ಸೊರಬ ಮತದಾರರ ಪಟ್ಟಿ: 16,209 ಹೆಸರುಗಳು ಕಣ್ಮರೆ! 4081 ಮತದಾರರಿಗೆ ನೋಟಿಸ್

Kannadaprabha News   | Kannada Prabha
Published : Aug 26, 2026, 11:00 AM IST
Sorab SIR Draft Voter List Released

ಸಾರಾಂಶ

ಸೊರಬ ತಾಲೂಕಿನಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಂತರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಸುಮಾರು 16,209 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಪಟ್ಟಿಯಲ್ಲಿ ಹೆಸರು ಇಲ್ಲದವರು, ತಿದ್ದುಪಡಿ ಬಯಸುವವರು ಹಾಗೂ ಹೊಸ ಮತದಾರರು ನಿಗದಿತ ನಮೂನೆಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಸೊರಬ: ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧಿಸಿದಂತೆ ಮತದಾರರ ನೋಂದಣಾಧಿಕಾರಿ ಕೆ.ಆರ್. ಸುಜಾತಾ ಅಧ್ಯಕ್ಷತೆಯಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಚುರಪಡಿಸಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಲಾಯಿತು.

ತಹಸೀಲ್ದಾರ್ ಹಾಗೂ ಮತದಾರರ ಉಪ ನೋಂದಾಣಾಧಿಕಾರಿ ಕೆ. ಪುರಂದರ ಮಾತನಾಡಿ, ತಾಲೂಕಿನಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಕರಡು ಮತದಾರರ ಪಟ್ಟಿಯು ಬಿಡುಗಡೆಯಾಗಿದ್ದು, ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಸ್ಥಳೀಯ ಬಿಎಲ್‌ಒ ಅಥವಾ ಚುನಾವಣಾ ಆಯೋಗದ ಅಧಿಕೃತ ಜಾಲತಾಣದಲ್ಲಿ ಪರಿಶೀಲಿಸಿಕೊಳ್ಳಬಹುದು ಎಂದರು.

ಕರಡು ಮತದಾರರ ಪಟ್ಟಿಯಲ್ಲಿ 16,209 ಮತದಾರರ ಹೆಸರು ನಾಪತ್ತೆ

ಪ್ರಸ್ತುತ ಪ್ರಕಟಿಸಲಾಗಿರುವ ಕರಡು ಮತದಾರರ ಪಟ್ಟಿಯಲ್ಲಿ ಸುಮಾರು 16,209 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಇದರಲ್ಲಿ ಈವರೆಗೆ ಮ್ಯಾಪಿಂಗ್ ಆಗದಿರುವ 1183 ಮತದಾರರಿಗೆ ಹಾಗೂ ತಂದೆ-ಮಗನ ವಯಸ್ಸಿನ ಗಣನೀಯ ಅಂತರ ಸೇರಿದಂತೆ ದೋಷಪೂರಿತ ಮಾಹಿತಿ ಇರುವ (ಅನೋಮಲಿಸ್) 2894 ಮತದಾರರು ಸೇರಿದಂತೆ ಒಟ್ಟು 4081 ಮತದಾರರಿಗೆ ನೋಟಿಸ್ ನೀಡಲಾಗುತ್ತದೆ ಎಂದು ತಿಳಿಸಿದರು.

ಪಟ್ಟಿಯಲ್ಲಿ ಹೆಸರು ಇಲ್ಲದಿರುವವರು ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 23ರವರೆಗೆ ಅವಕಾಶವಿದ್ದು, ಮತದಾರರು ತಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಿಕೊಳ್ಳುವ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಲಿದೆ ಎಂದು ಮಾಹಿತಿ ನೀಡಿದರು.

ಕಳೆದ ಜೂನ್ 16ರ ಮತಪಟ್ಟಿಯಲ್ಲಿದ್ದಂತೆ ತಾಲೂಕಿನಲ್ಲಿ 1,98, 955 ಮತದಾರರಿದ್ದು, ಅವರಲ್ಲಿ 1,82,746 ಮತದಾರರ ಹೆಸರನ್ನು ಅಧಿಕೃತಗೊಳಿಸಿ, ಗಣಕೀಕರಣ ಕಾರ್ಯ ಪೂರ್ಣಗೊಳಿಸಲಾಗಿದೆ. ಅಂದರೆ, ಶೇ.91.85 ರಷ್ಟು ಪರಿಷ್ಕರಣೆ ಕಾರ್ಯಪೂರ್ಣಗೊಂಡಂತಾಗಿದೆ. ಎಸ್‌ಐಆರ್ ಪ್ರಕ್ರಿಯೆ ವೇಳೆ 16,209 ಮತದಾರರನ್ನು ''''ಎಎಸ್‌ಡಿಡಿಒ'''' ವರ್ಗಕ್ಕೆ ಸೇರಿಸಲಾಗಿದೆ. ಈ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಬರುವುದಿಲ್ಲ. ಈ ಪೈಕಿ 5,759 ಮತದಾರರು ಮೃತರಾಗಿರುವುದನ್ನು, 1,093 ಮತದಾರರು ಗೈರಾಗಿರುವುದನ್ನು ಹಾಗೂ 7822 ಮತದಾರರು ಸ್ಥಳಾಂತರಗೊಂಡಿರುವುದನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಫಾರ್ಮ್ 6 ಸಲ್ಲಿಸಿ ಮತದಾರರ ಪಟ್ಟಿಗೆ ಸೇರಲು ಅವಕಾಶ

ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಮತದಾರರ (ಎಎಸ್‌ಡಿಡಿಒ) ಪೈಕಿ ಗೈರು ಸ್ಥಳಾಂತರಗೊಂಡಿರುವ, ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅಥವಾ ತಿದ್ದುಪಡಿ ಇದ್ದರೆ, ಹೊಸ ಸೇರ್ಪಡೆಗೆ ಮತದಾರರು ನಿಗದಿತ ದಾಖಲೆಗಳೊಂದಿಗೆ ಫಾರ್ಮ್ 6 ಸಲ್ಲಿಕೆ ಮಾಡಬೇಕು. ಇದರ ಜತೆಗೆ ಅ.1ಕ್ಕೆ 18 ವರ್ಷ ತುಂಬುವ ಯುವ ಮತದಾರರು ನಿಗದಿತ ದಾಖಲೆಗಳೊಂದಿಗೆ ಫಾರ್ಮ್ 6 ಸಲ್ಲಿಸಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು. ಹೆಸರು, ವಿಳಾಸ ಬದಲಾವಣೆಗೆ ನಮೂನೆ-8 ಬಳಸಿ ಅರ್ಜಿ ಹಾಕಬಹುದು. ಮತಗಟ್ಟೆ ಅಧಿಕಾರಿಗಳ ಪರಿಶೀಲನೆಯ ನಂತರ ಆ ಮತದಾರರ ಪಟ್ಟಿಯ ಪೌರತ್ವ ದೃಢಪಟ್ಟರಷ್ಟೇ, ಅವರ ಹೆಸರನ್ನು ಅಂತಿಮ ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ ಎಂದರು.

ಸಭೆಯಲ್ಲಿ ಮತದಾರರ ನೋಂದಣಾಧಿಕಾರಿ ಕೆ.ಆರ್. ಸುಜಾತಾ, ಚುನಾವಣಾ ಶಿರಸ್ತೇದಾರ್ ವೈ.ಎಸ್. ದೀಪಕ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇದ್ದರು.

ಸೊರಬ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಎಸ್‌ಐಆರ್‌ಗೆ ಸಂಬಂಧಿಸಿದಂತೆ ಮತದಾರರ ನೋಂದಣಾಧಿಕಾರಿ ಕೆ.ಆರ್. ಸುಜಾತಾ ಅಧ್ಯಕ್ಷತೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಯಿತು.

PREV
Read more Articles on
click me!

Recommended Stories

Vijayapura: ಬೆಳ್ಳಂಬೆಳಗ್ಗೆ ಭೂತನಾಳ ಕೆರೆಯಲ್ಲಿ ತೇಲಿ ಬಂತು ಹೆಣಗಳ ರಾಶಿ; ಮಕ್ಕಳು ಸೇರಿ 6 ಮೃತದೇಹಗಳು ಪತ್ತೆ
KSRTC ಬಸ್‌ಗಳಿಗೆ ಬಂತು ಹೈಟೆಕ್ ಕಣ್ಗಾವಲು ವ್ಯವಸ್ಥೆ! ಕ್ಷಣಕ್ಷಣಕ್ಕೂ ಸಿಗಲಿದೆ ಮಾಹಿತಿ, ಏನಿದು VLTD ಡಿವೈಸ್?