ಒಣಗುತ್ತಿರುವ ಬೆಳೆಗಳಿಗೆ ತುಂತುರು ನೀರಾವರಿ ಮೂಲಕ ನೀರುಣಿಸುವ ಯತ್ನ, ಹತ್ತಿ, ಹೆಸರು ಬೆಳೆಗಳನ್ನು ಕಾಪಾಡಿಕೊಳ್ಳಲು ರೈತರಿಂದ ಹರಸಾಹಸ
ಯಾದಗಿರಿ(ಜೂ.21): ಆರಂಭದಲ್ಲೇ ಕೈಕೊಟ್ಟ ಮುಂಗಾರು ಮಳೆಯಿಂದಾಗಿ ಅನ್ನದಾತರು ಆತಂಕದಲ್ಲಿದ್ದಾರೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದಿರುವುದರಿಂದ, ಆರಂಭದ ಮಳೆಗೆ ಬಿತ್ತನೆ ಮಾಡಿರುವ ಬೆಳೆಗಳು ಒಣಗುವ ಭೀತಿ ಎದುರಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದಾಗಿ ಬೆಳೆಗಳ ರಕ್ಷಿಸಲು ರೈತರು ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಮುಂಗಾರು ಆರಂಭದಲ್ಲಿ ಅಲ್ಪ ಪ್ರಮಾಣದ ಮಳೆ ಬಂದಾಗ ಕಣ್ಣರಳಿಸಿದ್ದ ರೈತಾಪಿ ವರ್ಗ ನಂತರದಲ್ಲಿ ಮತ್ತೆ ಮಳೆ ಸುರಿಯುವ ನಿರೀಕ್ಷೆಯಲ್ಲಿ ವಿವಿಧ ಬೀಜಗಳ ಬಿತ್ತನೆ ಮಾಡಿದ್ದರು. ಆದರೀಗ, ಮಳೆ ಕೊರತೆಯಿಂದ ಬೆಳೆ ಒಣಗುತ್ತಿರುವುದರಿಂದ ಕಂಗಾಲಾದ ರೈತರು ತುಂತುರು (ಸ್ಟ್ರಿಂಕ್ಲರ್) ನೀರಾವರಿ ಮೂಲಕ ಬೆಳೆಗಳಿಗೆ ನೀರು ಹರಿಸುವ ಹರಸಾಹಸಕ್ಕಿಳಿದಿದ್ದಾರೆ.
undefined
ಯಾದಗಿರಿ: ಅಕ್ರಮವಾಗಿ ಸಾಗಿಸುತ್ತಿದ್ದ 25 ಹಸುಗಳ ರಕ್ಷಣೆ, ಆರೋಪಿಗಳು ವಶಕ್ಕೆ
ಯಾದಗಿರಿ ಜಿಲ್ಲೆಯಲ್ಲಿ 4 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಮಳೆ ಕೈಕೊಟ್ಟಪರಿಣಾಮ ಕೇವಲ 7 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಈವರೆಗೆ ಬಿತ್ತನೆ ಮಾಡಲಾಗಿದೆ. ಜೂನ್ ತಿಂಗಳಲ್ಲಿ 140 ಮಿ.ಮೀ. ಮಳೆ ಸುರಿಯಬೇಕಿತ್ತು. ಆದರೆ, 20 ಮಿ.ಮಿ. ಮಳೆ ಸುರಿದಿದ್ದು, ಶೇ.85ರಷ್ಟುಮಳೆ ಕೊರತೆಯಾಗಿದೆ.
ಮಳೆ ಬರುತ್ತದೆಂದು ಬಿತ್ತನೆ ಮಾಡಿದ ರೈತರು ಸಂಕಷ್ಟಎದುರಿಸುವಂತಾಗಿದೆ. ಜಲಮೂಲಗಳು ಬತ್ತಿ ಹೋಗುತ್ತಿರುವ ಹಿನ್ನೆಲೆ, ಸ್ವಲ್ಪ ಪ್ರಮಾಣದ ಭೂಮಿಯ ಬೆಳೆಗಳಿಗೆ ಮಾತ್ರ ನೀರು ಹರಿಸಲು ಸಾಧ್ಯವಾಗುತ್ತಿದೆ. ಅಲ್ಪಾವಧಿಯಲ್ಲೇ ಲಾಭ ಮಾಡಿಕೊಡುವ ಹೆಸರು ಬೆಳೆ ಇದೀಗ ಹುಸಿಯಾದಂತಾಗಿದೆ. ಅಳಿದುಳಿದ ಬೆಳೆಗಳಾದ ಹತ್ತಿ ಹಾಗೂ ಹೆಸರು ಬೆಳೆಗಳ ರಕ್ಷಿಸಲು ತುಂತುರು ನೀರಾವರಿ ಮೂಲಕ ನೀರು ಬಿಡಲಾಗುತ್ತಿದೆ
ಬೋರ್‌ವೆಲ್ ಹೊಂದಿದ್ದ ರೈತರು ಸ್ಟ್ರಿಂಕ್ಲರ್ ಮೂಲಕ ಬೆಳೆಗಳಿಗೆ ನೀರು ಹರಿಸುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ಹಾಗೂ ಗುರುಮಠಕಲ್ ಸೇರಿದಂತೆ ಮೊದಲಾದ ಕಡೆ ತುಂತುರು ನೀರಾವರಿ ಮೂಲಕ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ. ಇದು ಅಳಿದುಳಿದ ಬೆಳೆಗಳ ರಕ್ಷಿಸಲು ಅನುಕೂಲ ಆಗುತ್ತದೆ ಅನ್ನೋದು ರೈತ ಜಿತೇಂದ್ರ ರಾಠೋಡ್ ಮಾತು.