ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಹಾಗೂ ಹೊಳೆಮಣ್ಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳಿಗೆ ಕನ್ನಡ ಗಾಳಿಪಟ ತಯಾರಿಸುವ ಹಾಗೂ ಹಾರಿಸುವ ವಿಶಿಷ್ಟ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು.
ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ
ಗದಗ (ನ.15): ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಹಾಗೂ ಹೊಳೆಮಣ್ಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳಿಗೆ ಕನ್ನಡ ಗಾಳಿಪಟ ತಯಾರಿಸುವ ಹಾಗೂ ಹಾರಿಸುವ ವಿಶಿಷ್ಟ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು. ವಿಶೇಷ ಸ್ಪರ್ಧೆಯಿಂದಾಗಿ ಶಾಲಾ ಆವರಣ ಕನ್ನಡಮಯವಾಗಿ ಕಂಡು ಬಂದ್ರೆ, ಬಾನಂಗಳದಲ್ಲಿ ಕನ್ನಡ ರಂಗು ರಾರಾಜಿಸ್ತು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ತಿಂಗಳು ಪೂರ್ತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅದೇ ರೀತಿ, ಮೆಣಸಗಿ ಹಾಗೂ ಹೊಳೆಮಣ್ಣೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೂ ಕನ್ನಡ ಗಾಳಿಪಟ ಹಾರಿಸುವ ಕಾರ್ಯಕ್ರಮ ಏರ್ಪಿಸಲಾಗಿತ್ತು.
ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿಶೇಷ ಆಸಕ್ತಿಯಿಂದ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಪಂಚಾಯ್ತಿ ವ್ಯಾಪ್ತಿಯ 10 ಶಾಲೆಗಳು ಭಾಗಿಯಾಗಿದ್ವು. ಗ್ರಾಮಗಳ ಗ್ರಂಥಾಲಯ ಮೇಲ್ವಿಚಾರಕರು ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರು ಗ್ರಾಮ ಪಂಚಾಯತಿ ಸಿಬ್ಬಂದಿ ಮಕ್ಕಳಿಗೆ ಗಾಳಿಪಟ ತಯಾರಿಸುವ ಕುರಿತು ತರಬೇತಿ ನೀಡಿ ಕೆಂಪು ಹಾಗೂ ಹಳದಿ ಬಣ್ಣದ ಹಾಳೆ ಪೂರೈಸಿದ್ರು. ಮಕ್ಕಳು, ಸ್ಥಳೀಯವಾಗಿ ದೊರೆಯಬಹುದಾದ ಬಿದಿರು ಹಾಗೂ ತೆಂಗಿನ ಕಡ್ಡಿಗಳಿಂದ ಗಾಳಿಪಟ ತಯಾರಿಸಿ ಸೂತ್ರ ಜೋಡಿಸಿ ಹಾರಿಸಿದ್ರು.
ಗಾಳಿಪಟ ತಯಾರಿಸಿ ಹಾರಿಸುವುದನ್ನು ಕಂಡ ಪಾಲಕರು ಪೋಷಕರು ತಮ್ಮ ಬಾಲ್ಯ ನೆನಪಿಸಿಕೊಂಡು ಮಕ್ಕಳಿಗೆ ಇಂತಹ ಅವಕಾಶ ಒದಗಿಸಿರುವ ಗ್ರಾಮ ಪಂಚಾಯಿತಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ದೆ ತಾವು ಕೂಡ ಮಕ್ಕಳಿಗೆ ಗಾಳಿಪಟ ತಯಾರಿಸುವಲ್ಲಿ ನೆರವಾಗಿದ್ದಾರೆ. ಸ್ಪರ್ಧೆಯಲ್ಲಿ 500 ಕ್ಕೂ ಹೆಚ್ಚು ಮಕ್ಕಳು ಭಾಗಿಯಾಗಿ ಗಾಳಿಪಟ ತಯಾರಿಸಿ ಹಾರಿಸಿದ್ರು. ಉತ್ತಮವಾಗಿ ಗಾಳಿಪಟ ತಯಾರಿಸಿ ಹಾರಿಸಿದ ಮಕ್ಕಳಿಗೆ ಪ್ರೋತ್ಸಾಹಿಸ್ಬೇಕು ಅನ್ನೋ ನಿಟ್ಟಿನಲ್ಲಿ ಮಕ್ಕಳಿಗೆ ಬಹುಮಾನದ ರೂಪದಲ್ಲಿ ಪುಸ್ತಕ ನೀಡಲಾಗಿದೆ.
ಬಿಜೆಪಿಯಿಂದ ಕಾಂಗ್ರೆಸ್ ಪ್ರಣಾಳಿಕೆ ಪಂಚರಾಜ್ಯ ಚುನಾವಣೆಯಲ್ಲಿ ನಕಲು: ಶಾಸಕ ಶಾಮನೂರು ಶಿವಶಂಕರಪ್ಪ
ಗ್ರಾಮೀಣ ಕ್ರೀಡೆಗಳು ಮಹತ್ವ ಕಳೆದುಕೊಳ್ಳುತ್ತಿರುವ ಈ ದಿನಮಾನಗಳಲ್ಲಿ ನಮ್ಮ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮಕ್ಕಳಿಗೆ ಗಾಳಿಪಟ ತಯಾರಿಸುವ ತರಬೇತಿ ನೀಡಿ ಅಗತ್ಯ ಪರಿಕರಗಳನ್ನು ಒದಗಿಸುವ ಮೂಲಕ ಮಕ್ಕಳು ವಿನೂತನವಾಗಿ ಯೋಚಿಸುವಂತೆ ಸಂಭ್ರಮಿಸುವಂತೆ ಮಾಡಿದ್ದಾರೆ. ಅಲ್ದೆ, ಕನ್ನಡ ಸಂಭ್ರಮವನ್ನು ವಿನೂತನವಾಗಿ ಆಯೋಜಿಸಿದ್ದಾರೆ.