ಅತ್ಯಾಚಾರ: ಲೈನ್‌ಮ್ಯಾನ್ ವಿರುದ್ಧ ಪ್ರಕರಣ ದಾಖಲು| ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನಲ್ಲಿ ನಡೆದ ಘಟನೆ| ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿರುವ ಆರೋಪಿ ಮೇಲೆ ಕ್ರಮಕೈಗೊಳ್ಳುವಂತೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ನೊಂದ ಯುವತಿ|
ಹರಪನಹಳ್ಳಿ(ಜೂ.07): ವಿವಾಹವಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರವೆಸಗಿ ಇನ್ನೊಬ್ಬಳ ಜೊತೆ ಹೋಗಿದ್ದ ಇಲ್ಲಿಯ ಬೆಸ್ಕಾಂ ಲೈನ್‌ಮ್ಯಾನ್ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವಿನಾಶ ಎಂಬ ಲೈನ್‌ಮ್ಯಾನ್ ವಿರುದ್ಧ ಅತ್ಯಾಚಾರದ ಆರೋಪ ದಾಖಲಾಗಿದೆ. ಆರೋಪಿ ಹರಪನಹಳ್ಳಿ ತಾಲೂಕಿನ ಮಾಡ್ಲಗೇರಿ ತಾಂಡಾದವನಾಗಿದ್ದು, ಅದೇ ತಾಂಡಾದ 24 ವರ್ಷದ ಯುವತಿಯನ್ನು 4-5 ವರ್ಷಗಳಿಂದ ಪ್ರೀತಿಸುತ್ತಿದ್ದ. ಅಲ್ಲದೆ, ದೈಹಿಕ ಸಂಪರ್ಕ ಸಹ ಬೆಳಸಿದ್ದ. ಇದು ಗೊತ್ತಾಗಿ ಈಚೆಗೆ ತಾಂಡಾದ ದೈವಸ್ಥರು ಸಭೆ ಸೇರಿ 2021ರ ಯುಗಾದಿ ಹಬ್ಬದಲ್ಲಿ ಇಬ್ಬರಿಗೂ ವಿವಾಹ ಮಾಡಲು ಸಮಯ ನಿಗದಿ ಮಾಡಿದ್ದರು.
ಕಂಪ್ಲಿ: ಹೆಂಡ್ತಿ ಕೊಲೆಗೈದ ಆರೋಪ, ನೇಣಿಗೆ ಶರಣಾದ ಗಂಡ
ಇತ್ತೀಚಿಗೆ ಹೂವಿನ ಹಡಗಲಿ ತಾಲೂಕು ಕಗ್ಗಲಗಟ್ಟಿತಾಂಡಾದ ಇನ್ನೊಬ್ಬ ಯುವತಿ ಪ್ರೀತಿಸುತ್ತಿದ್ದ. ಇದು ಮೊದಲ ಯುವತಿಗೆ ಗೊತ್ತಾಗಿ ಯುವತಿ ಹಾಗೂ ದೈವಸ್ಥರು ಸೇರಿ ಜೂನ್ 15ರಂದು ವಿವಾಹ ನಿಗದಿ ಮಾಡಿದ್ದರು. ಆದರೆ, ಜೂನ್ 4ರಂದೇ ಕಗ್ಗಲ ಗಟ್ಟಿತಾಂಡಾದ ಯುವತಿ ಜೊತೆ ಅವಿನಾಶ ಪರಾರಿಯಾಗಿದ್ದಾನೆ. ಇದರಿಂದ ಮೊದಲು ಪ್ರೀತಿಸಿದ್ದ ಯುವತಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿರುವ ಅವಿನಾಶ ಮೇಲೆ ಕ್ರಮಕೈಗೊಳ್ಳುವಂತೆ ಪಟ್ಟಣದ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಡಿವೈಎಸ್ಪಿ ಮಲ್ಲೇಶ ದೊಡ್ಮನಿ ಹಾಗೂ ಸಿಪಿಐ ಕುಮಾರ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಪ್ರಕಾಶ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.