ ಜೊತೆಗೇ ಇನ್ನೂ 10 ಶಾಸಕರಿಗೂ ರಾಜೀನಾಮೆ ಕೊಡ್ಲಿಕ್ಕಿ ಹೇಳ್ತೀವಿ ಎಂದು ಸ್ವಾಮೀಜಿ ಹೇಳಿದರು.

Tap to resize

Latest Videos

undefined

ಇನ್ನೈದು ವರ್ಷ ಬಿಎಸ್‌ವೈದೇ ಸರ್ಕಾರ:

ಯಡಿಯೂರಪ್ಪ ಸರ್ಕಾರ ಮುಂದಿನ 3 ವರ್ಷ ಅವಧಿ ಪೂರೈಸುತ್ತದೆ. ಅಷ್ಟೇ ಯಾಕೆ ಮತ್ತೆ ಇನ್ನೈದು ವರುಷಕ್ಕೂ ಅವರದ್ದೇ ಸರ್ಕಾರವಾಗಲಿ ಎಂದು ಹರಸಿದರಾದರೂ ಲಿಂಗಾಯಿತರೊಬ್ಬರು ಸಿಎಂ ಗದ್ದುಗೆ ಏರಿದ್ದು ಈ ಸಂದರ್ಭ ಮತ್ತೆ ಬರಬೇಕಾದಲ್ಲಿ ಇನ್ನ 30, 40 ವರ್ಷವಾದರೂ ಬೇಕು ಎಂದರು.

ಮತ್ತೆ ಸಂಪುಟ ವಿಸ್ತರಣೆ ಸರ್ಕಸ್; ಪ್ರಮುಖ ನಾಯಕನಿಗೆ ಈ ಬಾರಿಯೂ ಹುದ್ದೆ ಮಿಸ್..

ಬಿಜೆಪಿ ಅಂದ್ರೆ ಕಲಬುರಗಿ ಸೀಮಿಯೊಳ್ಗ ಒಂದು ನಾಯಿನು ಕೂಡ ಕೇಳ್ತಾ ಇರಲಿಲ್ಲ. ಅಂತಾ ದಿನಮಾನದಾಗ ದಿ. ಚಂದ್ರಶೇಖರ್‌ ಪಾಟೀಲ್‌ ರೇವೂರ್‌ ಮನೆ ಮನೆಗೆ ಹೋಗಿ ಪ್ರಚಾರ ಮಾಡಿದ್ರು, ಪಕ್ಷ ಸಂಘಟನೆ ಮಾಡಿ ಖಮರುಲ್‌ ಇಸ್ಲಾಮರನ್ನ ಸೋಲಿಸಿ ಶಾಸಕ ಆದಂತಹ ಗಂಡು ಮಗ ಚಂದ್ರಶೇಖರ್‌ ಪಾಟೀಲ್‌ ರೇವೂರ್‌, ಸೂಪರ್‌ ಮಾರ್ಕೆಟ್‌ನಾಗ ಕುಂತು ಗುಡುಗು ಹಾಕಿದ್ರ ಎಲ್ಲಾರು ಅಂಜತಿದ್ರು, ಮಂತ್ರಿಗಿರಿ ಆಶೆಯಲ್ಲೇ ಆತ ದಿವಂಗತನಾದ, ಈಗ ಮಗನಿಗೆ ಮಂತ್ರಿ ಕೊಡದೆ ಹೋದ್ರೆ ಹೇಗೆ? ಎಂದು ಪ್ರಶ್ನಿಸಿದರು.

ಸಚಿವ ಸ್ಥಾನಕ್ಕೆ ಮನವಿ ಮಾಡಲಾಗಿದೆ:

ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಹೋದರೆ ಮುಂದಿನ 30 ವರ್ಷ ಲಿಂಗಾಯತರು ಮುಖ್ಯಮಂತ್ರಿ ಆಗೋದಕ್ಕೆ ಅವಕಾಶ ಇಲ್ಲ. ಯಡಿಯೂರಪ್ಪ ಮತ್ತೆ ಮುಂದಿನ ಐದು ವರ್ಷ ಕೂಡ ಮುಖ್ಯಮಂತ್ರಿ ಆಗಬೇಕು, ಸಿಎಂ ಬಿಎಸ್‌ವೈ ಬಳಿ ತಾವೇ ಹೋಗಿ ಅಪ್ಪುಗೌಡರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾಗಿಯೂ ಸ್ಮರಿಸಿದರು.

ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿದ್ದಾರೆ:

ದತ್ತಾತ್ರೇಯ ಪಾಟೀಲ್‌ ತಂದೆ ಚಂದ್ರಶೇಖರ ಪಾಟೀಲ್‌ ತಮ್ಮ ಆಸ್ತಿಮಾರಿ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿದ್ದಾರೆ. ಮಂತ್ರಿ ಆಗಬೇಕು ಅಂತ ಆಸೆ ಇಟ್ಟುಕೊಂಡು ಚಂದ್ರಶೇಖರ ಸತ್ತು ಹೋದರು. ಆದರೆ ಇದೇ ಸರ್ಕಾರ ಅವರನ್ನು ಸಚಿವರನ್ನಾಗಿ ಮಾಡಲಿಲ್ಲ. ಚಂದ್ರಶೇಖರ್‌ ಪತ್ನಿ ಅರುಣಾದೇವಿ ಪಾಟೀಲರು ಗೆದ್ದರು. ತಂದೆ, ತಾಯಿ, ಮಗ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈಗ ಅವರ ಪುತ್ರನಿಗಾದರೂ ಮಂತ್ರಿ ಸ್ಥಾನ ನೀಡಬೇಕು. ಒಂದು ವೇಳೆ ಸಚಿವ ಸ್ಥಾನ ಕೊಡದಿದ್ದರೆ ಈ ಭಾಗದ ಹತ್ತು ಶಾಸಕರನ್ನು ರಾಜೀನಾಮೆ ಕೊಡಿಸುತ್ತೇನೆ. ಆ ಶಕ್ತಿ ನನ್ನ ಬಳಿ ಇದೆ ಎಂದು ಎಚ್ಚರಿಸಿದರು.

ಕಲ್ಯಾಣ ಕರ್ನಾಟಕದಲ್ಲಿ ಒಬ್ಬರಿಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಆದರೆ ಅವರಿಗೆ ಅರ್ಧ ಕನ್ನಡ ಅರ್ಧ ಮರಾಠಿ ಬರುತ್ತದೆ. ಯಾರಿಗೆ ಕೊಡಲಿ ಒಂದು ವರ್ಷದೊಳಗೆ ಮುಖ್ಯಮಂತ್ರಿಗಳು ಮಾತುಕೊಟ್ಟಂತೆ ಈ ಭಾಗದ ಒಬ್ಬರಿಗೆ ಸಚಿವ ಸ್ಥಾನ ಕೊಡಲೇಬೇಕು. ಯಡಿಯೂರಪ್ಪ ಲಿಂಗಾಯತ ಧರ್ಮದ ಪ್ರಭಾವಿ ನಾಯಕರಾಗಿದ್ದಾರೆ. ಒಂದು ವೇಳೆ ಸಿಎಂ ಸ್ಥಾನ ಕಳೆದುಕೊಂಡರೆ ಮುಂದಿನ 30 ವರ್ಷಗಳವರೆಗೆ ಲಿಂಗಾಯತ ಸಮಾಜದವರು ಮುಖ್ಯಮಂತ್ರಿಯಾಗಲ್ಲ. ಅವರು ಜಾತ್ಯತೀತ ವ್ಯಕ್ತಿಯಾಗಿದ್ದಾರೆ. ಮುಂದೆ ಅವರೇ ಮುಖ್ಯಮಂತ್ರಿಯಾಗಲಿ ಎಂದು ಹಾರೈಸಿದರು.

ಜನಪ್ರಿಯ ನಾಯಕರಾಗಿ ದತ್ತಾತ್ತೇಯ:

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರ ಅವರು ಕಲ್ಯಾಣ ಕರ್ನಾಟಕದ ಭವಿಷ್ಯದ ನಾಯಕರಾಗಿ ಹೊರಹೊಮ್ಮಲಿದ್ದಾರೆ. ಮಾಜಿ ಮುಖ್ಯಮಂತ್ರಿ ದಿ.ವೀರೇಂದ್ರ ಪಾಟೀಲ ಅವರ ನಂತರ ಕಲ್ಯಾಣ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಮತ್ತು ಜನನಾಯಕರಾಗಿ ದತ್ತಾತ್ರೇಯ ಪಾಟೀಲ ರೇವೂರ ಅವರು ಹೊರಹೊಮ್ಮಲಿದ್ದಾರೆ. ದತ್ತಾತ್ರೇಯ ಪಾಟೀಲ ರೇವೂರ ಅವರು ರಾಜಕೀಯ ಜೀವನದಲ್ಲಿ ಇನ್ನೂ ಉತ್ತುಂಗಕ್ಕೇರಲು ಅವಕಾಶಗಳಿವೆ. ಇನ್ನೂ 80 ವರ್ಷಗಳಕಾಲ ಅವರು ರಾಜಕೀಯ ಜೀವನದಲ್ಲಿ ಮಿಂಚಲಿದ್ದಾರೆ ಎಂದರು.

ಸುರಪುರ ಶಾಸಕ ರಾಜೂಗೌಡ ಸಹ ದತ್ತಾತ್ರೇಯ ರೇವೂರ್‌ಗೆ ಸಚಿವ ಸ್ಥಾನ ನೀಡಬೇಕು ಎಂದು ಯಡಿಯೂರಪ್ಪಗೆ ಆಗ್ರಹಿಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್‌.ಅಶೋಕ, ಡಿಸಿಎಂ ಗೋವಿಂದ ಕಾರಜೋಳ್‌, ಕಲಬುರಗಿ ಶಾಸಕರು, ಸಂಸದರು ಸೇರಿದಂತೆ ಅನೇಕರು ವೇದಜಿಕೆಯಲ್ಲಿದಾಗಲೇ ದತ್ತಾತ್ರೇಯ ಪೇಟೀಲರಿಗೆ ಸಚಿವ ಸ್ಥಾನ ಕೊಡಬೇಕೆಂಬ ಆಗ್ರಹ ಬಲವಾಗಿ ಕೇಳಿಬಂದವು.

ಫೆಬ್ರವರಿ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!