
ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ನ.15): ಸ್ಲಂನಲ್ಲಿ ವಾಸಿಸುವ ಕಡು ಬಡವರಿಗೆ ಸೂರು ಭಾಗ್ಯ ಕಲ್ಪಿಸಲು ಸರ್ಕಾರ ಪ್ರಧಾನಿ ಅವಾಜ್ ಯೋಜನೆ ಜಾರಿಗೆ ತಂದಿದೆ. ಆದ್ರೆ ಸ್ಲಂ ಬೋರ್ಡ್ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಹಣದ ದಾಹಕ್ಕೆ ಸಿಲುಕಿರೋ ಆ ಮಹತ್ವಾಕಾಂಕ್ಷಿ ಯೋಜನೆ ಚಿತ್ರದುರ್ಗದಲ್ಲಿ ಹಳ್ಳ ಹಿಡಿದಿರುವ ಆರೋಪ ಕೇಳಿ ಬಂದಿದೆ......
ದಿನ ಬೆಳಗಾದ್ರೆ ಹೊಟ್ಟೆಪಾಡಿಗಾಗಿ ಕೂಲಿ ಕೆಲಸಕ್ಕೆ ತೆರಳುವ ಸ್ಲಂ ಜನರಿಗೆ ಸೂರು ಭಾಗ್ಯ ಕಲ್ಪಿಸಲು ಸರ್ಕಾರ ಮುಂದಾಗಿದೆ. ಹೀಗಾಗಿ 2021-22 ನೇಸಾಲಿನಲ್ಲಿ ಪ್ರಧಾನಮಂತ್ರಿ ಅವಾಜ್ ಯೋಜನೆಯಡಿ ಚಿತ್ರದುರ್ಗದ ಕೊಳಗೇರಿಗಳಲ್ಲಿನ ಕಡುಬಡವರಿಗೆ 1226 ಮನೆಗಳನ್ನು ಸರ್ಕಾರ ಮಂಜೂರು ಮಾಡಿದೆ. ಅಲ್ಲದೆ ಫಲಾನುಭವಿ ಕೇವಲ 75000 ಹಣವನ್ನು ವಂತಿಕೆ ರೂಪದಲ್ಲಿ ಸ್ಲಂ ಬೋರ್ಡ್ ಖಾತೆಗೆ ಪಾವತಿಸಿದ್ರೆ ಸಾಕು, ಸರ್ಕಾರ ಆ ಫಲಾನುಭವಿಗೆ ಏಳೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಕೇವಲ ಆರೇ ತಿಂಗಳಲ್ಲಿ ಸುಸಜ್ಜಿತ ಮೇಲ್ಚಾವಣೆ ಮನೆಯನ್ನು ನಿರ್ಮಿಸಿಕೊಡುವ ಯೋಜನೆ ಇದಾಗಿದೆ.
ಕಾಂಗ್ರೆಸ್ಸಿನಲ್ಲಿ ನಿಷ್ಠಾವಂತರಾಗಿ ದುಡಿದವರಿಗೆ ಹೆಚ್ಚು ಮಾನ್ಯತೆ: ಸಚಿವ ಡಿ.ಸುಧಾಕರ್
ಆದ್ರೆ ಚಿತ್ರದುರ್ಗದ ಸಾಧೀಕ್ ನಗರ ಬುದ್ದನಗರ, ರಾಜೇಂದ್ರನಗರ ಮತ್ತು ಆಶ್ರಯ ಲೇಔಟ್ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸ್ಲಂ ಬೋರ್ಡ್ ನಿಂದ ನಿರ್ಮಾಣಮಾಡಿರೋ ಮನೆಗಳು ಸಂಪೂರ್ಣ ಕಳಪೆಯಾಗಿವೆ. ಉದ್ಘಾಟನೆಗೂ ಮುನ್ನವೇ ಛಾವಣಿ ಸೋರುತ್ತಿವೆ. ಗೋಡೆಗಳು ಬಿರುಕು ಬಿಟ್ಟಿದ್ದು, ಕೆಲವೆಡೆ ಅರ್ಧಂಬರ್ಧ ಕಾಮಗಾರಿ ಮಾಡಿರುವ ಗುತ್ತಿಗೆದಾರರು, ಫಲಾನುಭವಿಗಳಿಂದ ಹಣ ಸುಲಿಗೆ ಮಾಡಿಕೊಂಡು ಕೆಲಸ ನಿಲ್ಲಿಸಿ ಪರಾರಿಯಾಗಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವ್ದೇ ಪ್ರಯೋಜನ ಆಗಿಲ್ಲ. ಕೇವಲ ಎರಡುವರೆ ಲಕ್ಷ ರೂಪಾಯಿ ಬೆಲೆ ಬಾಳುವ ಕಳಪೆ ಸಾಮಾಗ್ರಿಗಳನ್ನು ಕೊಟ್ಟು ಕೈತೊಳೆದುಕೊಂಡಿರುವ ಪರಿಣಾಮ, ಫಲಾನುಭವಿಗಳು ಮನೆ ಕಾಮಗಾರಿ ಮುಗಿಸಲು ಹರಸಾಹಸ ಪಡುವಂತಾಗಿದೆ ಆದ್ದರಿಂದ ಯೋಜನೆ ಪ್ರಕಾರ ಸುಸಜ್ಜಿತಮನೆ ನಿರ್ಮಾಣ ಮಾಡಿಕೊಡುವಂತೆ ನೊಂದ ನಾಗರಿಕರು ಆಗ್ರಹಿಸಿದ್ದಾರೆ.
ಇನ್ನು ಈ ಅಕ್ರಮದ ವಾಸನೆ ನಗರಸಭೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ಕಳಪೆ ಕಾಮಗಾರಿ ಹಾಗೂ ಕೆಲಸ ಸ್ಥಗಿತವಾಗಿರುವ ದೂರುಗಳು ವ್ಯಾಪಕವಾಗಿವೆ. ಹೀಗಾಗಿ ಶೀಘ್ರದಲ್ಲೆ ನಾವು ಸ್ಥಳ ಪರಿಶೀಲನೆ ನಡೆಸ್ತೀವಿ. ಹಾಗೆಯೇ ಗುಣಮಟ್ಟದ ಕಾಮಗಾರಿ ನಡೆಸುವಂತೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯುತ್ತೇವೆ ಎಂದು ನಗರಸಭೆ ಪೌರಾಯುಕ್ತೆ ರೇಣುಕಾ ಅವರು ಭರವಸೆ ನೀಡಿದ್ದಾರೆ.
ಒಟ್ಟಾರೆ ಕಡು ಬಡವರಿಗೆ ಸರ್ಕಾರ ಕಟ್ಟಿಸಿ ಕೊಡುವ ಮನೆ ನಿರ್ಮಾಣದಲ್ಲು ಕಳಪೆ ಕಾಮಗಾರಿ ಆರೋಪ ಕೇಳಿ ಬಂದಿದೆ. ಹೀಗಾಗಿ ಉದ್ಘಾಟನೆಗೂ ಮುನ್ನವೇ ಮನೆಗಳು ಶಿಥಿಲಾವಸ್ಥೆಗೆ ತಲುಪಿವೆ. ಆದ್ದರಿಂದ ಜಿಲ್ಲಾಡಳಿತ ಇನ್ನಾದ್ರು ಎಚ್ಚೆತ್ತು ಈ ಅಕ್ರಮಕ್ಕೆ ಬ್ರೇಕ್ ಹಾಕಿ, ನೊಂದ ಫಲಾನುಭವಿಗಳಿಗೆ ಸುಸಜ್ಜಿತ ಮನೆ ನಿರ್ಮಾಣ ಮಾಡಿಕೊಡಲು ಅಗತ್ಯಕ್ರಮ ಕೈಗೊಳ್ಳಬೇಕಿದೆ.