ಸೌಜನ್ಯ ಪ್ರಕರಣದಲ್ಲಿ ಮಹತ್ವದ ಅಪ್‌ಡೇಟ್‌: ಇದೇ ಮೊದಲ ಬಾರಿಗೆ IPS ಅಧಿಕಾರಿ ನೇತೃತ್ವದಲ್ಲಿ ಮರುತನಿಖೆ

Published : Oct 03, 2026, 10:51 AM IST
Sowjanya Case Lokesh Jagalsara

ಸಾರಾಂಶ

ಸೌಜನ್ಯ ಅ*ಚಾರ ಮತ್ತು ಕೊ* ಪ್ರಕರಣದ ಮರುತನಿಖೆಯನ್ನು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಎಸ್‌ಐಟಿ ಆರಂಭಿಸಿದೆ. ಇದೇ ಮೊದಲ ಬಾರಿಗೆ ಐಪಿಎಸ್‌ ಅಧಿಕಾರಿಗಳಾದ ಎನ್. ಶಶಿಕುಮಾರ್ ಮತ್ತು ಲೋಕೇಶ್ ಜಗಲ್ಸರ್‌ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು (ಅ.3): ಸೌಜನ್ಯ ಅ*ಚಾರ ಮತ್ತು ಕೊ* ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಐಪಿಎಸ್‌ ಶ್ರೇಣಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ಎಸ್‌ಐಟಿ ಮುಖ್ಯಸ್ಥ ಎನ್‌. ಶಶಿಕುಮಾರ್‌ ಅವರು ಹಿರಿಯ ಐಪಿಎಸ್‌ ಅಧಿಕಾರಿ, ಸಿಐಡಿ ಎಸ್ಪಿಯಾಗಿದ್ದ ಲೋಕೇಶ್‌ ಜಗಲ್ಸರ್‌ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿದ್ದಾರೆ. ಸಿಸಿಬಿ ಎಸಿಪಿ ಮನೋಜ್ ಕುಮಾರ್‌ ನಾಯ್ಕ್‌ರನ್ನು ಸಹಾಯಕ ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ತನಿಖಾಧಿಕಾರಿ ಲೋಕೇಶ್‌ ಜಗಲ್ಸರ್‌ ಅವರು ಈ ಹಿಂದೆ ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಎಸ್‌ಪಿಯಾಗಿ ಹಾಗೂ ಬೆಂಗಳೂರು ನಗರದಲ್ಲಿ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಲೋಕೇಶ್ ಎಂಜಿನಿಯರಿಂಗ್ ಪದವೀಧರರಾಗಿದ್ದು, ತಾಂತ್ರಿಕ ತನಿಖೆಯಲ್ಲಿನ ಅವರ ಪರಿಣತಿ ಬಳಸಿಕೊಳ್ಳುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ನಡೆದಿದ್ದ ಬಹುಕೋಟಿ ದರೋಡೆ ಪ್ರಕರಣಗಳ ತನಿಖೆಯಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸೌಜನ್ಯ ಪ್ರಕರಣದ ಮರುತನಿಖೆಗೆ ಈಗಾಗಲೇ ಎಸ್‌ಐಟಿಗೆ 16 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತನಿಖಾ ಸಹಾಯಕರಾಗಿ ನೇಮಿಸಲಾಗಿದೆ. ಮಂಗಳೂರು ಸಿಸಿಬಿಯ ಎಸಿಪಿ ಮನೋಜ್ ಕುಮಾರ್ ನಾಯ್ಕ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಸೆ.21ರಂದು ಸುಪ್ರೀಂ ಕೋರ್ಟ್ ಪ್ರಕರಣದ ಮರು ತನಿಖೆಗೆ ನಿರ್ದೇಶನ ನೀಡಿತ್ತು. ಅದರಂತೆ ಸೆ.24ರಂದು ರಾಜ್ಯ ಸರ್ಕಾರ ಐವರು ಸದಸ್ಯರ ಎಸ್‌ಐಟಿ ರಚಿಸಿತ್ತು. ಐಜಿಪಿ ಎನ್‌. ಶಶಿಕುಮಾ‌ರ್ ತಂಡದ ಮುಖ್ಯಸ್ಥರಾಗಿದ್ದು, ಮಂಗಳೂರು ಪೊಲೀಸ್ ‌ಆಯುಕ್ತ ಸಿಎಚ್ ಸುಧೀರ್‌ ಕುಮಾರ್‌ ರೆಡ್ಡಿ, ನಿಶಾ ಜೇಮ್ಸ್, ಲೋಕೇಶ್ ಜಗಲ್ಸರ್‌ ಹಾಗೂ ವೆಂಕಟೇಶ್ ಪ್ರಸನ್ನ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿತ್ತು. ವೆಂಕಟೇಶ್‌ ಪ್ರಸನ್ನ ತಂಡದಿಂದ ಬಿಡುಗಡೆಗೊಳಿಸುವಂತೆ ಕೋರಿ ಇಲಾಖೆಗೆ ಪತ್ರ ಬರೆದಿದ್ದರು.

ಎಸ್‌ಐಟಿ ಗುರುವಾರ ಅಧಿಕೃತವಾಗಿ ಮಂಗಳೂರಿನಲ್ಲಿ ಕಾರ್ಯಾರಂಭಿಸಿದ್ದು, ಹಳೆಯ ಡಿಸಿ ಕಚೇರಿ ಆವರಣದಲ್ಲಿ ಪ್ರತ್ಯೇಕ ಕಚೇರಿ ಸ್ಥಾಪಿಸಲಾಗಿದೆ. ಹಿಂದಿನ ಸಿಐಡಿ ಮತ್ತು ಸಿಬಿಐ ತನಿಖೆಯ ದಾಖಲೆಗಳು, ಸಾಕ್ಷಿಗಳು ಹಾಗೂ ಪ್ರಕರಣ ಇತರೆ ಅಂಶಗಳನ್ನು ಪರಿಶೀಲಿಸಿ ಮಂದಿನ ತನಿಖಾ ಕಾರ್ಯತಂತ್ರ ರೂಪಿಸುವ ಕುರಿತು ಮೊದಲ ಸಭೆಯಲ್ಲಿ ತೀರ್ಮಾನಿಸಲಾಗಿದೆ.

PREV
Read more Articles on
click me!

Recommended Stories

ಕರ್ನಾಟಕ ಗಡಿಭಾಗದ ರಾಯಲಸೀಮೆಯನ್ನು ವಿಶ್ವದ ಹಣ್ಣುಗಳ ಕಣಜ ಮಾಡಲು ಆಂಧ್ರ ಬೃಹತ್‌ ಪ್ಲ್ಯಾನ್‌, 1 ಲಕ್ಷ ಕೋಟಿ ರೂ ಯೋಜನೆ ಆರಂಭ
"ಇದು ನನ್ನ ಜೀವನದ ಶ್ರೇಷ್ಠ ನಿರ್ಧಾರ!" - ಚೆನ್ನೈನಿಂದ ಸಿಲಿಕಾನ್ ಸಿಟಿಗೆ ಶಿಫ್ಟ್ ಆದ ಉದ್ಯಮಿ ಹೇಳಿದ್ದೇನು?