ಜಿಂದಾಲ್‌ನಲ್ಲಿ ಮೂರು, ಹೊಸಪೇಟೆ, ಟಿಬಿಡ್ಯಾಂ, ಎಂ.ಎಂ.ಹಳ್ಳಿಯಲ್ಲಿ ತಲಾ ಒಂದು| ಪೊಲೀಸ್ ಪೇದೆಗಳು ವಾಸವಾಗಿರುವ ಪ್ರದೇಶ ಸೀಲ್‌ಡೌನ್| ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ| ಜಿಂದಾಲ್‌ನಲ್ಲಿ 5ಕ್ಕೇರಿದ ಕೊರೋನಾ ವೈರಸ್ ಪ್ರಕರಣ|
ಬಳ್ಳಾರಿ(ಜೂ.07): ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ ಬಳಿಯ ಜಿಂದಾಲ್ (ಜೆಎಸ್‌ಡಬ್ಲ್ಯು) ವಸತಿ ಸಮುಚ್ಛಯದಲ್ಲಿ ವಾಸವಾಗಿರುವ ಮೂವರಿಗೆ ಕೊರೋನಾ ವೈರಸ್ ಇರುವುದು ಶನಿವಾರ ದೃಢಪಟ್ಟಿದೆ. ಇದರಿಂದ ಜಿಂದಾಲ್‌ನಲ್ಲಿ ಸೋಂಕು ಹರಡಿರುವ ಪ್ರಕರಣಗಳ ಸಂಖ್ಯೆ 5ಕ್ಕೇರಿದೆ.
ಜಿಂದಾಲ್‌ನ ವಿವಿ ನಗರದಲ್ಲಿದ್ದ ಆಂಧ್ರಪ್ರದೇಶದ ಕರ್ನೂಲ್ ಮೂಲದ ವ್ಯಕ್ತಿಗೆ ಗುರುವಾರ ಕೊರೋನಾ ವೈರಸ್ ಇರುವುದು ಖಚಿತವಾಗಿತ್ತು. ಹೀಗಾಗಿ, ಆತನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಜಿಂದಾಲ್‌ನ ಒಪಿಜೆ ಕ್ವಾರಂಟೈನ್ ಕೇಂದ್ರದ ಐಸೊಲೇಷನ್ ವಾರ್ಡ್‌ಗೆ ದಾಖಲು ಮಾಡಿ, ಆರೋಗ್ಯ ತಪಾಸಣೆ ನಡೆಸಿತಲ್ಲದೆ, ಗಂಟಲುದ್ರವ ತೆಗೆದು ವೈದ್ಯಕೀಯ ಪರೀಕ್ಷೆಗೆ ಕಳಿಸಿಕೊಡಲಾಗಿತ್ತು. ಶನಿವಾರ ಬಂದ ವೈದ್ಯಕೀಯ ವರದಿಯಲ್ಲಿ ಜಿಂದಾಲ್ ನೌಕರನ 37 ವರ್ಷದ ಪತ್ನಿ, 12 ವರ್ಷದ ಮಗಳು ಹಾಗೂ 10 ವರ್ಷದ ಮಗನಿಗೆ ಸೋಂಕು ಇರುವುದು ದೃಢವಾಗಿದೆ. ಸೋಂಕಿತ ಮೂವರನ್ನು ಬಳ್ಳಾರಿಯ ಜಿಲ್ಲಾ ಕೊರೋನಾ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
ಹರಪನಹಳ್ಳಿ: ಮದುವೆ ಆಸೆ ತೋರಿಸಿ ಯುವತಿಯ ಮೇಲೆ ಕಾಮುಕನಿಂದ ರೇಪ್
ವಸತಿ ಪ್ರದೇಶ ಸೀಲ್‌ಡೌನ್
ಜಿಂದಾಲ್‌ನ ಮತ್ತೆ ಮೂವರಿಗೆ ಕೊರೋನಾ ವೈರಸ್ ಸೋಂಕು ಹರಡಿರುವುದರಿಂದ ಸೋಂಕಿತರಿದ್ದ ವಿವಿ ನಗರ ಪ್ರದೇಶದಲ್ಲಿನ ವಸತಿ ಸಮುಚ್ಛಯವನ್ನು ಸೀಲ್‌ಡೌನ್ ಮಾಡಲಾಗಿದೆ. ಜಿಂದಾಲ್‌ನ ನೌಕರರ ಪೈಕಿ ಬುಧವಾರ ಸೋಂಕು ದೃಢಗೊಂಡ ತಮಿಳುನಾಡು ಮೂಲದ ಸೇಲಂನ ನೌಕರನ 32 ಪ್ರಥಮ ಹಾಗೂ 60 ಜನ ದ್ವಿತೀಯ ಸಂಪರ್ಕಿತರು ಮತ್ತು ಗುರುವಾರ ದೃಢಪಟ್ಟಿರುವ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮೂಲದ ಸೋಂಕಿತನ 23 ಪ್ರಥಮ ಹಾಗೂ 46 ಜನ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ.
ಶೇ. 40ರಷ್ಟು ಕೆಲಸಕ್ಕೆ
ಜಿಂದಾಲ್‌ನಲ್ಲಿ ಸುಮಾರು 27 ಸಾವಿರಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದು ಈ ಪೈಕಿ ಶೇ. 35ರಿಂದ 40ರಷ್ಟುಜನರು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಜಿಂದಾಲ್ ಕಂಪನಿಯ ಅಧಿಕಾರಿಗಳು ಹೇಳುತ್ತಾರೆ. ಆದರೆ, ಕಂಪನಿಯ ನೌಕರರನ್ನು ಕಡಿಮೆಗೊಳಿಸಿಲ್ಲ. ಆರೋಗ್ಯ ತಪಾಸಣೆ ಸೇರಿದಂತೆ ಮುನ್ನಚ್ಚರಿಕೆಯ ಕ್ರಮಗಳನ್ನು ಕೈಗೊಂಡಿಲ್ಲ. ಹೀಗಾಗಿಯೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ಜಿಂದಾಲ್ ಸುತ್ತಮುತ್ತಲ ಗ್ರಾಮಗಳ ಜನರು ಆರೋಪಿಸುತ್ತಿದ್ದು, ಜಿಂದಾಲ್ ನೌಕರರೂ ಕೆಲಸಕ್ಕೆ ಹೋಗಲು ಆತಂಕ ಪಡುವಂತಾಗಿದೆ. ಮೂರೇ ದಿನದಲ್ಲಿ ಐದು ಪ್ರಕರಣಗಳು ಜಿಂದಾಲ್‌ನಲ್ಲಿಯೇ ಬೆಳಕಿಗೆ ಬಂದಿರುವುದು ಸ್ಥಳೀಯ ನೌಕರರ ಆತಂಕಕ್ಕೆ ಕಾರಣವಾಗಿದೆ.
ವಿನೋದ್ ನಾವಲ್ ಮೊಕ್ಕಾಂ:
ಜಿಂದಾಲ್ ನೌಕರರಿಗೆ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಡಿಎಂಡಿ ವಿನೋದ್ ನಾವಲ್ ಅವರು ಸ್ಥಳೀಯವಾಗಿಯೇ ಮೊಕ್ಕಾಂ ಹೂಡಿದ್ದು, ನೌಕರರ ಆರೋಗ್ಯ ತಪಾಸಣೆ ಸೇರಿದಂತೆ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸೋಂಕಿತರ ಸಂಖ್ಯೆ ಏರಿಕೆಯಿಂದಾಗಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಎಸ್ಪಿ ಸಿ.ಕೆ.ಬಾಬಾ, ಜಿಪಂ ಸಿಇಒ ನಿತೀಶ್, ಜಿಲ್ಲಾ ಆರೋಗ್ಯಾಧಿಕಾರಿಗಳು ಜಿಂದಾಲ್‌ಗೆ ಭೇಟಿ ನೀಡಿ, ಸಂಸ್ಥೆಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವ ಜಿಂದಾಲ್‌ನಲ್ಲಿ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದ ಮುಂಜಾಗ್ರತೆಯಾಗಿ ಕೈಗೊಳ್ಳಬೇಕಾದ ಕ್ರಮಗಳ ಮಾಹಿತಿ ನೀಡಿದ್ದಾರೆ.
ಸೋಂಕಿತರ ಸಂಖ್ಯೆ 60ಕ್ಕೇರಿಕೆ:
ಜಿಂದಾಲ್‌ನಲ್ಲಿ ಶನಿವಾರ ಖಚಿತವಾದ ಮೂರು ಸೋಂಕು ಪ್ರಕರಣ, ಮೂವರು ಪೊಲೀಸರು ಸೇರಿ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 60ಕ್ಕೇರಿದೆ. 806 ಜನರು ಕ್ವಾರಂಟೈನ್‌ನಲ್ಲಿದ್ದು ವೈರಸ್ ಸೋಂಕಿತ 13 ಜನರು ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಟಲುದ್ರವ ಪರೀಕ್ಷೆಯ ಇನ್ನು 88 ಜನರ ವೈದ್ಯಕೀಯ ವರದಿ ಬರಬೇಕಾಗಿದೆ. ಓರ್ವ ಮೃತಪಟ್ಟಿದ್ದು, ಈ ವರೆಗೆ 43 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಮೂವರು ಪೊಲೀಸರಿಗೂ ಕೊರೋನಾ ಸೋಂಕು
ಜಿಂದಾಲ್‌ನಲ್ಲಿ ಮೂವರಿಗೆ ಕೊರೋನಾ ವೈರಸ್ ಸೋಂಕು ಹರಡಿರುವ ಬೆನ್ನಲ್ಲೇ ಜಿಲ್ಲೆಯ ಮೂರು ಪೊಲೀಸ್ ಠಾಣೆಗಳ ಮೂವರು ಪೊಲೀಸರಿಗೆ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದ ಶನಿವಾರವೊಂದೇ ದಿನ ಜಿಲ್ಲೆಯಲ್ಲಿ ಆರು ಕೊರೋನಾ ಸೋಂಕಿತರು ಪತ್ತೆಯಾದಂತಾಗಿದೆ. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆ, ಟಿಬಿ ಡ್ಯಾಂ ಪೊಲೀಸ್ ಠಾಣೆ ಹಾಗೂ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಪೇದೆಗೆ ಸೋಂಕು ಇರುವುದು ಖಚಿತವಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ.
ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಸದ್ಯ ಸೋಂಕಿತರ ಪ್ರದೇಶದಲ್ಲಿ ಕೈಗೊಳ್ಳಬೇಕಾದ ಕ್ರಮಗಳತ್ತ ಗಮನ ಹರಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೊಲೀಸ್ ಪೇದೆಗಳು ವಾಸವಾಗಿರುವ ಪ್ರದೇಶವನ್ನು ಸೀಲ್‌ಡೌನ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಮರಿಯಮ್ಮನಹಳ್ಳಿ, ಹೊಸಪೇಟೆ ಹಾಗೂ ಟಿಬಿ ಡ್ಯಾಂ ಪ್ರದೇಶಗಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಹಾಗೂ ಆಶಾ ಕಾರ್ಯಕರ್ತೆಯರು ತೆರಳಿದ್ದು, ಮನೆ ಮನೆ ಆರೋಗ್ಯ ತಪಾಸಣೆ ಕಾರ್ಯ ನಡೆದಿದೆ. ಮರಿಯಮ್ಮನಹಳ್ಳಿಯ ಪೊಲೀಸ್ ಸಿಬ್ಬಂದಿಗೆ ಕೊರೋನಾ ವೈರಸ್ ಇರುವುದು ಖಚಿತವಾಗುತ್ತಿದ್ದಂತೆಯೇ ಪೊಲೀಸ್ ವಾಸವಾಗಿದ್ದ ಪ್ರದೇಶದ ಅಂಗಡಿ, ಮುಂಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿಕೊಂಡಿದ್ದರು. ಜಿಲ್ಲೆಯ ಸೋಂಕಿತರ ಸಂಖ್ಯೆ 60ಕ್ಕೇರಿದೆ.