ತುಮಕೂರು (ಅ.04): ತಾವು ಕಾಂಗ್ರೆಸ್ (Congress) ಸೇರ್ಪಡೆ ಆಗುವುದಂತೂ ಖಚಿತ. ಆದರೆ ಎಂದು ಸೇರ್ಪಡೆ ಆಗುವುದು ಎಂಬುದು ಮಾತ್ರ ನಿರ್ಧರಿಸಬೇಕು ಎಂದು ಜೆಡಿಎಸ್‌ನ (JDS) ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು (Kantharaju) ಹೇಳಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಅವರು ಜೆಡಿಎಸ್‌ನ (JDS) ವರಿಷ್ಠರೇ ತಮ್ಮನ್ನು ಯಾರೆಂದು ಜರಿದ ಮೇಲೆ ಬೇರೆ ವ್ಯವಸ್ಥೆ ಮಾಡಿಕೊಳ್ಳ ಬೇಕಲ್ಲವೇ? ಹಾಗಾಗಿ ತಾವು ಕಾಂಗ್ರೆಸ್ ಸೇರುವುದು ಖಚಿತ. ಈಗಾಗಲೇ ರಾಜ್ಯ, ಜಿಲ್ಲೆ ಹಾಗೂ ತಾಲೂಕಿನ ಬಹುಪಾಲು ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿ ತಾವು ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಇಂಗಿತ ವ್ಯಕ್ತಪಡಿಸಿದ್ದೇನೆ. ಎಲ್ಲರಿಂದಲೂ ಹಸಿರು ನಿಶಾನೆ ದೊರೆತಿದೆ. ಈ ಪಿತೃ ಪಕ್ಷ ಕಳೆದ ನಂತರ ಒಳ್ಳೆಯ ದಿನ ನಿಗದಿ ಮಾಡಿ ಕಾಂಗ್ರೆಸ್‌ಗೆ ಸೇರ್ಪಡೆ ಯಾಗುವುದಾಗಿ ಬೆಮಲ್ ಕಾಂತರಾಜು ಹೇಳಿದರು.
ಟಿಕೆಟ್ ಆಕಾಂಕ್ಷಿ: ತಾವು ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ (MLC) ಹಿನ್ನೆಲೆ ಹಾಗೂ ತಾಲೂಕಿನಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಜನರ ಸಂಪರ್ಕದಲ್ಲಿ ದ್ದೇನೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನ (JDS) ಮುಖಂಡರು ಮತ್ತು ಪಕ್ಷಾತೀತವಾಗಿ ಎಲ್ಲರೊಂದಿಗೂ ಉತ್ತಮ ಸಂಪರ್ಕ ಮತ್ತು ಬಾಂಧವ್ಯವನ್ನು ಇಟ್ಟುಕೊಂಡಿದ್ದೇನೆ.
ಜನಸಾಮಾನ್ಯರ ಕಷ್ಠ ಸುಖಗಳಿಗೆ ಸ್ಪಂದಿಸಿದ್ದೇನೆ. ನಿರಂತರವಾಗಿ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದೇನೆ. ಹಾಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಆಸಕ್ತನಾಗಿದ್ದೇನೆ. ಆದ್ದರಿಂದ ಕಾಂಗ್ರೆಸ್ ವರಿಷ್ಠರಲ್ಲಿ ತಮಗೇ ಕಾಂಗ್ರೆಸ್ (Congress) ನಿಂದ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ವಿನಂತಿಸಿಕೊಂಡಿದ್ದೇನೆ ಎಂದು ಬೆಮಲ್ ಕಾಂತರಾಜು ಹೇಳಿದರು. ಆಸಕ್ತಿ ಇಲ್ಲ: ರಾಜ್ಯ ಸರ್ಕಾರಕ್ಕೆ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿಯ ಚುನಾವಣೆ ನಡೆ ಸಲು ಆಸಕ್ತಿ ಇಲ್ಲದಾಗಿದೆ.
40 ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆ : ಸತೀಶ ಜಾರಕಿಹೊಳಿ ಹೊಸ ಬಾಂಬ್
ಚುನಾವಣೆ ನಡೆದರೆ ಬಿಜೆಪಿಗೆ (BJP) ಸೋಲು ಖಚಿತ ಎಂಬ ಗುಪ್ತಚರ ಮಾಹಿತಿ ಸಂಗ್ರಹಿಸಿರುವ ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಮುಂದೂಡುತ್ತಿದೆ ಎಂದು ಬೆಮಲ್ ಕಾಂತರಾಜು ದೂರಿದರು.
ರಾಜ್ಯ ಸರ್ಕಾರಕ್ಕೆ (Karnataka Govt) ಚುನಾವಣೆ ನಡೆಸಲು ಆಸಕ್ತಿ ಇಲ್ಲದ ಕಾರಣಕ್ಕೆ ಇಲ್ಲದ ಸಬೂಬು ಹೇಳಿದೆ. ಚುನಾವಣೆ ನಡೆಸುವ ಸಂಬಂಧ ಸಮಿತಿ ರಚಿಸಿ ಅದು ನೀಡುವ ವರದಿ ಮೇಲೆ ನಿರ್ಧಾರ ಮಾಡಲಾಗುವುದು ಎಂಬುದೆಲ್ಲಾ ಸುಳ್ಳು. ಸೋಲನ್ನು ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರ ಆಡುತ್ತಿರುವ ನಾಟಕ. ಚುನಾವಣಾ ಆಯೋಗ ಹೊರಡಿಸಿದ್ದ ಆದೇಶವನ್ನು ಧಿಕ್ಕರಿಸಿ ಸಮಿತಿ ರಚಿಸಲು ಮುಂದಾಗಿರುವುದು ಸರಿಯಲ್ಲ. ಕೂಡಲೇ ರಾಜ್ಯ ಸರ್ಕಾರ ಯಾವುದೇ ಸಬೂಬು ಹೇಳದೇ ಚುನಾವಣೆ ನಡೆಸಬೇಕೆಂದು ಬೆಮಲ್ ಕಾಂತರಾಜು ಸರ್ಕಾರವನ್ನು ಆಗ್ರಹಿಸಿದರು.