ಮಹಿಳೆಯರ ಮೇಲೆ ಕಾಳಜಿ ಇದ್ದರೆ ಮಹಿಳಾ ಮೀಸಲಾತಿ ಜಾರಿ ಮಾಡಿ: ಸೌಮ್ಯ ರೆಡ್ಡಿ ಆಗ್ರಹ

Published : Apr 18, 2026, 06:42 PM IST
sowmya reddy

ಸಾರಾಂಶ

ಮಹಿಳೆಯರ ಮೇಲೆ ನಿಮಗೆ ಕಾಳಜಿ ಇದ್ದರೆ 543 ಲೋಕಸಭೆ ಸ್ಥಾನಗಳಿಗೆ ಕೂಡಲೇ ಶೇ.33 ರಷ್ಟು ಮಹಿಳಾ ಮೀಸಲಾತಿ ಜಾರಿ ಮಾಡಿ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ಆಗ್ರಹ ಮಾಡಿದ್ದಾರೆ.

ಬೆಂಗಳೂರು (ಏ.18): ಮಹಿಳಾ ಮೀಸಲಾತಿ ವಿಧೇಯಕ ಜಾರಿ ಮಾಡದೆ ಬಿಜೆಪಿ ಸರ್ಕಾರ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದೆ. ಮಹಿಳೆಯರ ಮೇಲೆ ನಿಮಗೆ ಕಾಳಜಿ ಇದ್ದರೆ 543 ಲೋಕಸಭೆ ಸ್ಥಾನಗಳಿಗೆ ಕೂಡಲೇ ಶೇ.33 ರಷ್ಟು ಮಹಿಳಾ ಮೀಸಲಾತಿ ಜಾರಿ ಮಾಡಿ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ಆಗ್ರಹ ಮಾಡಿದ್ದಾರೆ. ಮಹಿಳಾ ಮೀಸಲಾತಿ ವಿಳಂಬ ಹಾಗೂ ಕ್ಷೇತ್ರ ಪುನರ್‌ವಿಂಗಡಣೆ ಹೆಸರಿನಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಆರೋಪಿಸಿ ಕೆಪಿಸಿಸಿ ಎದುರು ಅವರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, 30 ತಿಂಗಳ ಹಿಂದೆ ಲೋಕಸಭೆ ಚುನಾವಣೆಗೆ ಆರು ತಿಂಗಳು ಇರುವಾಗ ಕೇಂದ್ರ ಬಿಜೆಪಿ ಸರ್ಕಾರ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಅಂಗೀಕಾರ ಪಡೆದರು. ಅದನ್ನು ತಕ್ಷಣದಿಂದ ಜಾರಿಗೆ ಮಾಡದೆ ದೇಶದ ಮಹಿಳೆಯರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಕಿಡಿ ಕಾರಿದರು. ಈಗ ರಾಜಕೀಯ ಸ್ವಾರ್ಥಕ್ಕಾಗಿ ಕ್ಷೇತ್ರ ಪುನರ್‌ವಿಂಗಡಣೆ ಜತೆಗೆ ಮಹಿಳಾ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ಬಂದಿದ್ದೀರಿ. ಕಳೆದ ಮೂರು ವರ್ಷ ಏನು ನಿದ್ದೆ ಮಾಡುತ್ತಿದ್ದರೇ? ನಿಮಗೆ ಕಾಳಜಿ ಇದ್ದರೆ ಕೂಡಲೇ 543 ಕ್ಷೇತ್ರಗಳಿಗೆ ಮಹಿಳಾ ಮೀಸಲಾತಿ ಜಾರಿ ಮಾಡಿ ಶೇ.33 ರಷ್ಟು ಮೀಸಲಾತಿ ಒದಗಿಸಿ ಎಂದು ಆಗ್ರಹ ಮಾಡಿದರು.

ಕ್ಷೇತ್ರ ಪುನರ್‌ವಿಂಗಡಣೆ ಜತೆ ಸೇರಿಸಬೇಡಿ

ಕೇಂದ್ರ ಸರ್ಕಾರ ಮಹಿಳೆಯರಿಗೆ ನೀಡಬೇಕಾದ ಸ್ಥಾನಮಾನ ಈ ವೇಳೆಗೆ ನೀಡಬೇಕಾಗಿತ್ತು. ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ಚುನಾವಣೆಗಾಗಿ ಕೇವಲ ಮಾತಿನಲ್ಲಿ ಮಹಿಳಾ ಶಕ್ತಿ ಎಂದು ಹೇಳುತ್ತಿದ್ದಾರೆ ಎಂದು ಸೌಮ್ಯ ರೆಡ್ಡಿ ದೂರಿದರು.

ಕ್ಷೇತ್ರ ಪುನರ್‌ವಿಂಗಡಣೆ ಮಾಡಿದರೆ ಕರ್ನಾಟಕ ಹಾಗೂ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗೆ ಮೋಸ ಆಗಲಿದೆ. ನಮ್ಮ ಕ್ಷೇತ್ರಗಳ ಸಂಖ್ಯೆ ಕುಸಿದು ಪ್ರಾತಿನಿಧ್ಯ ಕಡಿಮೆಯಾಗಲಿದೆ. ಹೀಗಾಗಿ ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಪುನರ್‌ವಿಂಗಡಣೆ ಜತೆ ಸೇರಿಸಬೇಡಿ. ಬದಲಿಗೆ ಕೂಡಲೇ 543 ಕ್ಷೇತ್ರಗಳಿಗೆ ಮಹಿಳಾ ಮೀಸಲಾತಿ ಜಾರಿ ಮಾಡಿ ಎಂದು ಆಗ್ರಹಿಸಿದರು. ಇದೇ ವೇಳೆ ಮಹಿಳಾ ಕಾರ್ಯಕರ್ತರ ಜತೆಗೆ ಭಿತ್ತಿಪತ್ರ ಹಿಡಿದು ಕರ್ನಾಟಕ ವಿರೋಧಿ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿ ಪ್ರತಿಭಟಿಸಿದರು.

PREV
Read more Articles on
click me!

Recommended Stories

ಪಶ್ಚಿಮ ಘಟ್ಟಗಳು ಭವಿಷ್ಯದ ಪೀಳಿಗೆಯ ಜೀವನಾಡಿ: ಸಚಿವ ಈಶ್ವರ್ ಖಂಡ್ರೆ
ಕಾನೂನು ಸುವ್ಯವಸ್ಥೆಯಲ್ಲಿ ಕರ್ನಾಟಕ ಪೊಲೀಸ್ ದೇಶದಲ್ಲೇ ಮೊದಲು: ಗೃಹ ಸಚಿವ ಪರಮೇಶ್ವರ್