:ಬುಗುಡನಹಳ್ಳಿ ಕೆರೆಯಿಂದ ತುಮಕೂರು ನಗರಕ್ಕೆ ನೀರು ಸರಬರಾಜು ಆಗುತ್ತಿದ್ದು, ಈ ನೀರು ವರ್ಷ ಪೂರ್ತಿ ಸಾಕಾಗಲ್ಲ. ಪರ್ಯಾಯವಾಗಿ ನಗರಕ್ಕೆ 24 ಟಿಎಂಸಿ ಹೇಮಾವತಿ ನೀರು ಹಂಚಿಕೆಯಾಗಿದ್ದು, ಸಮರ್ಪಕ ಕುಡಿಯುವ ನೀರಿನ ಪೂರೈಕೆ ಬಗ್ಗೆ ಸರ್ಕಾರ ಕ್ರಮವಹಿಸಿದ ನಂತರ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಿದೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ್ ತಿಳಿಸಿದರು.
ತುಮಕೂರು :ಬುಗುಡನಹಳ್ಳಿ ಕೆರೆಯಿಂದ ತುಮಕೂರು ನಗರಕ್ಕೆ ನೀರು ಸರಬರಾಜು ಆಗುತ್ತಿದ್ದು, ಈ ನೀರು ವರ್ಷ ಪೂರ್ತಿ ಸಾಕಾಗಲ್ಲ. ಪರ್ಯಾಯವಾಗಿ ನಗರಕ್ಕೆ 24 ಟಿಎಂಸಿ ಹೇಮಾವತಿ ನೀರು ಹಂಚಿಕೆಯಾಗಿದ್ದು, ಸಮರ್ಪಕ ಕುಡಿಯುವ ನೀರಿನ ಪೂರೈಕೆ ಬಗ್ಗೆ ಸರ್ಕಾರ ಕ್ರಮವಹಿಸಿದ ನಂತರ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಿದೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಪಾಲಿಕೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ನಗರದ 7 ವಾರ್ಡ್‌ಗಳಲ್ಲಿ ಸ್ಮಾರ್ಚ್ ಸಿಟಿ ಯೋಜನೆ ಅನುಷ್ಟಾನವಾಗಿದ್ದು, ಇನ್ನೂ 28 ವಾರ್ಡ್‌ಗಳಲ್ಲಿ ಅನುಷ್ಟಾನವಾಗಬೇಕಿದೆ. ನಗರದ ರಸ್ತೆಗಳಲ್ಲಿರುವ 2000ಕ್ಕೂ ಹೆಚ್ಚು ಗುಂಡಿಗಳನ್ನು ತ್ವರಿತವಾಗಿ ಮುಚ್ಚಬೇಕು. ಸ್ಮಾರ್ಚ್ ಸಿಟಿ ಹಾಗೂ ಪಾಲಿಕೆಯವರು ಒಟ್ಟಾಗಿ ಕಾರ್ಯನಿರ್ವಹಿಸಿ ನಗರದಲ್ಲಿ ಸಮರ್ಪಕ ರಸ್ತೆ ನಿರ್ಮಾಣ, ಚರಂಡಿ, ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ ಮೊದಲಾದ ಮೂಲಭೂತ ಸೌಕರ್ಯಗಳನ್ನು ಅನುಷ್ಟಾನಗೊಳಿಸಬೇಕು ಹಾಗೂ ನಗರದ ರಸ್ತೆಗಳನ್ನು ಸುಂದರಗೊಳಿಸಲು ಕ್ರಮವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ನಗರಗಳಲ್ಲಿ 14 ಲಕ್ಷ ಯೂನಿಟ್ ವಿದ್ಯುತ್ ಖರ್ಚಾಗುತ್ತಿತ್ತು. ಎಲ್‌ಇಡಿ ದೀಪಗಳ ವ್ಯವಸ್ಥೆ ಅಳವಡಿಸಿದ ನಂತರ 6 ಲಕ್ಷ ಯೂನಿಟ್ ವಿದ್ಯುತ್ ಬಳಕೆ ಕಡಿಮೆಯಾಗಿದೆ. ಇದರಿಂದ ಹಣ ಉಳಿತಾಯವಾಗಿದೆ. ಇನ್ನು ನಗರದಲ್ಲಿ ಹಲವೆಡೆ ಹೊಸ ಬಡಾವಣೆಗಳು ಆಗುತ್ತಿದ್ದು, ಅಲ್ಲಿಯೂ ಸಹ ಎಲ್‌ಇಡಿ ದೀಪಗಳ ವ್ಯವಸ್ಥೆ ಕಲ್ಪಿಸುವಂತೆ ಪಾಲಿಕೆಗೆ ಸೂಚನೆ ನೀಡಲಾಗಿದೆ. ನಗರದ ಅಮಾನಿಕೆರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್ 12 ಶನಿವಾರ ಮತ್ತು ಆ.13ರ ಭಾನುವಾರದಂದು ಮಹಿಳೆಯರಿಗೋಸ್ಕರ ಉಚಿತ ಬೋಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆಗಸ್ಟ್ 15ರಂದು ಅಧಿಕೃತವಾಗಿ ಅಮಾನಿಕೆರೆ ಅಂಗಳದಲ್ಲಿ ಸಂಗೀತ ಕಾರಂಜಿ, ಫುಡ್‌ಕೋರ್ಚ್, ಬೋಟಿಂಗ್ ವ್ಯವಸ್ಥೆಗೆ ಚಾಲನೆ ನೀಡಲಾಗುವುದು ಎಂದರು.
ಮುಂದಿನ ಬಜೆಟ್‌ನಲ್ಲಿ 200 ಕೋಟಿ ರು. ವಿಶೇಷ ಅನುದಾನವನ್ನು ಜಿಲ್ಲೆಗೆ ತರಲಾಗುವುದು. ಅಮಲಾಪುರದ ಕೇಂದ್ರೀಯ ವಿಶ್ವವಿದ್ಯಾನಿಲಯ ಪಕ್ಕದಲ್ಲಿ 40 ಎಕರೆ ಸರ್ಕಾರಿ ಜಾಗವಿದ್ದು, ಅಲ್ಲಿ 2000 ನಿವೇಶನಗಳನ್ನು ಸದ್ಯದಲ್ಲೇ ಹಂಚಲು ಕ್ರಮವಹಿಸಲಾಗುವುದು. ತುಮಕೂರು ವಿವಿಗೆ ಅಗತ್ಯವಿರುವ ಅನುದಾನವನ್ನು ಶೀಘ್ರದಲ್ಲೆ ಒದಗಿಸಲು ಹಾಗೂ ಹೊಸ ಕ್ಯಾಂಪಸ್‌ಗೆ ಶೀಘ್ರದಲ್ಲೇ ಸ್ಥಳಾಂತರ ಮಾಡಲಾಗುವುದು. ನಗರದ ಎಸ್ ಮಾಲ್ ಮುಂಭಾಗದ ತುಮಕೂರಿನಿಂದ ಶಿರಾಗೆ ಹೋಗುವ ರಸ್ತೆ ಕಿರಿದಾಗಿದ್ದು, ರಸ್ತೆಯನ್ನು ಅಗಲೀಕರಣ ಮಾಡಲು ಆಂತರಿಕ ಸಂಪನ್ಮೂಲ ಹಣವನ್ನು ಬಳಸಿಕೊಂಡು ಕಾಮಗಾರಿಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಪಾಲಿಕೆ ಆಯುಕ್ತೆ ಅಶ್ವಿಜ ಮತ್ತಿತರರು ಉಪಸ್ಥಿತರಿದ್ದರು.