ಮಹದಾಯಿ ನೀರಿಗಾಗಿ ಸುಮಾರು 47 ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಯೋಜನೆ ಜಾರಿಗೆ ಇರುವ ಅಡ್ಡಿ-ಆತಂಕಗಳು ನಿವಾರಣೆಯಾಗಿಲ್ಲ. ಈಗ ಯೋಜನೆ ಜಾರಿಯಾಗುವ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸುತ್ತಿರುವುದು ಹಾಗೂ ನ್ಯಾಯಾಧಿಕರಣದ ಅವಧಿ ಮತ್ತೆ ಒಂದು ವರ್ಷ ವಿಸ್ತರಿಸುವುದು ಯೋಜನೆಗೆ ಹಿನ್ನಡೆ ತಂದಿದೆ ಎಂದ ಶಂಕರ ಅಂಬಲಿ
ಧಾರವಾಡ(ಆ.09): ಮಹದಾಯಿ ನದಿ ನೀರು ಯೋಜನೆ ಜಾರಿಗಾಗಿ ಕೊನೇ ಬಾರಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನೆಗೆ ಹೋರಾಟಗಾರರ ನಿಯೋಗ ಹೋಗುತ್ತಿದ್ದು, ಅಂತಿಮ ನಿಲುವು ಸ್ಪಷ್ಟಪಡಿಸಲು ಮನವಿ ಮಾಡಲಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದರೆ ಉತ್ತಮ, ಇಲ್ಲದೇ ಹೋದಲ್ಲಿ ಮಹದಾಯಿಗಾಗಿ ಮತ್ತೊಂದು ದೊಡ್ಡ ಹೋರಾಟ ರೂಪುಗೊಳ್ಳಲಿದೆ ಎಂದು ಮಹದಾಯಿಗಾಗಿ ಮಹಾ ವೇದಿಕೆ ಅಧ್ಯಕ್ಷ ಶಂಕರ ಅಂಬಲಿ ಎಚ್ಚರಿಸಿದ್ದಾರೆ.
ಇಲ್ಲಿಯ ವಿದ್ಯಾವರ್ಧಕ ಸಂಘದಲ್ಲಿ ಮಂಗಳವಾರ ನಡೆದ ನಾಲ್ಕು ಜಿಲ್ಲೆಯ ಒಂಬತ್ತು ತಾಲೂಕು ರೈತ, ಮಹಿಳಾ, ಕನ್ನಡ, ದಲಿತ ಹಾಗೂ ಕಾರ್ಮಿಕ ಮುಖಂಡರ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮಹದಾಯಿ ನೀರಿಗಾಗಿ ಸುಮಾರು 47 ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಯೋಜನೆ ಜಾರಿಗೆ ಇರುವ ಅಡ್ಡಿ-ಆತಂಕಗಳು ನಿವಾರಣೆಯಾಗಿಲ್ಲ. ಈಗ ಯೋಜನೆ ಜಾರಿಯಾಗುವ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸುತ್ತಿರುವುದು ಹಾಗೂ ನ್ಯಾಯಾಧಿಕರಣದ ಅವಧಿ ಮತ್ತೆ ಒಂದು ವರ್ಷ ವಿಸ್ತರಿಸುವುದು ಯೋಜನೆಗೆ ಹಿನ್ನಡೆ ತಂದಿದೆ ಎಂದರು.
ಮಹದಾಯಿ ನದಿ ನೀರು ಹಂಚಿಕೆ ವಿವಾದ, ಗೋವಾ ಮೇಲ್ಮನವಿಗೆ ರಾಜ್ಯ ಕಾಂಗ್ರೆಸ್ ವಿರೋಧ
ಈಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಬಳಿ ಮಹದಾಯಿ ಚೆಂಡಿದೆ. ಅವರು ಮನಸ್ಸು ಮಾಡಿದರೆ ಯೋಜನೆ ಜಾರಿಗೆ ಸಮಯವೇ ಬೇಕಿಲ್ಲ. ಆದ್ದರಿಂದ ಕೆಲವೇ ದಿನಗಳಲ್ಲಿ ಅವರ ಬಳಿ ಹೋಗಿ ಸೌಹಾರ್ದಯುತವಾಗಿ ಚರ್ಚಿಸುತ್ತೇವೆ. ಸಕಾರಾತ್ಮಕವಾಗಿ ಸ್ಪಂದಿಸಿ ಯೋಜನೆ ಜಾರಿ ಮಾಡಿದರೆ ಒಳಿತು. ಇಲ್ಲದೇ ಹೋದಲ್ಲಿ ದೊಡ್ಡಮಟ್ಟದ ಹೋರಾಟ ಮತ್ತೆ ಶುರುವಾಗಲಿದೆ ಎಂಬ ಎಚ್ಚರಿಕೆಯನ್ನು ಅಂಬಲಿ ನೀಡಿದರು.