ನವಲಗುಂದ: ಬಿತ್ತನೆ ಬೀಜಕ್ಕೆ ರೈತರ ಅಲೆದಾಟ

By Kannadaprabha News  |  First Published Jun 4, 2020, 7:25 AM IST

ಹೆಸರು ಬೀಜ ಸಿಗದೇ ರೈತ ಕಂಗಾಲು| ಅಧಿಕಾರಿಗಳಿಂದ ಹಾರಿಕೆ ಉತ್ತರ| ಪ್ರತಿನಿತ್ಯ ರೈತ ಸಂಪರ್ಕಕ್ಕೆ ಅಲೆಯುವುದೇ ರೈತರ ಕೆಲಸವಾದಂತಾಗಿದೆ| ಲಾಕ್‌ಡೌನ್‌ ಸಡಿಲಿಕೆಗೊಂಡಿದೆಯಾದರೂ ಗ್ರಾಮೀಣ ಪ್ರದೇಶಗಳ ಸಂಪರ್ಕಕ್ಕೆ ಬಸ್‌ಗಳನ್ನು ಬಿಟ್ಟಿಲ್ಲ|

Farmers Faces Problems in Navalgund in Dharwad District

ಈಶ್ವರ ಜ. ಲಕ್ಕುಂಡಿ

ನವಲಗುಂದ(ಜೂ.04): ಕಳೆದ ವರ್ಷಕ್ಕಿಂತ ಈ ವರ್ಷ ರೋಹಿಣಿ ಮಳೆ ರೈತರ ಕೈ ಹಿಡಿದಿದ್ದು ಬಿತ್ತನೆಗೆ ಉತ್ಸುಕತೆಯಲ್ಲಿದ್ದಾರೆ. ಆದರೆ ಹೆಸರು ಬೀಜ ಸಿಗದೇ ಕಂಗಾಲಾಗಿದ್ದು, ಪ್ರತಿನಿತ್ಯ ರೈತ ಸಂಪರ್ಕಕ್ಕೆ ಅಲೆಯುವುದೇ ರೈತರ ಕೆಲಸವಾದಂತಾಗಿದೆ.

Tap to resize

Latest Videos

ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಹೆಸರು ಖರೀದಿಗೆ ಹಾಗೂ ಹೆಸರು ಖರೀದಿ ನೋಂದಣಿ ಚೀಟಿ ಪಡೆಯಲು ಹೆಣಗಾಡುತ್ತಿದ್ದಾರೆ. ಲಾಕ್‌ಡೌನ್‌ ಈಗ ಸಡಿಲಿಕೆಗೊಂಡಿದೆಯಾದರೂ ಗ್ರಾಮೀಣ ಪ್ರದೇಶಗಳ ಸಂಪರ್ಕಕ್ಕೆ ಬಸ್‌ಗಳನ್ನು ಬಿಟ್ಟಿಲ್ಲ. ರೈತರು ಬೇರೆ ಗ್ರಾಮಗಳಿಂದ ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಬರಲು ಹರಸಾಹಸ ಪಡುತ್ತಿದ್ದಾರೆ. ಮೊರಬ ಮತ್ತು ನವಲಗುಂದ ಹಾಗೂ ಅಣ್ಣಿಗೇರಿ ಸಂರ್ಪಕ ಕೇಂದ್ರಗಳಿವೆ. ಅವುಗಳ ಸುತ್ತಮುತ್ತಲು ಇರುವ ಗ್ರಾಮಗಳ ರೈತರು ಇಲ್ಲಿನ ರೈತ ಸಂಪರ್ಕ ಕೇಂದ್ರಗಳಿಗೆ ಆಗಮಿಸಿ ಬೀಜ ಖರೀದಿ ಮಾಡಬೇಕು.

ಜಿಟಿ ಜಿಟಿ ಮಳೆ: ಹುಬ್ಬಳ್ಳಿಯಲ್ಲಿ ಮಲೆನಾಡಿನ ವಾತಾವರಣ ಸೃಷ್ಟಿ

ಮೊದಲು ರಿಯಾಯಿತಿ ದರದಲ್ಲಿ ಹೆಸರು ಬೀಜ ಖರೀದಿಸಲು ಸರದಿ ಸಾಲಿನಲ್ಲಿ ನಿಂತು ಆಧಾರ್‌ ಕಾರ್ಡ್‌, ಖಾತೆ ಉತಾರ ಮುಂತಾದ ದಾಖಲೆ ನೀಡಬೇಕು. ರೈತ ಸಂಪರ್ಕ ಕೇಂದ್ರದವರು ರೈತರಿಗೆ ಫೋನ್‌ ಮುಖಾಂತರ ಕರೆ ಮಾಡಿ ಬರುವುದಾಗಿ ಹೇಳುತ್ತಾರೆ. ಆದರೆ ಇಲ್ಲಿ ತಾರತಮ್ಯವಾಗುತ್ತಿದೆ. ಒಂದು ಖಾತೆಗೆ 5 ಕೆಜಿಯ 3 ಪಾಕೇಟ್‌ಗಳನ್ನು ರೈತರಿಗೆ ನೀಡುತ್ತಿದ್ದಾರೆ.

ತಾಲೂಕಿನ ಗುಡಿಸಾಗರ ಗ್ರಾಮದ ರೈತ ಮಹಿಳೆ ಶಾಂತವ್ವ, ಖರೀದಿ ಚೀಟಿಗಾಗಿ ಕಳೆದ ನಾಲ್ಕು ದಿನಗಳಿಂದ ಕಚೇರಿಗೆ ಅಲೆದಾಡುತ್ತಿದ್ದಾರೆ. ಮಳೆಯನ್ನೂ ಲೆಕ್ಕಿಸದೇ ಗ್ರಾಮದಿಂದ ಬಂದು ಸರದಿಯಲ್ಲಿ ನಿಂತ ಮಹಿಳೆಗೆ ಸರಿಯಾಗಿ ಕಚೇರಿ ಸಿಬ್ಬಂದಿ ಸ್ಪಂದಿಸುತ್ತಿಲ್ಲ. ಹೆಸರು ಬೀಜ ಗೋದಾಮಿನಲ್ಲಿ ಖಾಲಿಯಾಗಿವೆ. ನಾಳೆ ಬನ್ನಿ... ನಾಳೆ ಬನ್ನಿ...! ಎನ್ನುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೀಜ ಸ್ಟಾಕ್‌ ಬಂದಾಗ ಫೋನ್‌ ಮಾಡುತ್ತೇವೆ ಆಗ ಬನ್ನಿ ಎಂದು ಅಧಿಕಾರಿಗಳು ಹೇಳ್ತಾರೆ. ನಾವು 10-12 ಕಿಮೀ ದೂರದಿಂದ ಅವರಿವರಿಗೆ ಅಂಗಲಾಚಿ ವಾಹನಗಳ ಮುಖಾಂತರ ಪಟ್ಟಣಕ್ಕೆ ಬರಬೇಕು. ಆದರೆ ಇಲ್ಲಿ ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಮೊದಲಿಗೆ ಇವರಿಗೆ ಹೆಸರು ಬೀಜಗಳು ಕೊರತೆ ಬಿಳುತ್ತವೆ ಎಂಬುದು ತಿಳಿದಿಲ್ಲವೇ? ಏಕೆ ರೈತರನ್ನು ಸತಾಯಿಸುತ್ತಾರೆ. ದಿನವಿಡಿ ಅಲೆದಾಡುವುದೇ ನಮ್ಮ ಕೆಲಸವಾದಂತಾಗಿದೆ ಎಂದು ಆರೇಕುರಹಟ್ಟಿಗ್ರಾಮದ ರೈತ ಬಸವರಾಜ ನವಲಗುಂದ ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ಹೆಸರು ಬೀಜ ಸಿಗದೇ ರೈತರು ಕಂಗಾಲಾಗಿದ್ದಂತೂ ಸತ್ಯ. ಜಿಲ್ಲಾಡಳಿತ ಬೀಜ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂಬುದು ರೈತರ ಎಚ್ಚರಿಕೆ.
ಕಳೆದ ವರ್ಷ ಹೆಸರು ಬಿತ್ತನೆ ಅವಧಿಯಲ್ಲಿ 40 ಕ್ವಿಂಟಲ್‌ವರೆಗೆ ಮಾತ್ರ ರೈತರು ಖರೀದಿ ಮಾಡಿದ್ದರು. ಆದರೆ ಈ ವರ್ಷ ಹೆಸರಿನ ಬಿತ್ತನೆ ಹೆಚ್ಚಾಗಿದೆ. ಕೇವಲ ಒಂದೇ ದಿನಕ್ಕೆ 40 ಕ್ವಿಂಟಲ್‌ವರೆಗೂ ಹೆಸರು ಖರೀದಿಯಾಗಿದೆ. ಅದ್ದರಿಂದ ಹೆಸರು ಬೀಜ ಕೊರತೆಯಾಗಿದೆ. ಅಗತ್ಯವಿರುವಷ್ಟುಬಿತ್ತನೆ ಬೀಜ ಸಿಗಲಿದೆ. ರೈತರು ಆತಂಕಕ್ಕೊಳಗಾಗಬಾರದು. ನಮ್ಮ ಸಿಬ್ಬಂದಿ ತಾರತಮ್ಯ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಅಧಿಕಾರಿ ಎಂ.ಆರ್‌. ದಂಡಗಿ ಅವರು ಹೇಳಿದ್ದಾರೆ. 
 

vuukle one pixel image
click me!
vuukle one pixel image vuukle one pixel image