ಸಿಎಂ ವಿರುದ್ಧ ಈಶ್ವರಪ್ಪ ಪತ್ರ: ನಮ್ಮಲ್ಲಿ ಹೊಗೆ ಶುರುವಾಗಿದೆ ಅಷ್ಟೇ, ಕಾಂಗ್ರೆಸ್‌ನಲ್ಲಿ ಬೆಂಕಿನೆ ಬಿದ್ದಿದೆ, ಕಟೀಲ್‌

By Suvarna NewsFirst Published Apr 3, 2021, 3:00 PM IST
Highlights

ಸಿಡಿ ಪ್ರಕರಣ ತನಿಖಾ ಹಂತದಲ್ಲಿದೆ, ತನಿಖೆಯಲ್ಲಿದ್ದಾಗ ನಾನು ಏನು ಮಾತಾಡೋದಿಲ್ಲ| ಎಸ್‌ಐಟಿ ಅಧಿಕಾರಿಗಳು ಸರಿಯಾಗಿಯೇ ತನಿಖೆ ನಡೆಸುತ್ತಿದ್ದಾರೆ| 73 ವರ್ಷಗಳಲ್ಲಿ ಕಾಂಗ್ರೆಸ್‌ನವರು ಯಾವ ರೀತಿ ಎಲೆಕ್ಷನ್ ಮಾಡಿದ್ದಾರೆ ಕೇಳಿ ನೋಡಿ ಎಂದು ಪತ್ರಕರ್ತರನ್ನೇ ಪ್ರಶ್ನಿಸಿದ ಕಟೀಲ್‌| 

ಕಲಬುರಗಿ(ಏ.03):  ರಾಜ್ಯದಲ್ಲಿ ನಡೆಯಲಿರುವ ಬಸವಕಲ್ಯಾಣ, ಮಸ್ಕಿ ಹಾಗೂ ಬೆಳಗಾವಿ ಉಪಚುನಾವಣೆಯಲ್ಲಿ  ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ. ರಾಜ್ಯದ ಜನತೆ ಬಿಜೆಪಿ ಮೇಲೆ ವಿಶ್ವಾಸ ಇಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಸಚಿವ ಕೆ.ಎಸ್‌. ಈಶ್ವರಪ್ಪ ಸಿಎಂ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ಬರೆದ ಪತ್ರದ ಬಗ್ಗೆ ವಿಚಾರ ಇಂದು(ಶನಿವಾರ) ನಗರದ ಏರ್‌ಪೋರ್ಟ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ವ್ಯತ್ಯಾಸಗಳಾಗಿವೆ ಅವನ್ನ ಸರಿಪಡಿಸುತ್ತೇವೆ. ಬಿಜೆಪಿಯಲ್ಲಿ ಸರಿಪಡಿಸುವ ವ್ಯವಸ್ಥೆ ಇದೆ. ಆದ್ರೆ ಕಾಂಗ್ರೆಸ್‌ನಲ್ಲಿ ಸರಿಪಡಿಸುವ ವ್ಯವಸ್ಥೆನೇ ಇಲ್ಲ. ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆ ಹರಿಯುತ್ತದೆ. ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ಚೆನ್ನಾಗಿದೆ. ಕಾಂಗ್ರೆಸ್‌ನಲ್ಲಿ ಪ್ರಜಾಪ್ರಭುತ್ವವೇ ಇಲ್ಲ. ನಮ್ಮಲ್ಲಿ ಹೊಗೆ ಶುರುವಾಗಿದೆ ಅಷ್ಟೇ. ಕಾಂಗ್ರೆಸ್‌ನಲ್ಲಿ ಬೆಂಕಿ ಬಿದ್ದಿದ್ದೆ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ.

ರಾಸಲೀಲೆ ಸಿಡಿ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನ ಸರ್ಕಾರ ರಕ್ಷಣೆ ಮಾಡ್ತಿದೆ ಅನ್ನೋ ವಕಿಲ ಜಗದೀಶ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಕಟೀಲ್‌, ಪ್ರಕರಣ ತನಿಖೆ ಹಂತದಲ್ಲಿದೆ. ತನಿಖೆಯಲ್ಲಿದ್ದಾಗ ನಾನು ಏನು ಮಾತಾಡೋದಿಲ್ಲ. ಎಸ್‌ಐಟಿ ಅಧಿಕಾರಿಗಳು ಸರಿಯಾಗಿಯೇ ತನಿಖೆಯನ್ನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. 

ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ: ಜನತಾ ಮಹಾ ಅಧಿವೇಶನಕ್ಕೆ ಸಿದ್ಧತೆ

ಬಿಜೆಪಿ ದುಡ್ಡಿನ ಮೇಲೆ ಎಲೆಕ್ಷನ್ ಮಾಡ್ತಿದೆ ಅನ್ನೋ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ನಳಿನ್‌ ಕುಮಾರ್‌ ಕಟೀಲ್‌, 73 ವರ್ಷಗಳಲ್ಲಿ ಕಾಂಗ್ರೆಸ್‌ನವರು ಯಾವ ರೀತಿ ಎಲೆಕ್ಷನ್ ಮಾಡಿದ್ದಾರೆ ಕೇಳಿ ನೋಡಿ ಎಂದು ಪತ್ರಕರ್ತರನ್ನೇ ಪ್ರಶ್ನಿಸಿದ್ದಾರೆ.

ಬಸವಕಲ್ಯಾಣದಲ್ಲಿ ಬಿಜೆಪಿಯಲ್ಲಿ ಬಂಡಾಯ ವಿಚಾರದ ಬಗ್ಗೆ ಮಾತನಾಡಿದ ಅವರು, ಇನ್ನೆರಡು ದಿನಗಳಲ್ಲಿ ಎಲ್ಲವೂ ಬಗೆಹರಿಯುತ್ತದೆ. ಬಸವಕಲ್ಯಾಣ ಕ್ಷೇತ್ರದ ಉಸ್ತುವಾರಿಯನ್ನ ಚಾಣಾಕ್ಯ ಸಚಿವ ವಿ. ಸೋಮಣ್ಣ ವಹಿಸಿಕೊಂಡಿದ್ದಾರೆ. ಅವರು ಎಲ್ಲವನ್ನೂ ಬಗೆ ಹರಿಸುತ್ತಾರೆ ಎಂದು ತಿಳಿಸಿದ್ದಾರೆ.
 

click me!