
ಬೆಂಗಳೂರು(ಏ.20): ಆಸ್ತಿ ತೆರಿಗೆ(Property Tax) ಸೋರಿಕೆ ಹಾಗೂ ವಂಚನೆ ತಪ್ಪಿಸುವ ಉದ್ದೇಶದಿಂದ ಬಿಬಿಎಂಪಿ(BBMP) ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಆಸ್ತಿ ತೆರಿಗೆ ಪಾವತಿ ವೇಳೆ ಮಾಲೀಕರಿಗೆ ನೀಡಲಾದ ವಲಯ ಆಯ್ಕೆ ಅವಕಾಶ ರದ್ದುಪಡಿಸಿ ಸ್ವಯಂ ಚಾಲಿತವಾಗಿ ವಲಯ ನಮೂದಾಗುವಂತೆ ತಂತ್ರಾಂಶ(Software) ಅಭಿವೃದ್ಧಿ ಪಡಿಸುತ್ತಿದ್ದು, ಶೀಘ್ರದಲ್ಲಿ ಜಾರಿಗೆ ಬರಲಿದೆ. ಕೆಲವು ಆಸ್ತಿ ಮಾಲಿಕರು ತೆರಿಗೆ ಉಳಿಸುವ ಉದ್ದೇಶದಿಂದ ತಪ್ಪು ವಲಯ ಮಾಹಿತಿಯನ್ನು ಪಾಲಿಕೆಗೆ ನೀಡಿ ಕಡಿಮೆ ಆಸ್ತಿ ತೆರಿಗೆ ಪಾವತಿ ಮಾಡುತ್ತಾರೆ. ಇದನ್ನು ತಪ್ಪಿಸಲು ಬಿಬಿಎಂಪಿ ಈ ಕ್ರಮಕ್ಕೆ ಮುಂದಾಗಿದೆ.
ಪಾಲಿಕೆಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆ ಜಾರಿಯಲಿದ್ದು, ಮಾಲಿಕರೇ ತಮ್ಮ ಆಸ್ತಿಯ ವಿಸ್ತೀರ್ಣ ಘೋಷಿಸಿಕೊಂಡು ತೆರಿಗೆ ಪಾವತಿಸುತ್ತಾರೆ. ಇನ್ನು ಬಿಬಿಎಂಪಿ ತನ್ನ ವ್ಯಾಪ್ತಿಯನ್ನು ಆಸ್ತಿ ತೆರಿಗೆ ಸಂಗ್ರಹಣಾ ದೃಷ್ಟಿಯಿಂದ ಎ, ಬಿ, ಸಿ, ಡಿ, ಇ, ಎಫ್ ಎಂದು ಒಟ್ಟು ಆರು ವಲಯಗಳಾಗಿ ವರ್ಗೀಕರಣ ಮಾಡಿದೆ. ರಾಜ್ಯ ಸರ್ಕಾರದ(Government of Karnataka) ಮಾರ್ಗಸೂಚಿ ದರದ ಆಧಾರದ ಮೇಲೆ ವಲಯ ವರ್ಗೀಕರಣ ಮಾಡಿ ಆಸ್ತಿ ತೆರಿಗೆ ನಿಗದಿ ಪಡಿಸಿದೆ. ಎ ವಲಯದಲ್ಲಿ ಬರುವ ಆಸ್ತಿಗಳಿಗೆ ಅತಿ ಹೆಚ್ಚು, ಎಫ್ ವಲಯ ಕಡಿಮೆ ತೆರಿಗೆ ವಿಧಿಸಲಾಗುತ್ತದೆ.
BBMP Budget: ಪಾಲಿಕೆ ಬಜೆಟ್ ಶೇ.85 ಅನುಷ್ಠಾನ: ದಾಖಲೆ..!
ರಸ್ತೆ ಆಧಾರದಲ್ಲಿ ತಂತ್ರಾಂಶ ಅಭಿವೃದ್ಧಿ
ನಗರದಲ್ಲಿ (Bengaluru) ಒಟ್ಟು 18 ಲಕ್ಷ ಆಸ್ತಿಗಳಿದ್ದು, 23 ಸಾವಿರ ರಸ್ತೆಗಳಿವೆ. ಯಾವ ರಸ್ತೆ ಯಾವ ವಲಯಕ್ಕೆ ಸೇರಲಿದೆ ಎಂಬುದನ್ನು ಈಗಾಗಲೇ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಗುರುತಿಸಿದ್ದಾರೆ. ಬಿಬಿಎಂಪಿ ಆಸ್ತಿ ತೆರಿಗೆ ಪಾವತಿಸುವ ತಂತ್ರಾಂಶದಲ್ಲಿ ಆಸ್ತಿ ಮಾಲಿಕರು ಚಲನ್ ಪಡೆದು ಬ್ಯಾಂಕ್‌ಗೆ ಹೋಗಿ ಅಥವಾ ಆನ್‌ಲೈನ್ ಮೂಲಕ ತೆರಿಗೆ ಪಾವತಿಸುತ್ತಾರೆ. ಚಲನ್ ಪಡೆಯುವ ವೇಳೆ ತೆರಿಗೆದಾರರು ಆಸ್ತಿ ಸಂಖ್ಯೆ, ರಸ್ತೆ, ವಿಳಾಸ ನಮೂದಿಸಿದ ತಕ್ಷಣವೇ ಆ ಆಸ್ತಿ ಯಾವ ವಲಯಕ್ಕೆ ಸೇರಲಿದೆ ಎಂಬುದು ಸ್ವಯಂ ಚಾಲಿತವಾಗಿ ಆಯ್ಕೆಯಾಗಿ ಪಾವತಿಸಬೇಕಾದ ತೆರಿಗೆ ಮೊತ್ತದ ಚಲನ್ ರೂಪಗೊಳ್ಳುವಂತೆ ಆಸ್ತಿ ತೆರಿಗೆ ತಂತ್ರಾಂಶ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದನ್ನು ಯಾವುದೇ ಅಧಿಕಾರಿಗಳು ಮತ್ತು ತೆರಿಗೆ ಪಾವತಿದಾರರು ಬದಲಾವಣೆ ಮಾಡುವುದಕ್ಕೆ ಬರದಂತೆ ಅಭಿವೃದ್ಧಿ ಪಡಿಸಲಾಗುತ್ತಿದೆ.
BBMP Budget: ನಿರೀಕ್ಷಿತ ಸುಧಾರಣೆ ಇಲ್ಲ.. ಬಿಬಿಎಂಪಿ ಬಜೆಟ್‌ಗೆ NBF ಪ್ರತಿಕ್ರಿಯೆ
78 ಸಾವಿರ ತೆರಿಗೆ ವಂಚಕರು ಪತ್ತೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ಸ್ವಯಂ ಘೋಷಿತ ಆಸ್ತಿ ತೆರಿಗೆ(Self-Declared Property Tax) ಪಾವತಿ ವ್ಯವಸ್ಥೆಯಡಿ ತಪ್ಪು ಆಸ್ತಿ ಘೋಷಣೆ ಮಾಡಿಕೊಂಡ 78,520 ಮಾಲಿಕರನ್ನು ಪತ್ತೆ ಮಾಡಲಾಗಿದೆ. ಇದೀಗ ಸ್ವಯಂ ಚಾಲಿತ ವಲಯ ನಮೂದಿಸುವ ಪದ್ಧತಿ ಜಾರಿಗೆ ಬಂದರೆ ಮತ್ತಷ್ಟು ತಪ್ಪು ಮಾಹಿತಿ ನೀಡಿ ತೆರಿಗೆ ವಂಚನೆ ಮಾಡುವವರು ಪತ್ತೆ ಆಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
116 ಕೋಟಿ ನಿರೀಕ್ಷೆ:
ಬಿಬಿಎಂಪಿ ಪತ್ತೆ ಮಾಡಿರುವ 78 ಸಾವಿರ ತೆರಿಗೆ ವಂಚಕರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಿದ್ದು, ಇವರಿಂದ ಸುಮಾರು .116 ಕೋಟಿ ಆಸ್ತಿ ತೆರಿಗೆ ನಿರೀಕ್ಷಿಸಲಾಗಿದೆ. ಈ ಸಂಬಂಧಿಸಿದಂತೆ ಕ್ರಮಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರಿಗೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಮುಂದಿನ ಆದೇಶದಂತೆ ಕ್ರಮ ಕೈಗೊಳ್ಳುವುದಾಗಿ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಬಾರಿ ಕೆಲವರು ತಪ್ಪು ವಲಯ ಗುರುತು ಮಾಡಿ ಆಸ್ತಿ ತೆರಿಗೆ ಪಾವತಿಸಿದ್ದರು. ಇದು ಗಮನಕ್ಕೂ ಬಂದಿತ್ತು. ಅವರಿಗೆ ನೋಟಿಸ್ ಜಾರಿ ಮಾಡಿ ಸೂಕ್ತ ಕ್ರಮ ಕೈಗೊಂಡಿದ್ದೇವೆ. ಇನ್ನು ಮುಂದೆ ಇಂತಹ ತಪ್ಪು ಆಗಬಾರದು ಎಂಬ ಉದ್ದೇಶದಿಂದ ಹೊಸ ತಂತ್ರಾಂಶ ಅಭಿವೃದ್ಧಿ ಪಡಿಸಿದ್ದೇವೆ ಅಂತ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.