ಧಾರವಾಡ: ರೈತರಿಗೆ ವಿಕಾಸ ವರ್ಷ ವಿಶೇಷ ಕೃಷಿ ಸಾಲ

By Kannadaprabha News  |  First Published Jun 4, 2020, 7:35 AM IST

ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಅಡಿಯಲ್ಲಿ ಕೃಷಿ ಸಾಲವಾಗಿ 3700 ಕೋಟಿ ವಿತರಿಸಲು ಯೋಜನೆ ರೂಪಿಸಿದ ಬ್ಯಾಂಕ್‌| ಖಾತೆ ಇಲ್ಲ ಎಂಬ ಸಣ್ಣ ಕಾರಣಕ್ಕೆ ಸಾಲ ನಿರಾಕರಿಸಬಾರದು| ಕೃಷಿರಂಗಕ್ಕೆ ಸಾಲ ಸೌಲಭ್ಯದ ಮೊತ್ತವನ್ನು ಹೆಚ್ಚಿಸಲು ತನ್ನದೇ ಆದ ಕೃಷಿ ಸಾಲ ಯೋಜನೆ ರೂಪಿಸಿದ ಬ್ಯಾಂಕ್‌| 


ಧಾರವಾಡ(ಜೂ.04): ಕೃಷಿಕರ ಆರ್ಥಿಕ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ತನ್ನ ಕಾರ್ಯಕ್ಷೇತ್ರದ ಎಲ್ಲ ಅರ್ಹ ರೈತರನ್ನು ಸೆಪ್ಟೆಂಬರ್‌ ತಿಂಗಳ ಅಂತ್ಯದ ಒಳಗಾಗಿ ತಲುಪಲು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಯೋಜನಾ ಬದ್ಧವಾಗಿದೆ. ಈ ನಿಟ್ಟಿನಲ್ಲಿ ವಿಕಾಸ ವರ್ಷ ಎಂಬ ವಿಶೇಷ ಕೃಷಿ ಸಾಲ ಅಭಿಯಾನ ಪ್ರಾರಂಭಿಸಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಪಿ. ಗೋಪಿ ಕೃಷ್ಣ ತಿಳಿಸಿದ್ದಾರೆ.

ಈ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಈವರೆಗೆ ಬ್ಯಾಂಕ್‌ ಸಾಲದಿಂದ ದೂರವಿರುವ ರೈತರ ಸಮೀಕ್ಷೆ ನಡೆದಿದ್ದು ಈ ಸಂಬಂಧ ರೈತಕೂಟ, ಸ್ವಯಂ ಸೇವಾ ಸಂಸ್ಥೆ ಹಾಗೂ ಕೃಷಿ ಇಲಾಖೆಗಳ ಸಹಾಯ ಪಡೆಯಲಾಗುತ್ತಿದೆ . ಪ್ರಸ್ತುತ ಸಾಲಿನಲ್ಲಿ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಅಡಿಯಲ್ಲಿ ಕೃಷಿ ಸಾಲವಾಗಿ 3700 ಕೋಟಿ ವಿತರಿಸಲು ಬ್ಯಾಂಕ್‌ ಯೋಜನೆ ರೂಪಿಸಿದೆ. ಖಾತೆ ಇಲ್ಲ ಎಂಬ ಸಣ್ಣ ಕಾರಣಕ್ಕೆ ಸಾಲ ನಿರಾಕರಿಸಬಾರದು ಎಂದು ಎಲ್ಲ 633 ಶಾಖೆಗಳಿಗೆ ಸ್ಪಷ್ಟನಿರ್ದೇಶನ ನೀಡಲಾಗಿದೆ ಎಂದೂ ಗೋಪಿ ಕೃಷ್ಣ ತಿಳಿಸಿದರು.

Latest Videos

undefined

ನವಲಗುಂದ: ಬಿತ್ತನೆ ಬೀಜಕ್ಕೆ ರೈತರ ಅಲೆದಾಟ

ಮುಂಗಾರು ಪ್ರಾರಂಭದ ಎಲ್ಲ ಉತ್ತಮ ಲಕ್ಷಣಗಳಿದ್ದು ಅರ್ಹ ರೈತರು ಹೊಸ ಬೆಳೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಮತ್ತು ಈಗಾಗಲೆ ಬೆಳೆಸಾಲ ಪಡೆದು ತುಂಬದಿರುವ ರೈತರು ಕೂಡ ತಮ್ಮ ಬೆಳೆಸಾಲವನ್ನು ಮರುಪಾವತಿಸಿ ಹೆಚ್ಚಿನ ಮಿತಿಯಲ್ಲಿ ಸಾಲ ಸೌಲಭ್ಯ ಪಡೆಯಬಹುದಾಗಿದೆ. ಅವಧಿಯೊಳಗಡೆ ಪಾವತಿಸುವ ರೈತರಿಗೆ ಸಾಲದ ಮಿತಿಗನುಸರಿಸಿ ಶೇ. 4ರ ವರೆಗೂ ಬಡ್ಡಿ ಸಹಾಯಧನದ ಲಭ್ಯವಿದ್ದು ಬಹಳಷ್ಟುರೈತರು ಅವಧಿಯೊಳಗಡೆ ಮರುಪಾವತಿಸದೆ ಈ ಸೌಲಭ್ಯದಿಂದ ವಂಚಿತರಾಗಿದ್ದಾರೆಂದು ಅವರು ಹೇಳಿದರು.

ಕೃಷಿರಂಗಕ್ಕೆ ಸಾಲ ಸೌಲಭ್ಯದ ಮೊತ್ತವನ್ನು ಹೆಚ್ಚಿಸಲು ಬ್ಯಾಂಕ್‌ ತನ್ನದೇ ಆದ ಕೃಷಿ ಸಾಲ ಯೋಜನೆಯನ್ನು ರೂಪಿಸಿದೆ. ಹಾಗೆಯೇ ಬೆಳೆ ಸಾಲ ವಿತರಣೆಗೆ ಚುರುಕು ನೀಡಲು ಮತ್ತು ಸಕಾಲಿಕ ಪರಾಮರ್ಶೆಗೆ ಬ್ಯಾಂಕ್‌ ಪ್ರತಿ ಪ್ರಾದೇಶಿಕ ಕಾರ್ಯಾಲಯದಲ್ಲೂ ಓರ್ವ ಹಿರಿಯ ಅಧಿಕಾರಿಯನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಿದೆ ಎಂದೂ ಗೋಪಿ ಕೃಷ್ಣ ಹೇಳಿದರು.

ಕೃಷಿಕರ ಅಭ್ಯುದಯ ಗಮನದಲ್ಲಿಟ್ಟು ಬ್ಯಾಂಕ್‌ ತನ್ನ ಸಾಲ ನೀತಿಯನ್ನು ಪರಿಷ್ಕರಿಸಿದ್ದು ರೈತರು ಸಾಲ ಸಂಬಂಧಿ ಸಂಶಯಗಳನ್ನು ಪರಿಹರಿಸಿಕೊಳ್ಳಲು ಬ್ಯಾಂಕಿನ ಸಹಾಯವಾಣಿಯನ್ನು (9108699803) ಸಂಪರ್ಕಿಸಲೂ ಅವರು ಕೋರಿದರು.
 

click me!