ಖ್ಯಾತ ಇತಿಹಾಸಕಾರ ಷಡಕ್ಷರಿ ಶೆಟ್ಟರ್‌ ನಿಧನ

By Kannadaprabha News  |  First Published Feb 29, 2020, 10:14 AM IST

ಹಲವು ದಿನಗಳ ಅನಾರೋಗ್ಯದಿಂದ ಬಳಲುತ್ತಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಇತಿಹಾಸಕಾರ ಷಡಕ್ಷರಿ ಶೆಟ್ಟರ್‌ (85) ಶುಕ್ರವಾರ ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.


ಬೆಂಗಳೂರು(ಫೆ.29): ಹಲವು ದಿನಗಳ ಅನಾರೋಗ್ಯದಿಂದ ಬಳಲುತ್ತಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ಇತಿಹಾಸಕಾರ ಷಡಕ್ಷರಿ ಶೆಟ್ಟರ್‌ (85) ಶುಕ್ರವಾರ ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಉಸಿರಾಟ ಸಮಸ್ಯೆಯಿಂದ ಆರು ದಿನಗಳ ಹಿಂದೆ ಬನ್ನೇರುಘಟ್ಟರಸ್ತೆಯ ಸಾಗರ್‌ ಅಪೋಲೊ ಆಸ್ಪತ್ರೆಗೆ ಷ. ಶೆಟ್ಟರ್‌ ಅವರನ್ನು ದಾಖಲಿಸಲಾಗಿತ್ತು. ವೈದ್ಯರು ಚಿಕಿತ್ಸೆ ನೀಡಿದರೂ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ಉಸಿರಾಟಕ್ಕೆ ತೊಂದರೆಯಾಗಿ ಶುಕ್ರವಾರ ಮುಂಜಾನೆ 3.30 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Tap to resize

Latest Videos

undefined

ಶನಿವಾರ ಅಂತಿಮ ಸಂಸ್ಕಾರ:

ಷ. ಶೆಟ್ಟರ್‌ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಭೂಪಸಂದ್ರದ ಅವರ ನಿವಾಸದಲ್ಲಿ ಶುಕ್ರವಾರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಹಲವಾರು ಗಣ್ಯರು ಹಾಗೂ ಸಾರ್ವಜನಿಕರು ಶೆಟ್ಟರ್‌ ಅವರ ಅಂತಿಮ ದರ್ಶನ ಪಡೆದರು. ಶನಿವಾರ ಬೆಳಗ್ಗೆ 10 ಗಂಟೆವರೆಗೆ ಭೂಪಸಂದ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತದೆ. ಬಳಿಕ ಹೊಸಕೋಟೆಯಿಂದ 10 ಕಿ.ಮೀ. ದೂರದಲ್ಲಿರುವ ನರಸಾಪುರ ಕೈಗಾರಿಕಾ ಪ್ರದೇಶದ ಬಳಿಯ ಹಾಲಹಳ್ಳಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆಗೆ ಅಂತ್ಯ ಸಂಸ್ಕಾರ ನಡೆಯಲಿದೆ. ಇದೇ ಜಾಗದಲ್ಲಿ ಸ್ಮಾರಕ ಭವನ ನಿರ್ಮಾಣವಾಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಶಾಸ್ಟ್ರೀಯ ಸ್ಥಾನಕ್ಕೆ ಶೆಟ್ಟರ್‌ ಅವರದ್ದು ಅನನ್ಯ ಕೊಡುಗೆ

ಷ. ಶೆಟ್ಟರ್‌ ಇತಿಹಾಸ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. 1935ರಲ್ಲಿ ಬಳ್ಳಾರಿ ಜಿಲ್ಲೆ ಹಡಗಲಿ ತಾಲೂಕಿನ ಹಂಪಸಾಗರದಲ್ಲಿ ಜನಿಸಿದ್ದ ಶೆಟ್ಟರ್‌ ಅವರು ಮೈಸೂರು, ಧಾರವಾಡ ಹಾಗೂ ಕೇಂಬ್ರಿಡ್ಜ್‌ನಲ್ಲಿ ಅಂತಿಮ ವ್ಯಾಸಂಗ ನಡೆಸಿದ್ದರು. ಇತಿಹಾಸ, ಮಾನವಶಾಸ್ತ್ರ, ಕಲಾ ಇತಿಹಾಸ ಸೇರಿ 27ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳನ್ನು ಬರೆದಿದ್ದರು. ಶ್ರವಣಬೆಳಗೊಳ, ಸಾವಿಗೆ ಆಹ್ವಾನ, ಸೋಮನಾಥಪುರ, ಬಾದಾಮಿ ಚಾಲುಕ್ಯರ ಶಾಸನ ಸಾಹಿತ್ಯ, ಸಾವನ್ನು ಅರಿಸಿ, ಹಳಗನ್ನಡ - ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ, ಹಳಗನ್ನಡ ಸೇರಿದಂತೆ ಹಲವು ಪ್ರಮುಖ ಕೃತಿ ರಚಿಸಿದ್ದಾರೆ.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕುವಲ್ಲಿ ಷ. ಶೆಟ್ಟರ್‌ ಸಂಶೋಧನೆಗಳ ಕೊಡುಗೆಯೂ ಪ್ರಮುಖವಾದದ್ದು. ಷ. ಶೆಟ್ಟರ್‌ ಬರೋಬ್ಬರಿ ಆರು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ಬೆಳಗಾವಿ: ಬಾಡೂಟಕ್ಕೆ ಕರೆಯದಕ್ಕೆ ಹೀಗ್ ಮಾಡೋದಾ?

1960ರಿಂದ 1996ರವರೆಗೆ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಬೋಧನೆ ಮಾಡಿದ್ದಾರೆ. ಭಾರತೀಯ ಕಲಾ ಇತಿಹಾಸ ಸಂಸ್ಥೆಯ ನಿರ್ದೇಶಕ ಸ್ಥಾನ (1978-95), ನವದೆಹಲಿಯ ಇಂಡಿಯನ್‌ ಕೌನ್ಸಿಲ್‌ ಆಫ್‌ ಹಿಸ್ಟಾರಿಕಲ್‌ ರಿಸಚ್‌ರ್‍ ಅದ್ಯಕ್ಷ ಸ್ಥಾನ (1996-99), ಬೆಂಗಳೂರು ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಅಡ್ವಾನ್ಸ್‌$್ಡ ಸ್ಟಡೀಸ್‌ನಲ್ಲಿ ಪ್ರಾಧ್ಯಾಪಕರಾಗಿ (2002-2010) ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದರು. ಅಲ್ಲದೆ, ಭಾರತೀಯ ಇತಿಹಾಸ ಅನುಸಂಧಾನ ಪರಿಷತ್‌, ದಕ್ಷಿಣ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್‌ ಹಾಗೂ ಕರ್ನಾಟಕ ಇತಿಹಾಸ ಅನುಸಂಧಾನ ಪರಿಷತ್‌ಗಳ ಸರ್ವಾಧ್ಯಕ್ಷ ಸ್ಥಾನ, ಮೆಲ್ಬರ್ನ್‌ ವಿಶ್ವ ಸಂಸ್ಕೃತ ಸಮ್ಮೇಳನದ ವಿಭಾಗೀಯ ಅಧ್ಯಕ್ಷ ಸ್ಥಾನ, ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಹಾಗೂ ಅಖಿಲ ಭಾರತ ಹಳಗನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸ್ಥಾನ ಸೇರಿ ಗೌರವಸ್ಥಾನಗಳನ್ನು ಅಲಂಕರಿಸಿದ್ದರು.

ಸಾಲು ಸಾಲು ಪ್ರಶಸ್ತಿ:

ಷ. ಶೆಟ್ಟರ್‌ ಅವರು ಇತಿಹಾಸ ಸಂಶೋಧನೆ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್‌, ಮಾಸ್ತಿ ಪ್ರಶಸ್ತಿ, ರನ್ನ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಲಭಿಸಿವೆ.

click me!