SSLC ಫಲಿತಾಂಶ ಹೆಚ್ಚಳಕ್ಕೆ ವಿಶೇಷ ಕಾರ್ಯಕ್ರಮ: ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಪಾಠ!

By Suvarna NewsFirst Published Dec 15, 2019, 10:42 AM IST
Highlights

ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ‘ಗುರೂಜಿ ಬಂದರು ಗುರುವಾರ’ ಎಂಬ ವಿಶೇಷ ಕಾರ್ಯಕ್ರಮ|ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ವಿ.ವಿ.ದೇಯಣ್ಣವರ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಕ್ರಮ|ಕಲಿಕೆಗೆ ಪ್ರೇರಣೆ ನೀಡುತ್ತಿರುವ ಸ್ಥಳೀಯ ಪ್ರೌಢ ಶಾಲೆಯ ಶಿಕ್ಷಕರ ಸೇವೆ ಶ್ಲಾಘನೀಯ|

ಗೋಕಾಕ(ಡಿ.15): ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ವಿ.ವಿ.ದೇಯಣ್ಣವರ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ‘ಗುರೂಜಿ ಬಂದರು ಗುರುವಾರ’ ಎಂಬ ವಿಶೇಷ ಕಾರ್ಯಕ್ರಮವನ್ನು ಕಳೆದೆರಡು ವಾರಗಳಿಂದ ಆಯೋಜಿಸಲಾಗುತ್ತಿದೆ. 

ಪ್ರತಿ ಗುರುವಾರ ಶಾಲಾವಧಿ ಬಳಿಕ ಶಾಲೆಯ 10ನೇ ವರ್ಗದ ವಿದ್ಯಾರ್ಥಿಗಳ ಮನೆ ಮನೆಗೆ ಮುಖ್ಯಾಧ್ಯಾಪಕ, ಶಿಕ್ಷಕರು ತೆರಳಿ ಹೆಚ್ಚಿನ ತರಬೇತಿ ನೀಡಲು ಆರಂಭಿಸಿದ್ದಾರೆ. ಗುರುವಾರರಂದು ಶಾಲೆಯ ಹಲವಾರು ಜನ ವಿದ್ಯಾರ್ಥಿಗಳ ಮನೆಗೆ ತೆರಳಿ ಮುಖ್ಯಾಧ್ಯಾಪಕ ರಮೇಶ ಅಳಗುಂಡಿ, ಗಣಿತ ವಿಷಯ ಶಿಕ್ಷಕ ಮಂಜುನಾಥ ಹತ್ತಿ, ಮಲ್ಹಾರಿ ಪೋಳ ಅವರು ವಿದ್ಯಾರ್ಥಿಗಳ ಮನೆಗಳಲ್ಲಿಯೇ ಸುಮಾರು 1 ಗಂಟೆಗಳ ಕಾಲ ಉಳಿದು ಗಣಿತ ವಿಷಯದಲ್ಲಿರುವ ಕಠಿಣ ಪಾಠಗಳು, ಪರೀಕ್ಷೆ ಬರೆಯುವ ವಿಧಾನ ಸೇರಿದಂತೆ ಹಲವಾರು ವಿಷಯಗಳ ಕುರಿತು ಹೇಳಿಕೊಡುತ್ತಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರತಿ ಗುರುವಾರಕ್ಕೂಮ್ಮೆ ಶಿಕ್ಷಕರು ಮನೆ ಮನೆಗೆ ತಮ್ಮ ವಿಷಯದ ಕುರಿತು ಪಾಠ ಪ್ರವಚನ ಹೇಳಿಕೊಡುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಗ್ಗೆ ಮಕ್ಕಳಲ್ಲಿ ಅರಿವು, ಭಯ ಮುಕ್ತ ವಾತಾವರಣ ನಿರ್ಮಾಣ ಹೋಗಲಾಡಿಸುವುದರ ಜೊತೆಗೆ ಮಕ್ಕಳ ನಿತ್ಯದ ಕಲಿಕೆಗೆ ಪ್ರೇರಣೆ ಹಾಗೂ ಕಲಿಕೆ ಸಮಸ್ಯೆಗಳಿಗೆ ಪರಿಹಾರ, ಪಾಲಕರಿಗೆ ಸಲಹೆ ನೀಡಿದಂತಾಗುತ್ತದೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ರಮೇಶ ಅಳಗುಂಡಿ ತಿಳಿಸಿದ್ದಾರೆ

ಈ ಬಗ್ಗೆ ಮಾತನಾಡಿದ ಮೂಡಲಗಿ ವಲಯ ಬಿಇಒ ಅಜಿತ ಮನ್ನಿಕೇರಿ ಅವರು, ಗುರೂಜಿ ಬಂದರು ಗುರುವಾರ ಎಂಬ ವಿನೂತನ ಕಾರ್ಯಕ್ರಮ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಾರ್ಷಿಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಪ್ರೇರಣಾ ಪೂರಕವಾಗಿದೆ. ವಿದ್ಯಾರ್ಥಿಗಳ ಮನೆಗೆ ಶಿಕ್ಷಕರು ಹೋಗುವುದರಿಂದ ಮಕ್ಕಳ ಕಲಿಕೆಗೆ ಮತ್ತಷ್ಟು ಪ್ರೇರಣೆ ಜೊತೆಗೆ ವಿದ್ಯಾರ್ಥಿ, ಪಾಲಕರು ಹಾಗೂ ಶಿಕ್ಷಕರ ನಡುವಿನ ಅವಿನಾಭಾವ ಸಂಬಂಧ ಸಹ ಬೆಸೆಯುತ್ತದೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಜೀವನದಲ್ಲಿ 10ನೇ ತರಗತಿ ಬಹುಮುಖ್ಯವಾದ ಘಟ್ಟ. ವಿದ್ಯಾರ್ಥಿಗಳಿಗೆ ಈ ವಿನೂತನ ವಿಶೇಷ ಕಾರ್ಯಕ್ರಮದ ಮೂಲಕ ಕಲಿಕೆಗೆ ಪ್ರೇರಣೆ ನೀಡುತ್ತಿರುವ ಸ್ಥಳೀಯ ಪ್ರೌಢ ಶಾಲೆಯ ಶಿಕ್ಷಕರ ಸೇವೆ ಶ್ಲಾಘನೀಯವಾಗಿದೆ ಎಂದು ಗೋಕಾಕ ತಾಲೂಕಿನ ಸಪ್ರೌಶಾಲೆ ಬೆಟಗೇರಿ ಎಸ್‌ಡಿಎಂಸಿ ವಿವಿಡಿ ಅಧ್ಯಕ್ಷರು ಕುತುಬು ಮಿರ್ಜಾನಾಯ್ಕ ಅವರು ಹೇಳಿದ್ದಾರೆ.
 

click me!