ಶೀಘ್ರ ಜೆಡಿಎಸ್ ಅನೇಕ ಮುಖಂಡರು ಪಕ್ಷ ತೊರೆಯಲು ಸಜ್ಜಾಗಿದ್ದಾರೆ. ಅಧ್ಯಕ್ಷರನ್ನೊಳಗೊಂಡಂತೆ ಹಲವು ಪಕ್ಷ ಬಿಡಲು ಮುಂದಾಗಿದ್ದಾರೆ.
ಶಿವಮೊಗ್ಗ (ಏ.03): ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವ ಮಧು ಬಂಗಾರಪ್ಪ ಅವರನ್ನು ಬೆಂಬಲಿಸಿ ಜೆಡಿಎಸ್ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವುದಾಗಿ ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಜಿ.ಡಿ. ಮಂಜುನಾಥ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಶಿವಮೊಗ್ಗ ಜಿಲ್ಲೆ ಸಮಾಜವಾದಿ ನೆಲೆಯಾಗಿತ್ತು. ಚುನಾವಣೆಗಳಲ್ಲಿ ಜಾತ್ಯತೀತ ಪಕ್ಷದ ಅಭ್ಯರ್ಥಿಗಳು ಜಯಗಳಿಸುತ್ತಿದ್ದರು. ಆದರೆ, ಇಂದು ಬಿಜೆಪಿ ಶಕ್ತಿಶಾಲಿಯಾಗಿ ಬೇರು ಬಿಡುತ್ತಿದ್ದು, ಇದರಿಂದ ಜಾತ್ಯತೀತ ಪಕ್ಷಗಳಿಗೆ ಅಲ್ಪ ಹಿನ್ನಡೆಯಾಗಿದೆ ಎಂದರು.
ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಅನ್ನು ಬಲಪಡಿಸುವ ಉದ್ದೇಶದಿಂದ ಮಧು ಬಂಗಾರಪ್ಪ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವುದರಿಂದ ಅವರನ್ನು ಬೆಂಬಲಿಸಿ ಶಿವಮೊಗ್ಗ ನಗರ ಹಾಗೂ ಕುಂಸಿ ಭಾಗದ ಜೆಡಿಎಸ್ ಮುಖಂಡರು ಜೆಡಿಎಸ್ ಪಕ್ಷಕ್ಕೆ ರಾಜಿನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವುದಾಗಿ ತಿಳಿಸಿದರು.
ಈ ಹಿಂದೆ ಮಾಜಿ ಮುಖ್ಯಮಂತ್ರಿ ದಿ. ಎಸ್.ಬಂಗಾರಪ್ಪ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಸಂದರ್ಭದಲ್ಲಿ ಅವರನ್ನು ಬೆಂಬಲಿಸಿ ನಾವು ಸಹ ಜೆಡಿಎಸ್ ಸೇರ್ಪಡೆಗೊಂಡಿದ್ದೆವು. ಇದೀಗ ಮಧು ಬಂಗಾರಪ್ಪ ಅವರನ್ನು ಬೆಂಬಲಿಸುತ್ತಿದ್ದು, ಜೆಡಿಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡುತ್ತಿದ್ದೇವೆ ಎಂದು ಹೇಳಿದರು.
ಜಮೀರ್ ಗೆಲ್ಲಿಸಲು ಹಣ ಕೊಟ್ಟಿದ್ಯಾರು?: ಎಚ್‌ಡಿಕೆ .
ದೊಡ್ಡಮಟ್ಟದ ಸಮಾವೇಶ ನಡೆಸಿ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಸೇರ್ಪಡೆಗೊಳ್ಳಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ಸಮಾವೇಶವನ್ನು ಮುಂದೂಡಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಧು ಬಂಗಾರಪ್ಪ ಅವರನ್ನು ಬೆಂಬಲಿಸಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜ, ಬಿ.ತೇಜಪ್ಪ, ನಾಗರಾಜ್, ಕೃಷ್ಣಮೂರ್ತಿ, ರಾಜಶೇಖರ್, ನಾಗೇಗೌಡ, ಉದಯ್‌ಕುಮಾರ್, ಸದಾಶಿವ, ಮಮತಾ, ಸುದರ್ಶನ್, ರಾಮಣ್ಣ ಸೇರಿದಂತೆ ಹಲವರಿದ್ದರು.