
ಆಲಮೇಲ/ಜಮಖಂಡಿ (ಏ.29): ಗುಡುಗು ಸಹಿತ ಮಳೆ ಬುಧವಾರ ರಾಜ್ಯದ ಕೆಲವು ಭಾಗಗಳಲ್ಲಿ ಕಾಣಿಸಿಕೊಂಡಿದೆ. ಭಾರೀ ಬಿರುಗಾಳಿಗೆ ಮನೆಯ ಚಾವಣಿ ಜೊತೆಗೆ ಜೋಳಿಗೆಯಲ್ಲಿ ಇದ್ದ ಮಗು ಹಾರಿಹೋಗಿ ಸಾವನ್ನಪ್ಪಿದ್ದರೆ, ಮತ್ತೊಬ್ಬ ಸಿಡಿಲಿಗೆ ಸಾವನ್ನಪ್ಪಿರುವ ಘಟನೆ ಕೂಡ ನಡೆದಿದೆ.
ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಸುರಗಿಹಳ್ಳ ಗ್ರಾಮದಲ್ಲಿ ಅಬ್ದುಲರಹೆಮಾನ್ ಕಾಶೀಮಸಾಬ್ ಕಸಾಬ್ ಅವರ 4 ತಿಂಗಳಿನ ಹಸುಗೂಸು ಮತ್ತು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಲ್ಹಳ್ಳಿ ಗ್ರಾಮದ ಮರಿಯಪ್ಪ ಧರಿಯಪ್ಪ ಮಾದರ(27) ಸಾವನ್ನಪ್ಪಿದವರು.
ಲಕ್ಷ ಲಕ್ಷ ಕೇಳಿದ ಆಸ್ಪತ್ರೆ: ಪತಿ ಶವವನ್ನೇ ಬಿಟ್ಟುಹೋದ ಪತ್ನಿ..! ..
ಮಂಗಳವಾರ ರಾತ್ರಿ ಸುರಗಿಹಳ್ಳಿ ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ಬಿರುಗಾಳಿ ಬೀಸಿದೆ. ಪರಿಣಾಮ ಮನೆಯ ಚಾವಣೆ ಹಾರಿ ಹೋಗಿದೆ. ದುರಾದೃಷ್ಟವಶಾತ್ ಚಾವಣಿಗೆ ಕಟ್ಟಲಾಗಿದ್ದ ಜೋಳಿಗೆಯಲ್ಲಿದ್ದ ನಾಲ್ಕು ವರ್ಷದ ಮಗು ಕೂಡ ಹಾರಿ ಹೋಗಿ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದೆ. ಪರಿಣಾಮ ಮಗು ಸಾವನ್ನಪ್ಪಿದೆ. ಇನ್ನು ಜಮಖಂಡಿ ತಾಲೂಕಿನ ಮರಿಯಪ್ಪ ಧರಿಯಪ್ಪ ಮಾದರ ಬೆಳಗ್ಗೆ ಬಹಿರ್ದೆಸೆಗೆ ತೆರಳಿದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇನ್ನು ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಬುಧವಾರ ಸಂಜೆಯ ನಂತರ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಲಕ್ಕವಳ್ಳಿ ಹಾಗೂ ಅಜ್ಜಂಪುರದಲ್ಲಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಬಂದಿದ್ದು, ಎನ್.ಆರ್.ಪುರ ಪಟ್ಟಣದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಗುಡುಗು ಸಹಿತ ಮಳೆಯಾಗಿದೆ.