Karnataka Train Service : ಬೆಂಗಳೂರಿಂದ - ತುಮಕೂರಿಗೆ ಪ್ಯಾಸೆಂಜರ್‌ ರೈಲು ಮತ್ತೆ ಆರಂಭ

By Kannadaprabha NewsFirst Published Dec 27, 2021, 10:29 AM IST
Highlights
  • :ಬೆಂಗಳೂರಿಂದ ನಿಂತಿದ್ದ ಪ್ಯಾಸೆಂಜರ್‌ ರೈಲು ಸೇವೆ ಮತ್ತೆ ಆರಂಭ
  • ಎರಡು ವಾರಗಳಲ್ಲಿ ಕೋವಿಡ್‌ ಪೂರ್ವ ಇದ್ದಂತೆ ಸಂಚಾರಕ್ಕೆ ಸಿಗಲಿದೆ ಹಸಿರು ನಿಶಾನೆ: ಶ್ಯಾಮ್‌ಸಿಂಗ್‌

 ತುಮಕೂರು (ಡಿ.27):  ಬೆಂಗಳೂರು-ಅರಸೀಕೆರೆ (Bengaluru ) ಮಧ್ಯೆ ಕೋವಿಡ್‌ (Covid)  ಪೂರ್ವ ಇದ್ದಂತೆ ಪ್ಯಾಸೆಂಜರ್‌ ರೈಲು(ಕನ್ವೆನ್ಷನಲ್‌ಟ್ರೈನ್‌) ಸಂಚಾರ ಆರಂಭಕ್ಕೆ ಆದ್ಯತೆ ನೀಡಲಿದ್ದು, ಒಂದೆರಡು ವಾರಗಳಲ್ಲಿ ಸಂಚಾರ ಆರಂಭಿಸುವುದಾಗಿ ನೈಋುತ್ಯ ರೈಲ್ವೆ ಬೆಂಗಳೂರು ವಿಭಾಗದ ಮುಖ್ಯಸ ಶ್ಯಾಮ್‌ ಸಿಂಗ್‌ ಭರವಸೆ ನೀಡಿದ್ದಾರೆ.

ನೈಋುತ್ಯ ರೈಲ್ವೇ ವಲಯದ ಬೆಂಗಳೂರು (Bengaluru) ವಿಭಾಗದ ರೈಲ್ವೇ (Train) ಪ್ರಯಾಣಿಕರ ಸಲಹಾ ಸಮಿತಿ ಸಭೆಯಲ್ಲಿ ಈ ಭರವಸೆ ನೀಡಲಾಗಿದೆ. ಸಭೆಯಲ್ಲಿ ಭಾಗವಹಿಸಿದ್ದ ಸಮಿತಿ ಸದಸ್ಯ, ವೇದಿಕೆ ಪ್ರಧಾನ ಕಾರ್ಯದರ್ಶಿ ಕರಣಂ ರಮೇಶ್‌ ಅವರು ಸಭೆಯಲ್ಲಿ ಮಂಡಿಸಿದ ಹಲವಾರು ಬೇಡಿಕೆಗಳನ್ನು ಸಲ್ಲಿಸಿ ಅಧಿಕಾರಿಗಳ ಗಮನ ಸೆಳೆದರು.

ಕೋವಿಡ್‌ ಪೂರ್ವದ ಎಲ್ಲ ಪ್ಯಾಸೆಂಜರ್‌ ರೈಲುಗಳ ಸಂಚಾರವನ್ನು ಮುಂಚಿನಂತೆಯೇ ಪುನರಾರಂಭಿಸಬೇಕೆಂದು ಅವರು, ಆದ್ಯತೆಯ ಮೇರೆಗೆ ಮೂರು ನಾಲ್ಕು ರೈಲುಗಳ ಸಂಚಾರವನ್ನಾದರೂ ತ್ವರಿತಗತಿಯಲ್ಲಿ ಆರಂಭಿಸಲು ಒತ್ತಾಯಿಸಿದರು.

ಮೈಸೂರು-ಅರಸೀಕೆರೆ (Mysuru)  ಮಧ್ಯೆ ಪ್ರಸ್ತುತ ಸಂಚರಿಸುತ್ತಿರುವ ಡೆಮು ರೈಲಿಗೆ ಬದಲಾಗಿ ಮಾಮೂಲಿ 18-20 ಕೋಚ್‌ಗಳ ಪ್ಯಾಸೆಂಜರ್‌ ರೈಲು ಸಂಚಾರ ಆರಂಭಿಸಬೇಕು. ಬೆಳಗ್ಗೆ 6.30ಕ್ಕೆ ಬೆಂಗಳೂರಿನಿಂದ ಹೊರಡುತ್ತಿದ್ದ ಬೆಂಗಳೂರು-ಶಿವಮೊಗ್ಗ ಫಾಸ್ಟ್‌ ಪ್ಯಾಸೆಂಜರ್‌ (ಮಹಾಲಕ್ಷ್ಮಿ) ರೈಲು ಪುನಾರಂಭಗೊಳ್ಳಬೇಕು. ಮಲ್ಲಸಂದ್ರ ಬಳಿ ರೈಲ್ವೇಗೇಟ್‌ ಇದ್ದು, ಈ ಸ್ಥಳದಲ್ಲಿ ಕೆಳಮಾರ್ಗ (ಆರ್‌ಯುಬಿ) ಅಥವಾ ಮೇಲ್ಮಾರ್ಗ (ಆರ್‌ಓಬಿ) ನಿರ್ಮಿಸಿ ಸಾವಿರಾರು ಜನರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು, ತುಮಕೂರು (Tumakuru) ರೈಲು ನಿಲ್ದಾಣದ ಶಾಂತಿ ನಗರಕಡೆಯಿಂದ ಒಳಗೆ ಬರಲು ವಿಕೆಡ್‌ಗೇಟ್‌ ನಿರ್ಮಿಸಬೇಕೆಂದು ಮನವಿ ಮಾಡಿದರು.

ಸಭೆಯ ನಂತರ ಸೀನಿಯರ್‌ ಡಿಓಎಮ್‌ ಅನಿಲ್‌ ಶಾಸ್ತ್ರಿ ಅವರನ್ನು ಭೇಟಿ ಮಾಡಿ ಬೆಳಗ್ಗೆ 8 ಗಂಟೆಗೆ ತುಮಕೂರಿನಿಂದ ಹೊರಡುತ್ತಿರುವ ಡೆಮು ರೈಲನ್ನು ಕೆಎಸ್‌ಆರ್‌ವರೆಗೂ ವಿಸ್ತರಿಸಬೇಕು. ಅಲ್ಲಿ ಟ್ರಾಕ್‌ಗಳ ಅಭಾವವಿದ್ದಲ್ಲಿ, ಕೋಲಾರ-ಚೆನ್ನಪಟ್ಟಣ ರೈಲಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನಾದರೂ ಮಾಡಬೇಕು. ತುಮಕೂರಿನಲ್ಲಿ ರಾತ್ರಿ ನಿಲುಗಡೆಯಾಗುತ್ತಿರುವ ಡೆಮು ರೈಲು ಬೆಳಗ್ಗೆ 6.30 - 7.00 ಗಂಟೆ ಮಧ್ಯೆ ಬೆಂಗಳೂರಿಗೆ ತೆರಳಬೇಕು. ಈ ಮುಂಚೆ ಬೆಳಗ್ಗೆ 5.30ಕ್ಕೆ ಬೆಂಗಳೂರಿನಿಂದ ಹೊರಟು ತುಮಕೂರಿಗೆ ಬರುತ್ತಿದ್ದ ಪ್ಯಾಸೆಂಜರ್‌ರೈಲು ಸಂಚಾರ ಆರಂಭಿಸಿ ಮುಂಚಿನಂತೆಯೇ ಬೆಳಗ್ಗೆ 8 ಗಂಟೆಗೆ ತುಮಕೂರಿನಿಂದ ಬೆಂಗಳೂರಿಗೆ ತೆರಳಬೇಕು. ಬೆಳಗ್ಗೆ 9.20ಕ್ಕೆ ಪ್ರಸ್ತುತ ಶಿವಮೊಗ್ಗದಿಂದ ಬಂದು ತುಮಕೂರಿನಲ್ಲಿ ನಿಲ್ಲುತ್ತಿರುವ ಶಿವಮೊಗ್ಗ -ತುಮಕೂರು ರೈಲನ್ನು ಬೆಳಗ್ಗೆ 11.20 ಕ್ಕೆ ಬೆಂಗಳೂರಿಗೆ (ಪುಶ್‌ಪುಲ್‌ ಸಮಯದಂತೆ) ಪುನಃ 1.30ಕ್ಕೆ ಬೆಂಗಳೂರಿನಿಂದ ತುಮಕೂರಿಗೆ ವಾಪಸ್ಸು ಬರುವಂತೆ ಮಾಡಬೇಕೆಂದು ಮನವಿ ಮಾಡಿದರು. ಈ ಎಲ್ಲದರ ಬಗ್ಗೆ ಆದ್ಯತೆ ಮೇರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅನಿಲ್‌ ಶಾಸ್ತ್ರಿ ಭರವಸೆ ನೀಡಿದರು.

ನಂತರ ಹಿರಿಯ ವಾಣಿಜ್ಯ ಅಧಿಕಾರಿ ಕೃಷ್ಣಾ ರೆಡ್ಡಿಯವರೊಂದಿಗೆ ಚರ್ಚಿಸಿ, ತುಮಕೂರು ನಿಲ್ದಾಣದ ವಾಹನ ನಿಲುಗಡೆ ಸ್ಥಳದ ಅವ್ಯವಸ್ಥೆಗಳ ಮಾಹಿತಿ ನೀಡಿ ಸರಿಪಡಿಸಬೇಕೆಂದು ಮನವಿ ಮಾಡಿದರು. ಪ್ರಯಾಣಿಕರ ವಿಶ್ರಾಂತಿ ಕೊಠಡಿಯಲ್ಲಿನ ಶೌಚಾಲಯದ ಡ್ರೈನೇಜ್‌ ಪದೇ ಪದೇ ಬ್ಲಾಕ್‌ಆಗುತ್ತಿದ್ದು, ಟ್ರಾಕ್‌ ಪಕ್ಕದಲ್ಲೇ ದೂರದಲ್ಲಿ ದೊಡ್ಡದೊಂದು ಪಿಟ್‌ ನಿರ್ಮಿಸುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬಹುದೆಂದು ಸಲಹೆ ನೀಡಿದರು. ಇದರ ಬಗ್ಗೆ ಪರಿಶೀಲಿಸುವ ಭರವಸೆಯನ್ನು ಕೃಷ್ಣಾ ರೆಡ್ಡಿ ಅವರು ನೀಡಿದರು.

ರೈಲ್ವೇ ಇಲಾಖೆಯಿಂದ (Railway Department )  ಸ್ಥಳ ಒದಗಿಸಿದಲ್ಲಿ ನಿಲ್ದಾಣದ ಹೊರಗಡೆ ಪೇ ಅಂಡ್‌ ಯೂಸ್‌ ಟಾಯ್ಲೆಟ್‌ ನಿರ್ಮಿಸಿಕೊಡುವುದಾಗಿ ಸ್ಥಳೀಯ ಶಾಸಕ ಜ್ಯೋತಿ ಗಣೇಶ್‌ ಅವರು ನೀಡಿರುವ ಭರವಸೆ ಬಗ್ಗೆ ಪ್ರಸ್ತಾಪಿಸಿ ಸ್ಥಳ ನೀಡಲು ಮನವಿ ಮಾಡಲಾಯಿತು.ಇದಕ್ಕೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಡಿಆರ್‌ಯುಸಿಸಿ ಮತ್ತೊಬ್ಬ ಸದಸ್ಯ ಹೇಮಂತ್‌ಕುಮಾರ್‌ ಹಾಜರಿದ್ದರು.

click me!