
ಬಾಗಲಕೋಟೆ (ಮೇ 01): ಇಂದಿನ ಆಧುನಿಕ ಯುಗದಲ್ಲೂ ಹಳ್ಳಿಗಳಲ್ಲಿ ಅನಿಷ್ಟ ಪದ್ಧತಿಗಳು ಜೀವಂತವಾಗಿವೆ ಎಂಬುದಕ್ಕೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಣಸೀಕಟ್ಟಿ ಗ್ರಾಮದಲ್ಲಿ ನಡೆದ ಘಟನೆಯೇ ಸಾಕ್ಷಿ. ಕೇವಲ 600 ರೂಪಾಯಿ ದೇಣಿಗೆ (ಗ್ರಾಮದ ಜಾತ್ರೆಯ ಪಟ್ಟಿ ಹಣ) ನೀಡಿಲ್ಲ ಎಂಬ ಕಾರಣಕ್ಕೆ ಗ್ರಾಮದ 7 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಗ್ರಾಮದಲ್ಲಿ ಏಪ್ರಿಲ್ 2 ರಂದು ಹನುಮಂತ ದೇವರ ಓಕುಳಿ ಜಾತ್ರೆ ನಡೆದಿತ್ತು. ಈ ಜಾತ್ರೆಗಾಗಿ ಪ್ರತಿ ಮನೆಯಿಂದ ಪಟ್ಟಿ ಹಣ ವಸೂಲಿ ಮಾಡಲಾಗಿತ್ತು. ಆದರೆ, ಗ್ರಾಮದ 7 ಕುಟುಂಬಗಳು 600 ರೂಪಾಯಿ ಪಟ್ಟಿ ಹಣ ನೀಡಲು ನಿರಾಕರಿಸಿದ್ದವು ಎನ್ನಲಾಗಿದೆ. ಇದೇ ಕಾರಣಕ್ಕೆ ಆಕ್ರೋಶಗೊಂಡ ಗ್ರಾಮದ ಹಿರಿಯರು, ಏಪ್ರಿಲ್ 5 ರಂದು ಇಡೀ ಊರಿನಲ್ಲಿ ಡಂಗುರ ಸಾರಿಸಿ ಈ ಏಳು ಕುಟುಂಬಗಳನ್ನು 'ದೈವದಿಂದ ಹೊರಗಿಡಲಾಗಿದೆ' ಎಂದು ಘೋಷಿಸಿದ್ದಾರೆ.
ಹಿರಿಯರು ಸಾರಿಸಿರುವ ಡಂಗುರದ ಪ್ರಕಾರ, ಬಹಿಷ್ಕಾರಕ್ಕೊಳಗಾದ ಕುಟುಂಬಗಳ ವಿರುದ್ಧ ಈ ಕೆಳಗಿನ ನಿರ್ಬಂಧ ಹೇರಲಾಗಿದೆ:
ಬಹಿಷ್ಕಾರಕ್ಕೊಳಗಾದವರಲ್ಲಿ ಯಲ್ಲಪ್ಪ ಛಗಣ್ಣವರ ಎಂಬುವವರು ಹುಬ್ಬಳ್ಳಿಯ ರೇಲ್ವೆ ವರ್ಕ್‌ಶಾಪ್‌ನಲ್ಲಿ ಸೀನಿಯರ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಅಮಾನವೀಯ ಪದ್ಧತಿಯನ್ನು ಪ್ರಶ್ನಿಸಿರುವ ಅವರು, 'ನಮಗೆ ಈ ಬಹಿಷ್ಕಾರದಿಂದ ಸಮಾಜದಲ್ಲಿ ತೀವ್ರ ಅಪಮಾನವಾಗಿದೆ, ನಮ್ಮ ಗೌರವಕ್ಕೆ ಧಕ್ಕೆಯಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಲ್ಲಪ್ಪ ಅವರು ಜಮಖಂಡಿ ತಹಸೀಲ್ದಾರ್, ಎಸಿ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಡಂಗುರ ಸಾರಿದವರು ಮತ್ತು ಸಾರಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಸಭೆ ನಡೆಸಿ ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಕೇವಲ ಸಮಾಧಾನ ಮಾಡಿದರೆ ಸಾಲದು, ನಮಗಾದ ಅಪಮಾನಕ್ಕೆ ಹೊಣೆ ಯಾರು? ಅನ್ಯಾಯ ಮಾಡಿದವರ ಮೇಲೆ ಎಫ್‌ಐಆರ್ ದಾಖಲಿಸಿ ಶಿಕ್ಷೆಯಾಗಬೇಕು ಎಂದು ಸಂತ್ರಸ್ತ ಕುಟುಂಬಗಳು ಪಟ್ಟು ಹಿಡಿದಿವೆ. ಸಂವಿಧಾನದ ಅಡಿಯಲ್ಲಿ ಸಾಮಾಜಿಕ ಬಹಿಷ್ಕಾರವು ಗಂಭೀರ ಅಪರಾಧವಾಗಿದ್ದು, ಜಿಲ್ಲಾಡಳಿತ ಈ ಪ್ರಕರಣವನ್ನು ಹೇಗೆ ನಿಭಾಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.