ರಾಜ್ಯದಲ್ಲಿ ಭಾರೀ ಸದ್ದು ಮಾಡಿದ ಸೀಡಿ ವಿಚಾರ ಹೊಸ ತಿರುವುಗಳನ್ನು ತೆಗೆದುಕೊಂಡು ಸಾಗುತ್ತಲೇ ಇತ್ತು. ಇದೀಗ ದಿನೇಶ್ ಕಲ್ಲಹಳ್ಳಿ ಮತ್ತೊಂದು ರೀತಿಯ ಹೇಳಿಕೆ ನೀಡುವ ಮೂಲಕ ಟ್ವಿಸ್ಟ್ ಕೊಟ್ಟಿದ್ದಾರೆ.
ರಾಮನಗರ (ಮಾ.11): ಮಾಜಿ ಸಚಿವರ ರಾಸಲೀಲೆ ಪ್ರಕರಣದ ಹಿಂದೆ ಯಾವ ನಾಯಕ, ಮಹಾನ್ ನಾಯಕರು ಇದ್ದಾರೊ ನನಗೆ ಗೊತ್ತಿಲ್ಲ. ದೂರು ನೀಡಿದಾಕ್ಷಣಕ್ಕೆ ನನ್ನೇ ತಪ್ಪಿತಸ್ಥನ ಸಾಲಿನಲ್ಲಿ ನಿಲ್ಲಿಸಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಬೇಸರ ವ್ಯಕ್ತಪಡಿಸಿದರು.
ಕನಕಪುರ ತಾಲೂಕು ಕಲ್ಲಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೂರು ನೀಡಿದ ಕಾರಣಕ್ಕೆ ನನ್ನ ಮೇಲೆ 5 ಕೋಟಿ ರು. ಡೀಲ್ ಆರೋಪ ಮಾಡಲಾಗಿದೆ. ದಾಖಲೆಗಳ ಸಮೇತ ಆರೋಪ ಸಾಬೀತು ಪಡಿಸಿದ ಕ್ಷಣದಲ್ಲೇ, ನೀಡುವ ಶಿಕ್ಷೆ ಪಡೆಯಲು ಸಿದ್ಧನಿರುವೆ ಎಂದರು.
ನಾನು ಯಾವುದೇ ಒತ್ತಡಕ್ಕೆ ಮಣಿದು ದೂರನ್ನು ಹಿಂಪಡೆದಿಲ್ಲ. ದೂರು ವಾಪಸ್ ಪಡೆಯುವಾಗ ಪೊಲೀಸರು ಕಾರಣ ಕೇಳಿಲ್ಲ. ದೂರು ಹಿಂಪಡೆಯಲು ಕಾರಣವಾದ ಅಂಶಗಳನ್ನು ಐದು ಪುಟಗಳ ಪತ್ರಗಳಲ್ಲಿ ವಿವರವಾಗಿ ತಿಳಿಸಿದ್ದೇನೆ. ಮತ್ತೆ ವಿಚಾರಣೆಗೆ ಕರೆದರೆ ಖಂಡಿತವಾಗಿಯೂ ಹೋಗುತ್ತೇನೆ. ದೂರಿನಿಂದ ಹಿಂದೆ ಸರಿದಾಕ್ಷಣಕ್ಕೆ ಪ್ರಕರಣ ಮುಚ್ಚಿ ಹೋಗುವುದಿಲ್ಲ ಎಂದರು.
ಅಷ್ಟಕ್ಕೂ ದಿನೇಶ್ ಕಲ್ಲಹಳ್ಳಿಗೆ ಎಲ್ಲಿಂದ ಒತ್ತಡ ಬಂದಿತ್ತು? ..
ಸುಮೊಟೊ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸುವುದು ತನಿಖಾಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದು, ದೂರು ನೀಡಿದ ದಿನದಿಂದ ನನಗೆ ಗೊತ್ತಿರುಷ್ಟುಮಾಹಿತಿಯನ್ನು ಪೊಲೀಸರಿಗೆ ನೀಡಿದ್ದೇನೆ ಎಂದು ತಿಳಿಸಿದರು.
ಮಾಧ್ಯಮಗಳಲ್ಲಿ ನನ್ನ ವಿರುದ್ಧವೇ ಷಡ್ಯಂತ್ರ ಮಾಡಲಾಗುತ್ತಿದ್ದು, ಹೋರಾಟ ಮಾಡುವುದೇ ತಪ್ಪು ಎನ್ನುವಂತೆ ಬಿಂಬಿಸಲಾಗುತ್ತಿದೆ. ಗುರುತರ ಆರೋಪಗಳಿಂದ ಮುಕ್ತನಾಗಲು ಕಾನೂನು ಹೋರಾಟ ನಡೆಸಬೇಕಿದೆ. ಹಾಗಾಗಿ ಈ ಪ್ರಕರಣದಿಂದ ಹಿಂದೆ ಸರಿದಿದ್ದೇನೆ. ಕೆಲವರು ಬಾಯಿ ತೇವಲಿಗೆ ಮಾತನಾಡುತ್ತಾರೆ. ತೆವಲಿಗೆ ಮಾತನಾಡುವುದು ಒಂದಾಗಿದ್ದರೆ, ವಾಸ್ತವಾಂಶವೇ ಬೇರೆಯಾಗಿದೆ. ದಾಖಲಾತಿ ಮುಂದಿಟ್ಟುಕೊಂಡು ನನ್ನ ಮೇಲಿನ ಆರೋಪಗಳು ಸಾಬೀತು ಪಡಿಸಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಪರೋಕ್ಷವಾಗಿ ಸವಾಲು ಹಾಕಿದರು.