ಬೆಂಗಳೂರು : ಮೆಟ್ರೋ ಛಾವಣಿಯಿಂದ ಕಳಚಿ ಬಿದ್ದ ಹಲಗೆ, ಇಟ್ಟಿಗೆ!

By Kannadaprabha NewsFirst Published Oct 4, 2019, 10:06 AM IST
Highlights

ಬೆಂಗಳೂರಿನ ಮೆಟ್ರೋ ನಿಲ್ದಾಣ ಒಂದರಲ್ಲಿ ಛಾವಣಿ ಕುಸಿದಿದೆ. ಇದರಿಂದ ಭಾರೀ ಅನಾಹುತ ಒಂದು ತಪ್ಪಿದೆ. 

ಬೆಂಗಳೂರು [ಸೆ.04]:  ‘ನಮ್ಮ ಮೆಟ್ರೋ’ ನಾಗಸಂದ್ರ- ಯಲಚೇನಹಳ್ಳಿ (ಹಸಿರು ಮಾರ್ಗ) ಮಾರ್ಗದ ನ್ಯಾಷನಲ್‌ ಕಾಲೇಜು ನಿಲ್ದಾಣದಲ್ಲಿ ಏಕಾಏಕಿ ಛಾವಣಿ ಹಲಗೆ ಮತ್ತು ಇಟ್ಟಿಗೆ ಕುಸಿದು ಬಿದ್ದಿದ್ದು, ಅನಾಹುತವೊಂದು ತಪ್ಪಿದೆ.

ಸೋಮವಾರ ರಾತ್ರಿ ಘಟನೆ ನಡೆದಿದ್ದು, ನಿಲ್ದಾಣದ ಪ್ರವೇಶ ದ್ವಾರ ಸಂಖ್ಯೆ 13ರಲ್ಲಿ ಇದ್ದಕ್ಕಿದ್ದಂತೆ ಛಾವಣಿ ಹಲಗೆ, ಇಟ್ಟಿಗೆ ಕುಸಿದಿದೆ. ಘಟನಾ ಸ್ಥಳದಲ್ಲಿದ್ದ ನಾಲ್ವರು ಮೆಟ್ರೋ ಪ್ರಯಾಣಿಕರು ಕೆಲವೇ ಅಡಿಗಳ ಅಂತರದಲ್ಲಿ ಅನಾಹುತದಿಂದ ಪಾರಾಗಿದ್ದಾರೆ.

ನಿಲ್ದಾಣದ ಛಾವಣಿಗೆ ಅಳವಡಿಸಿದ್ದ ಹಲಗೆಗಳು ಮತ್ತು ಇಟ್ಟಿಗೆ ಕುಸಿದು ಬೀಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹಲಗೆ ಮತ್ತು ಇಟ್ಟಿಗೆ ವಿದ್ಯುತ್‌ ಚಾಲಿತ ಪ್ರವೇಶ ದ್ವಾರದ (ಅಟೋಮೆಟಿಕ್‌ ಫೇರ್‌ ಕಲೆಕ್ಷನ್‌- ಎಎಫ್‌ಸಿ) ಮೇಲೆ ಬಿದ್ದಿದ್ದರಿಂದ ಪ್ರವೇಶ ದ್ವಾರಕ್ಕೆ ಹಾನಿಯಾಗಿದೆ. ಕೂಡಲೇ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಇತರ ಪ್ರಯಾಣಿಕರನ್ನು ಮತ್ತೊಂದು ಪ್ರವೇಶ ದ್ವಾರದಿಂದ ಪ್ರವೇಶಿಸಲು ಅನುವು ಮಾಡಿಕೊಟ್ಟಿದ್ದಾರೆ.

ಮೆಟ್ರೋ ರೈಲುಗಳ ಸಂಚಾರದ ವೇಗಕ್ಕೆ ಉಂಟಾದ ಕಂಪನದಿಂದ ಚಾವಣಿಯ ಹಲಗೆ ಮತ್ತು ಇಟ್ಟಿಗೆ ಸಡಿಲಗೊಂಡು ಬಿದ್ದಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಳ್ಳಲಾಗುವುದು.ಪ್ರಯಾಣಿಕರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್‌ ಮನವಿ ಮಾಡಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳಪೆ ಕಾಮಗಾರಿ: ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಆರ್‌ಸಿಎಲ್‌ ಎಂಪ್ಲಾಯಿಸ್‌ ಯೂನಿಯನ್‌ ಉಪಾಧ್ಯಕ್ಷ ಸೂರ್ಯನಾರಾಯಣಮೂರ್ತಿ, ಮೆಟ್ರೋದಲ್ಲಿ ಕಳಪೆ ಕಾಮಗಾರಿ ನಡೆಯುತ್ತಿರುವ ಕುರಿತು ಅನೇಕ ಬಾರಿ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಮೆಟ್ರೋ ಪಿಲ್ಲರ್‌ಗಳಲ್ಲಿ ಬಿರುಕು ಬಿಟ್ಟಪ್ರಕರಣಗಳು ಆಗಾಗ ನಡೆಯುತ್ತಿವೆ. ಇದುವರೆಗೂ ಅಧಿಕಾರಿಗಳ ಮೇಲಾಗಲೀ ಅಥವಾ ಗುತ್ತಿಗೆ ದಾರರ ಮೇಲಾಗಲೀ ನಿಗಮದ ಆಡಳಿತ ಮಂಡಳಿ ಕಾನೂನು ಕ್ರಮ ಜರುಗಿಸಿಲ್ಲ. ಕಳೆದ ಒಂದು ತಿಂಗಳ ಹಿಂದೆಯೇ ನ್ಯಾಷನಲ್‌ ಕಾಲೇಜು ಮೆಟ್ರೋ ನಿಲ್ದಾಣದ ಅವ್ಯವಸ್ಥೆ ಬಗ್ಗೆ ಸ್ಟೇಷನ್‌ ಕಂಟ್ರೋಲರ್‌ಗೆ ದೂರು ನೀಡಿದ್ದರೂ ಸರಿಪಡಿಸುವ ಕೆಲಸವನ್ನು ಬಿಎಂಆರ್‌ಸಿಎಲ್‌ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ನಿಗಮದ ಆಡಳಿತ ಮಂಡಳಿ ಮೆಟ್ರೋ ಪ್ರಯಾಣಿಕರ ಸುರಕ್ಷತೆ ಬಗ್ಗೆ ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರೆದರೆ ಆಡಳಿತ ಮಂಡಳಿ ವಿರುದ್ಧ ಸರ್ಕಾರಗಳಿಗೆ ಬಿಎಂಆರ್‌ಸಿಎಲ್‌ ನೌಕರರ ಸಂಘ ದೂರು ನೀಡಲಿದೆ ಎಂದು ಎಚ್ಚರಿಸಿದ್ದಾರೆ.

click me!