ಹೊಳೆ​ ಆ​ಲೂ​ರು ಮಕ್ಕಳಿಗೆ ಸಾಂಕ್ರಾಮಿಕ ರೋಗಗಳ ಭೀತಿ

By Web DeskFirst Published Oct 4, 2019, 10:22 AM IST
Highlights

ಆರೋಗ್ಯ ಇಲಾಖೆ ನಿರ್ಲಕ್ಷ್ಯ: ಮಳೆ, ಪ್ರವಾಹದ ನೀರು ನಿಂತು ಅನಾ​ರೋಗ್ಯ ಉಲ್ಬ​ಣ| ತಿಂಗಳ ಹಿಂದಷ್ಟೇ ಭೀಕರ ಪ್ರವಾಹದಿಂದ ಕಂಗೆಟ್ಟಿದ್ದ ಹೊಳೆ ಆಲೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈಗ ಸಾಂಕ್ರಾಮಿಕ ರೋಗದ ಬಾಧೆ ಕಾಣಿಸಿಕೊಂಡಿದೆ|ಈ ಹಿಂದೆ ಸುರಿದ ಭಾರಿ ಮಳೆ ನೀರು ನಿಂತು ಸೊಳ್ಳೆಗಳು ಹೆಚ್ಚಾಗಿ ಮಕ್ಕಳಲ್ಲಿ ಜ್ವರ ಕಾಣಿಸಿಕೊಳ್ಳುತ್ತಿದೆ | ಕೆಲವೊಂದು ಮನೆಗಳಲ್ಲಿ ಕಟುಂಬದ ಎಲ್ಲರೂ ಜ್ವರ, ನೆಗಡಿ, ಕೆಮ್ಮಿನಿಂದ ಬಳಲುತ್ತಿ​ದ್ದಾ​ರೆ|
 

ಹೊಳೆಆಲೂರ[ಅ.4]: ತಿಂಗಳ ಹಿಂದಷ್ಟೇ ಭೀಕರ ಪ್ರವಾಹದಿಂದ ಕಂಗೆಟ್ಟಿದ್ದ ಹೊಳೆ ಆಲೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈಗ ಸಾಂಕ್ರಾಮಿಕ ರೋಗದ ಬಾಧೆ ಕಾಣಿಸಿಕೊಂಡಿದೆ.

ಹೊಳೆಆಲೂರ ಸೇರಿದಂತೆ ಹೋಬಳಿಯ ಗಾಡಗೋಳಿ, ಹೊಳೆಮಣ್ಣೂರ, ಮೆಣಸಗಿ, ಗುಳುಗುಂದಿ, ಅಮರಗೋಳ, ಬಸರಕೋಡ, ಬಿ.ಎಸ್‌. ಬೇಲೇರಿ, ಹೊಳೆಹಡಗಲಿ, ಕುರವಿನಕೊಪ್ಪ ಗ್ರಾಮಗಳಲ್ಲಿ ಪ್ರವಾಹ ನೀರಿನ ಅವಾಂತರ ಇನ್ನೂ ಕಡಿಮೆ ಆಗಿಲ್ಲ. ಇನ್ನುಳಿದ ಬೆನಹಾಳ, ಹುನಗುಂಡಿ, ಸೋಮನಕಟ್ಟಿ, ಕರಕಿಕಟ್ಟಿ, ಅಸೂಟಿ, ಮಾಳವಾಡ ಹಿಡಿದು ಅನೇಕ ಗ್ರಾಮಗಳಲ್ಲಿ ಈ ಹಿಂದೆ ಸುರಿದ ಭಾರಿ ಮಳೆ ನೀರು ನಿಂತು ಸೊಳ್ಳೆಗಳು ಹೆಚ್ಚಾಗಿ ಮಕ್ಕಳಲ್ಲಿ ಜ್ವರ ಕಾಣಿಸಿಕೊಳ್ಳುತ್ತಿದೆ. ಕೆಲವೊಂದು ಮನೆಗಳಲ್ಲಿ ಕಟುಂಬದ ಎಲ್ಲರೂ ಜ್ವರ, ನೆಗಡಿ, ಕೆಮ್ಮಿನಿಂದ ಬಳಲುತ್ತಿ​ದ್ದಾ​ರೆ.

ಗಮನ ಹರಿಸದ ಅಧಿಕಾರಿಗಳು 

ಇಲ್ಲಿ ಪ್ರವಾಹ ಬಂದ ಸಂದರ್ಭ ಪ್ರತಿ ಮನೆಗಳಿಗೆ ತೆರಳಿ ರೋಗ ನಿರೋಧಕ ಮಾತ್ರೆ, ವಾಂತಿ ಭೇದಿ ಮಾತ್ರೆಗಳನ್ನು ನೀಡಿದ್ದರು. ಸೊಳ್ಳೆಗಳು ಹಾವಳಿ ತಡೆಯ ಕುರಿತಂತೆ ಕ್ರಮಗಳನ್ನು ಸಹ ಕೈಗೊಳ್ಳಲಾಗಿತ್ತು. ಆದರೆ ಪ್ರವಾಹ ಇಳಿದ ಬಳಿಕ ಇಲ್ಲಿನ ಜನರ ಗೋಳು ಕೇಳುವವರಿಲ್ಲವಾಗಿದೆ. ಇದೀಗ ಸೊಳ್ಳೆಗಳ ಹಾವಳಿ ವಿಪರೀತವಾಗಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು ಇತ್ತ ಗಮನವನ್ನೇ ಹರಿಸುತ್ತಿಲ್ಲ. ಗ್ರಾಮ ಪಂಚಾಯತಿ, ಜಿಲ್ಲಾಡಳಿತ ಸಹ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಸಾಂಕ್ರಾಮಿಕ ರೋಗದಿಂದ ಜನ ತತ್ತರಿಸಿದರೂ ಯಾರೊಬ್ಬರೂ ಕ್ಯಾರೆ ಎನ್ನುತ್ತಿಲ್ಲ. ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಹೊಳೆಆಲೂರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದು, 5 ಉಪ ಕೇಂದ್ರಗಳೂ ಇವೆ. ಪ್ರತಿ ಗ್ರಾಮಗಳಲ್ಲಿ ಒಬ್ಬರು ಆರೋಗ್ಯ ಸಹಾಯಕಿಯರಿದ್ದಾರೆ ಮತ್ತು ಗ್ರಾಮಗಳಲ್ಲಿ ವಾರ್ಡ್‌ಗೊಬ್ಬರು ಆಶಾ ಕಾರ್ಯಕರ್ತೆಯರು ಇದ್ದಾರೆ. ಆದರೂ ಸಹ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಪ್ರತಿ ದಿನ ಜ್ವರ, ನೆಗಡಿ, ಕೆಮ್ಮು ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಚಿಕ್ಕ ಮಕ್ಕಳೂ ಸಹ ಜ್ವರದಿಂದ ಬಳಲುತ್ತಿದ್ದು, ಏನು ಮಾಡಬೇಕೆಂದು ಗ್ರಾಮಸ್ಥರು ಚಿಂತಿತರಾಗಿದ್ದಾರೆ. ಪ್ರತಿ ನಿತ್ಯ ಹೊಳೆ ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರ, ರೋಣ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

ಗಂಭೀರ ಸ್ವರೂಪ ಪಡೆದ ರೋಗಿಗಳನ್ನು ಇಲ್ಲಿಂದ ಬಾಗಲಕೋಟೆ. ಗದಗ, ಹುಬ್ಬಳ್ಳಿ, ಬದಾಮಿಗಳ ದೊಡ್ಡ ಆಸ್ಪತ್ರೆಗಳಿಗೆ ಕರೆದೊಯ್ಯಲಾಗುತ್ತಿದೆ. ಇವರಲ್ಲಿ ಮಕ್ಕಳು ಮತ್ತು ವೃದ್ಧರ ಸಂಖ್ಯೆಯೇ ಹೆಚ್ಚಾಗಿದೆ. ಈ ಸಾಂಕ್ರಾಮಿಕ ರೋಗಕ್ಕೆ ಸೊಳ್ಳೆಗಳ ಹಾವಳಿಯೇ ಕಾರಣ. ಇದರ ಜೊತೆ ಅಶುದ್ಧ ಕುಡಿಯುವ ನೀರೂ ಸಹ ಸಮಸ್ಯೆಯನ್ನು ಹೆಚ್ಚಿಸಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಬಗ್ಗೆ ಮಾತನಾಡಿದ ಹೊಳೆಆಲೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶಿವಲೀಲಾ ಸಂಗಳದ ಅವರು, ಪ್ರವಾ​ಹ​ಪೀ​ಡಿತ ಜನ​ವ​ಸತಿ ಪ್ರದೇ​ಶ​ದಲ್ಲಿ ನೀರು ನಿಂತಿರೆ, ಅದು ನಮ್ಮ ತಪ್ಪಲ್ಲ. ಈಗಾಗಲೇ ನಾವು ಅಲ್ಲಿ ನೀರು ನಿಲ್ಲ​ದಂತೆ ಕ್ರಮ​ಕೈ​ಗೊ​ಳ್ಳಲು ಅಲ್ಲಿನ ಗ್ರಾಮ ಪಂಚಾಯಿತಿಗಳಿಗೆ ಎರಡು ಬಾರಿ ನಮ್ಮ ಇಲಾಖೆ ವತಿ​ಯಿಂದ ಮನವಿ ಪತ್ರ ನೀಡಿದ್ದೇವೆ. ಗ್ರಾಮಗಳಲ್ಲಿ ಆರೋಗ್ಯ ಸಹಾಯಕರನ್ನು ಕಳುಹಿಸಿ ಪೌಡರ್‌, ಫಾಗಿಂಗ್‌, ಜ್ವರ ತಡೆಗಟ್ಟಲು ಎಲ್ಲ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ. 

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಹೊಳೆ ಆಲೂರು ಕಿರಿಯ ಆರೋಗ್ಯ ಸಹಾಯಕ ಶರಣಗೌಡ ಪಾಟೀಲ ಅವರು, ನಾವು ಎಲ್ಲ ಗ್ರಾಮಗಳಲ್ಲಿ ಲಾರ್ವಾ ಸರ್ವೆ ಮಾಡುತ್ತಿದ್ದೇವೆ. ರೋಗಗಳು ಕಂಡುಬಂದಲ್ಲಿ ನಾವು ಹೆಚ್ಚಿನ ಕ್ರಮ ಕೈಗೊಳ್ಳುತ್ತೇವೆ. ಪ್ರತಿ ಗ್ರಾಮದಲ್ಲಿ ಪೌಡರ್‌ ಹಾಕಿ​ದ್ದೇವೆ. ಸೊಳ್ಳೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ. 

click me!