18500 ಹೆಕ್ಟರ್‌ಗೂ ಅಧಿಕ ಪ್ರದೇಶದಲ್ಲಿ ನೀರು ನಿಂತು ಹಾನಿ, ಹೆಚ್ಚಿದ ತೇವಾಂಶದಿಂದ ಕೊಳೆಯುತ್ತಿರುವ ಬೆಳೆಗಳು
ಮಹದೇವಪ್ಪ ಎಂ. ಸ್ವಾಮಿ
ಶಿರಹಟ್ಟಿ(ಸೆ.13): ತಾಲೂಕಿನ ಎಲ್ಲೆಡೆ ಎಡಬಿಡದೇ ಸುರಿದ ರಣಭೀಕರ ದಾಖಲೆ ಪ್ರಮಾಣದ ಮಳೆಯು ಅನ್ನದಾತರ ನೆಮ್ಮದಿಯ ಬದುಕನ್ನು ಕಸಿದುಕೊಂಡಿದೆ. ಹಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ಕಳೆದ 4-5 ದಿನಗಳಿಂದ ಇಡೀ ರಾತ್ರಿ ಬಿದ್ದ ದೊಡ್ಡ ಪ್ರಮಾಣದ ವರ್ಷಧಾರೆಯಿಂದ ಕೆರೆ, ಹಳ್ಳ ಭರ್ತಿಯಾಗಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನೀರು ಧುಮ್ಮಿಕ್ಕಿ ಭೋರ್ಗರೆದು ಕೆರೆಯಿಂದ ಹೊರ ಹರಿದು ರೈತರ ಹೊಲಗಳಿಗೆ ನುಗ್ಗಿ ಬೆಳೆಹಾನಿ ಮಾಡಿರುವ ಜೊತೆಗೆ ಭಾರೀ ಅನಾಹುತ ಸೃಷ್ಟಿಸಿದೆ.
undefined
300ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಸಂಪೂರ್ಣ ಜಲಾವೃತವಾಗಿವೆ. 18500 ಹೆಕ್ಟೇರ್ ಪ್ರದೇಶದಲ್ಲಿ ರೈತರ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ತೇವಾಂಶ ಹೆಚ್ಚಾಗಿ ಶೇಂಗಾ, ಹತ್ತಿ, ಹೆಸರು, ಗೋವಿನ ಜೋಳ ಬೆಳೆ ಕೊಳೆಯುತ್ತಿದೆ. ಜೊತೆಗೆ ರೈತರ ಹೊಲದಲ್ಲಿ ಹೆಜ್ಜೆ ಇಡದಂತಾಗಿದೆ. ತಾಲೂಕಿನಲ್ಲಿ ಹಲವು ಸಂಪರ್ಕ ರಸ್ತೆಗಳು ಮುಳುಗಡೆಯಾಗಿವೆ.
ರೋಣ ಕೆರೆ ಭರ್ತಿ: ಯಾವುದೇ ಸಂದರ್ಭದಲ್ಲೂ ಕೆರೆ ಕೋಡಿ ಹರಿಯುವ ಸಾಧ್ಯತೆ
ತಾಲೂಕಿನಲ್ಲಿ ಈ ಬಾರಿ ದಾಖಲೆಯ 400 ಮಿಮೀ ಮಳೆಯಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ರಾತ್ರಿಯಿಡೀ ಜಾಗರಣೆ ಮಾಡುವಂತಾಗಿದೆ. ಪ್ರತಿ ಮಳೆಗೂ ಸಮಸ್ಯೆಯನ್ನು ಅನುಭವಿಸುತ್ತಿರುವ ರೈತಾಪಿ ವರ್ಗದ ಬವಣೆ ಹೇಳತೀರದ್ದಾಗಿದ್ದು, ಮಳೆಯಿಂದಾಗಿ ಬದುಕು ಬೀದಿಗೆ ಬಂದಿದೆ.
ಈ ವರ್ಷ ಪೂರ್ವ ಮುಂಗಾರು ಮಳೆಯು ಏಪ್ರಿಲ್‌ನಲ್ಲಿ ಸಕಾಲಕ್ಕೆ ಆರಂಭವಾಗಿದ್ದರಿಂದ ತಾಲೂಕಿನ ರೈತರು ಹಸನ್ಮುಖಿಗಳಾಗಿ ಹೊಲ ಹಸನು ಮಾಡಿ ಮುಂಗಾರು ಬಿತ್ತನೆ ಮಾಡಿದ್ದರು. ಆಗಾಗ ಮಳೆ ಬಂದಿದ್ದರಿಂದ ಬೆಳೆಗಳು ಹುಲುಸಾಗಿ ಬೆಳೆದವು. ಇಳುವರಿಯೂ ಉತ್ತಮವಾಗಿ ಬಂದಿತು. ಹೆಸರು, ಅಲಸಂದಿ ಬೆಳೆಗಳು ಕಟಾವು ಹಂತಕ್ಕೆ ಬರುವ ವೇಳೆಗೆ ಜುಲೈನಲ್ಲಿ 15ದಿನಗಳ ಕಾಲ ಮಳೆ ಸುರಿದಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ರೈತರು ಬೆಳೆ ಬೆಳೆಯಲು ಖರ್ಚು ಮಾಡಿದ್ದ ಹಣವೂ ಕೈಸೇರದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು.
ಆಗಸ್ಟ್ ಆರಂಭದಲ್ಲಿ ಮಳೆ ಕೊಂಚ ಕಡಿಮೆಯಾಗಿದ್ದರಿಂದ ನಿರಾಳರಾದ ರೈತರು ಈರುಳ್ಳಿ, ಶೇಂಗಾ, ಮೆಕ್ಕೆಜೋಳ, ಹತ್ತಿ ಬೆಳೆಗಳ ಕಳೆ ತೆಗೆಸುವುದು, ಮೇಲುಗೊಬ್ಬರ ಹಾಕಿಸುವ ಬೆಳೆಯ ಉಪಚಾರದಲ್ಲಿ ತೊಡಗಿದ್ದರು. ಈ ಬೆಳೆಗಳಿಂದಾದರೂ ಒಳ್ಳೆಯ ಆದಾಯ ತೆಗೆಯಬೇಕು ಎಂಬ ಸದುದ್ದೇಶದಿಂದ ಸಾಕಷ್ಟುಖರ್ಚು ಮಾಡಿದ್ದರು. ಈ ಬೆಳೆಗಳು ಹೂವು, ಕಾಯಿಗಟ್ಟುವ ಹಂತದಲ್ಲಿರುವಾಗ ಆಗಸ್ಟ್ ಅಂತ್ಯ ಹಾಗೂ ಸೆಪ್ಟೆಂಬರ್ ಆರಂಭದಿಂದಲೂ ಸುರಿದ ರಣಚಂಡಿ ಮಳೆಯು ಮುಂಗಾರು ಹಂಗಾಮಿನ ಬಹುತೇಕ ಬೆಳೆಗಳಿಗೆ ಹಾನಿ ಮಾಡಿದೆ.
ಕೃಷಿಹೊಂಡ, ಬ್ಯಾರೇಜ್, ಚೆಕ್ ಡ್ಯಾಂ, ಕೆರೆ, ಹಳ್ಳ ಸೇರಿ ಎಲ್ಲ ಜಲಮೂಲಗಳು ಭರ್ತಿಯಾಗಿ ಹರಿಯುತ್ತಿದ್ದು, ಹೊಲದಲ್ಲಿ ಸಂಪೂರ್ಣವಾಗಿ ಜವಳು ಕಾಣಿಸಿಕೊಂಡಿದ್ದು, ಬೆಳೆಗಳಿಗೆ ಹಳದಿ ರೋಗ ಕಾಣಿಸಿಕೊಂಡಿದೆ. ಹೊಲದಲ್ಲಿ ಕಳೆ ತೆಗೆಯುವುದು, ಎಡೆ ಹೊಡೆಯುವುದಕ್ಕೂ ಅವಕಾಶ ನೀಡದೇ ಮಳೆ ಹಗಲು ರಾತ್ರಿ ಸುರಿಯುತ್ತಿದ್ದು, ರೈತರು ಕೈಕಟ್ಟಿಕುಳಿತುಕೊಳ್ಳುವಂತೆ ಮಾಡಿದೆ ಎಂದು ತಾಲೂಕಿನ ಬಹುತೇಕ ರೈತರು ಚಿಂತೆಗೀಡಾಗಿದ್ದಾರೆ.
ಗದಗ: ಕಪ್ಪತ್ತಗುಡ್ಡದಿಂದ ಹರಿಯುತ್ತಿರುವ ಬಿಳಿದ್ರವ, ಆತಂಕ
ಈ ಬಾರಿಯ ಯಾವೊಂದು ಬೆಳೆಯ ಆದಾಯವೂ ರೈತರ ಕೈಸೇರಿಲ್ಲ. ಬೆಳೆ ಬೆಳೆಯಲು ಮಾಡಿರುವ ಸಾಲವನ್ನು ಹೇಗೆ ತೀರಿಸಬೇಕು ಎಂಬ ಚಿಂತೆಯಲ್ಲಿ ರೈತರು ದಿನದೂಡುವಂತಹ ಪರಿಸ್ಥಿತಿ ನಿರ್ಮಾಣವಬಾಗಿದೆ. ಈ ವರ್ಷ ಸುರಿದ ಭಾರಿ ಮಳೆಯಿಂದಾಗಿ ಹಿಂದೆಂದೂ ಆಗದಷ್ಟುಅಧಿಕ ನಷ್ಟವಾಗಿದೆ. ಸರ್ಕಾರ ತುರ್ತು ಬೆಳೆಹಾನಿ, ಬೆಳೆ ಪರಿಹಾರ ನೀಡಿ ರೈತರ ಸಂಕಷ್ಟ ಪರಿಹರಿಸಬೇಕು ಅಂತ ರೈತ ಶರಣಪ್ಪ ಹರ್ಲಾಪೂರ ತಿಳಿಸಿದ್ದಾರೆ.
ಮುಂಗಾರಿನ ಅಬ್ಬರದ ಹಿಗ್ಗಿನಿಂದ ಕೃಷಿ ಚಟುವಟಿಕೆಯಲ್ಲಿ ತಲ್ಲೀನರಾಗಿದ್ದ ರೈತರು ಶೇಂಗಾ, ಮೆಕ್ಕೆಜೋಳ ಬಿತ್ತಿದ್ದಾರೆ. ಆದರೆ, ಇದೀಗ ಸುರಿಯುತ್ತಿರುವ ಮಳೆಯಿಂದ ಬೆಳೆಗಳು ರೋಗಕ್ಕೆ ತುತ್ತಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಸದ್ಯ ಹೊಲದಲ್ಲಿ ಫಸಲಿಗಿಂತ ಹುಲ್ಲು ಹೆಚ್ಚಾಗಿದ್ದು, ರೋಗಕ್ಕೆ ತುತ್ತಾಗಿವೆ. ಅಧಿಕಾರಿಗಳು ತಾರತಮ್ಯ ಮಾಡದೇ ಬೆಳೆ ಹಾನಿ ಸಮೀಕ್ಷೆ ನಡೆಸಿ ಆದಷ್ಟು ಬೇಗ ಪರಿಹಾರ ನೀಡಬೇಕು ಅಂತ ರೈತ ಮುದಕಪ್ಪ ಬಾನಿ ಹೇಳಿದ್ದಾರೆ.