ಒಂದೇ ತಟ್ಟೇಲಿ ಅನ್ನ ತಿಂದು, ಮೂಟೆ ಕಟ್ಟಿ ಶಿರಾಡಿ ಘಾಟ್‌ನಲ್ಲಿ ಎಸೆದ ಬಾಲ್ಯದ ಗೆಳೆಯರು!
ಬಾಲ್ಯದ ಗೆಳೆಯರು ಕುರಿ, ದನಗಳ ಕಳ್ಳತನ ಮಾಡುತ್ತಿದ್ದರು. ಈ ವಿಷಯ ಗೆಳೆಯ ಶಿವನಿಗೆ ತಿಳಿದಾಗ, ಜಗಳದ ವೇಳೆ ಬಾಯ್ಬಿಟ್ಟಿದ್ದ. ಇದರಿಂದ ಕೋಪಗೊಂಡ ಗೆಳೆಯರು ಶಿವನನ್ನೇ ಕೊಲೆ ಮಾಡಿದ್ದಾರೆ.
ಬೆಂಗಳೂರು (ಜ.14): ಅವನು ಜೀವನದಲ್ಲಿ ಬರೀ ಕಷ್ಟಗಳನ್ನೇ ನೋಡಿದವನು. ಚಿಕ್ಕ ವಯಸ್ಸಿನಲ್ಲೇ ಮದುವೆಯಾದ್ರೂ ಹೆಂಡತಿ ಹೆಚ್ಚು ದಿವಸ ಇವನ ಜೊತೆ ಬಾಳಲ್ಲಿಲ್ಲ. ಹುಟ್ಟಿದ ಮಗುವನ್ನೂ ಇವನ ಕೈಗಿಟ್ಟು ಆಕೆ ತವರು ಮನೆ ಸೇರಿದ್ದಳು. ಮಗುವನ್ನ ಈತ ನೋಡಿಕೊಳ್ಳಲಾಗದೇ ಸಂಬಂದಿಕರ ಮನೆಯಲ್ಲಿ ಬಿಟ್ಟಿದ್ದ. ಮೊದಲು ಆಟೋ ಇಟ್ಟುಕೊಂಡಿದ್ದ. ಆದ್ರೆ ಅದೂ ಕೂಡ ಕೈಹಿಡಿಯಲಿಲ್ಲ. ಇತ್ತಿಚೆಗಷ್ಟೇ ಆಟೋ ಮಾರಿ ದೂರದ ಹೈದ್ರಾಬಾದ್‌ನಲ್ಲಿ ಕೆಲಸಕ್ಕೆ ಸೇರಿದ್ದ. ಮೊನ್ನೆ ಹಬ್ಬಕ್ಕೆ ಅಂತ ಮನೆಗೆ ಬಂದಿದ್ದಾನಷ್ಟೇ. ಮರು ದಿನ ಹೊರಗೆ ಹೋಗಿ ಬರ್ತೀನಿ ಅಂತ ಹೋದವನು ವಾಪಸ್ ಬರಲೇ ಇಲ್ಲ. ಎಲ್ಲಿ ಹುಡುಕಾಡಿದರೂ ಅವನ ಸುಳಿವು ಸಿಗೋದಿಲ್ಲ. ಪರಿಸ್ಥಿತಿ ಹೀಗಿರುವಾಗ್ಲೇ ಅವನ ಸಾವಿನ ಸುದ್ದಿ ಗ್ರಾಮದಲ್ಲೆಲ್ಲಾ ಹರಿದಾಡೋಕೆ ಶುರುವಾಯ್ತು. ಅವನನ್ನ ಮರ್ಡರ್ ಮಾಡಲಾಗಿದೆ ಅಂತ ಊರಿನ ಹುಡುಗರೇ ಮಾತನಾಡಿಕೊಳ್ಳುತ್ತಿದ್ದರು.
ಅವರೆಲ್ಲಾ ಬಾಲ್ಯದ ಗೆಳೆಯರು. ಆದರೆ ಶಿವು ಆಟೋ ಇಟ್ಕೊಂಡು ಜೀವನ ಮಾಡ್ತಿದ್ರೆ ಇನ್ನಿಬ್ಬರು ಕುರಿ-ದನಗಳನ್ನ ಕದಿಯೋದನ್ನ ಪಾರ್ಟ್ ಟೈಂ ಕೆಲಸವನ್ನಾಗಿಸಿಕೊಂಡಿದ್ದರು. ಆದ್ರೆ ಅವರು ಕಳ್ಳತನ ಮಾಡ್ತಿದ್ದಿದ್ದು ಮಾತ್ರ ಯಾರಿಗೂ ಗೊತ್ತಿರಲಿಲ್ಲ. ಬೇಕರಿಯಲ್ಲಿ ಕೆಲಸ ಮಾಡಿಕೊಂಡು ತಮ್ಮ ಪಾಡಿಗೆ ಇದ್ದಾರೆ ಅಂತಲೇ ಎಲ್ರೂ ಅಂದುಕೊಂಡಿದ್ದರು. ಆದ್ರೆ ಒಂದು ದಿನ ಗೆಳೆಯ ಶಿವನಿಗೆ ಅವರಿಬ್ಬರ ಕಳ್ಳಾಟ ಗೊತ್ತಾಗಿಬಿಡ್ತು. ಆತ ಕೂಡ ಸ್ನೇಹಿತರು ಅಂತ ಏನೂ ಗೊತ್ತಿಲ್ಲದಂತೆ ಸುಮ್ಮನ್ನಾಗಿಬಿಟ್ಟಿದ್ದ. ಆದ್ರೆ ಒಮ್ಮೆ ಸ್ನೇಹಿತರ ನಡುವೇ ಜಗಳವಾದಾಗ, ಶಿವ ನಿಮ್ಮ ಕಳ್ಳಾಟ ಎಲ್ಲಾ ಗೊತ್ತಿದೆ ಹುಷಾರ್ ಅಂದುಬಿಟ್ಟ ಅಷ್ಟೇ.. ಈತ ಒಂದಿಲ್ಲ ಒಂದು ದಿನ ನಮ್ಮ ಬಗ್ಗೆ ಬಾಯಿಬಿಡ್ತಾನೆ ಅಂತ ತಿಳಿದು ಇವನನ್ನೇ ಮುಗಿಸಲು ರೆಡಿಯಾದರು. ಈ ಪ್ಲ್ಯಾನ್ನಲ್ಲಿ ಶಿವನ ಸಂಬಂದಿಕನನ್ನೂ ಸೇರಿಸಿಕೊಂಡಿದ್ದಾರೆ. ಆದರೆ ಕೊನೆಗೆ ಆತನೇ ಎಲ್ಲವನ್ನ ಬಾಯಿಬಿಟ್ಟಿದ್ದಾನೆ. ಒಂದೇ ತಟ್ಟೆಯಲ್ಲಿ ಅನ್ನ ತಿಂದು ಕೊನೆಗೆ ಮೂಟೆ ಕಟ್ಟೋದು ಅಂತ ಇಂಥಹ ಸ್ಟೋರಿಯನ್ನ ನೋಡೇ ಹೇಳಿರಬೇಕು. ಈ ಪರಮ ಪಾಪಿಗಳು ಆದಷ್ಟು ಬೇಗ ಸಿಕ್ಕಿಬಿದ್ದು, ಅವರಿಗೆ ತಕ್ಕ ಶಿಕ್ಷೆಯಾಗಲಿ.