ಸಂಕ್ರಾಂತಿ ಹಬ್ಬಕ್ಕೆ ಮಗಳ ಮನೆಗೆ ಬಂದ ಅತ್ತೆಯನ್ನೇ ಹತ್ಯೆಗೈದ ಅಳಿಯ!

By Sathish Kumar KH  |  First Published Jan 14, 2025, 2:42 PM IST

ಬೆಳಗಾವಿಯಲ್ಲಿ ಮಕರ ಸಂಕ್ರಾಂತಿ ಹಬ್ಬದಂದು ಅಳಿಯನೊಬ್ಬ ಅತ್ತೆಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಮಗಳಿಗೆ ಹಬ್ಬದ ಊಟ ತೆಗೆದುಕೊಂಡು ಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮನೆಯಲ್ಲಿ ಸಂಭ್ರಮದ ಬದಲು ಸೂತಕದ ವಾತಾವರಣ ಆವರಿಸಿದೆ.


ಬೆಳಗಾವಿ (ಜ.14): ದೇಶದಾದ್ಯಂತ ಮಕರ ಸಂಕ್ರಾಂತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಸಂಕ್ರಾಂತಿ ಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡಲಾಗುತ್ತದೆ. ಅದೇ ರೀತಿ ಬೆಳಗಾವಿಯನ್ನು ಬೆಳಗ್ಗೆ ತರಹೇವಾರಿ ಅಡುಗೆ ಮಾಡಿಕೊಂಡು ಬುತ್ತಿ ಕಟ್ಟಿಕೊಂಡು ಮಗಳಿಗೆ ಕೊಡಲು ಬಂದಿದ್ದ ಅತ್ತೆಯನ್ನು ಅಳಿಯನೇ (ಮಗಳ ಗಂಡ) ಕೊಲೆ ಮಾಡಿದ್ದಾನೆ. ಸುಗ್ಗಿ ಕಾಲದ ಹಬ್ಬದಲ್ಲಿ ಮನೆಯಲ್ಲಿ ಸಂಭ್ರಮದ ಬದಲು ಸೂತಕ ಆವರಿಸಿದೆ.

ಬೆಳಗಾವಿ ನಗರದ ಮಲಪ್ರಭಾ ನಗರದಲ್ಲಿ ಮಕರ ಸಂಕ್ರಾಂತಿಯ ಹಬ್ಬದ ದಿನ ಮಂಗಳವಾರ ಬೆಳಗ್ಗೆ 11 ಗಂಟೆಗೆ ಈ ಘಟನೆ ನಡೆದಿದೆ. ಬೆಳಗಾವಿಯ ಕಲ್ಯಾಣ ನಗರದ ನಿವಾಸಿ ರೇಣುಕಾ ಶ್ರೀಧರ ಪಡುಮುಖೆ (44) ಸಾವನ್ನಪ್ಪಿದ ಮಹಿಳೆ ಆಗಿದ್ದಾರೆ. ಮಲ್ಲಪ್ರಭಾ ನಗರದ ಶುಭಂ ದತ್ತಾ ಬಿರ್ಜೆ(24) ಎಂಬಾತ ಅತ್ತೆಯನ್ನು ಕೊಂದ ಅಳಿಯ ಆಗಿದ್ದಾನೆ. ಇಲ್ಲಿ ಕೊಲೆಯ ಆರೋಪಿ ಶುಭಂ ಬಿರ್ಜೆ ಮತ್ತು ಛಾಯಾ ಮಲಪ್ರಭಾ ನಗರದ ರೈತ ಗಲ್ಲಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಮಗಳಿಗೆ ಸಂಕ್ರಾಂತಿ ಹಬ್ಬದೂಟ ಕೊಡುವುದಕ್ಕೆ ಅವರ ತಾಯಿ ಮನೆಗೆ ಬಂದಿದ್ದರು. ಇದೇ ವೇಳೆ ಮಗಳ ಗಂಡನೇ ಅತ್ತೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. 

Tap to resize

Latest Videos

ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಬೆಳಗ್ಗೆ ತರಹೇವಾರಿ ಅಡುಗೆ ಮಾಡಿಕೊಂಡು ಮಗಳಿಗೆ ಹಬ್ಬದ ಊಟವನ್ನು ಕೊಡುವುದಕ್ಕೆಂದು ರೇಣುಕಾ ಪಡಮುಖೆ ಅವರು ದೊಡ್ಡ ಊಟದ ಬುತ್ತಿಯನ್ನು ಸಿದ್ಧಪಡಿಸಿಕೊಂಡು 11ಗಂಟೆಯ ಸುಮಾರಿಗೆ ಮಗಳ ಮನೆಗೆ ಬಂದಿದ್ದಾರೆ. ಕಳೆದ 3 ವರ್ಷಗಳ ಹಿಂದೆಷ್ಟೇ ಛಾಯಾ ಜತೆಗೆ ಮದುವೆ ಶುಭಂ ಮದುವೆ ಮಾಡಿಕೊಂಡಿದ್ದನು.  ಆದರೆ, ಅತ್ತೆಗೆ ನೀವೇಕೆ ನಮ್ಮ ಮನೆಗೆ ಬರುತ್ತೀರಿ ಎಂದು ತಗಾದೆ ತೆಗೆದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿ ಅತ್ತೆಯ ತೊಡೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ.

ಇದನ್ನೂ ಓದಿ: ಒಂದೇ ತಟ್ಟೇಲಿ ಅನ್ನ ತಿಂದು, ಮೂಟೆ ಕಟ್ಟಿ ಶಿರಾಡಿ ಘಾಟ್‌ನಲ್ಲಿ ಎಸೆದ ಬಾಲ್ಯದ ಗೆಳೆಯರು!

ಈ ಗಲಾಟೆಯಲ್ಲಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ರೇಣುಕಾ ಅವರನ್ನು ಕೂಡಲೇ ಸ್ಥಳೀಯರು ಸೇರಿಕೊಂದು ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ, ತೀವ್ರ ರಕ್ತಸ್ತಾವ ಉಂಟಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೇ ರೇಣುಕಾ ಅವರು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್, ಸಿಪಿಐ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜೊತೆಗೆ, ರೇಣುಕಾ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಬೆಳಗಾವಿ ಬೀಮ್ಸ್ ಶವಗಾರಕ್ಕೆ ರವಾನಿಸಲಾಗಿದೆ. ಬೆಳಗಾವಿ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

click me!