ಶಿರಸಿಯಲ್ಲಿ ಕಳೆದ ಎರಡು ತಿಂಗಳ ಹಿಂದಷ್ಟೇ ನಿರ್ಮಾಣವಾಯ್ತು ರಸ್ತೆ; ಆದ್ರೆ, ಒಂದೇ ಮಳೆಗೆ ಹೊಸ ರಸ್ತೆಯೇ ನಾಪತ್ತೆ!

Published : May 24, 2026, 02:50 PM IST
Sirsi Road Collapse

ಸಾರಾಂಶ

ಉತ್ತರ ಕನ್ನಡದ ಶಿರಸಿಯಲ್ಲಿ ಮೊದಲ ಮಳೆಗೇ ಹೊಸದಾಗಿ ನಿರ್ಮಿಸಿದ ರಸ್ತೆ ಕುಸಿದು ಅವಾಂತರ ಸೃಷ್ಟಿಯಾಗಿದೆ. ಕಳಪೆ ಕಾಮಗಾರಿಯಿಂದಾಗಿ ಗಣೇಶನಗರದ ನಿವಾಸಿಗಳು ಮನೆಯಿಂದ ಹೊರಬರಲಾಗದೆ ಸಂಕಷ್ಟಕ್ಕೆ ಸಿಲುಕಿದ್ದು, 8 ಮನೆಗಳಿಗೆ ಅಪಾಯ ಎದುರಾಗಿದೆ.

ಉತ್ತರ ಕನ್ನಡ (ಮೇ 24): ಮುಂಗಾರು ಆರಂಭದ ಮೊದಲ ಮಳೆಗೇ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ಭಾರಿ ಅವಾಂತರ ಸೃಷ್ಟಿಯಾಗಿದೆ. ಶಿರಸಿ ನಗರದ ಗಣೇಶನಗರದ ಎರಡನೇ ವಾರ್ಡಿನಲ್ಲಿ ಮಧ್ಯರಾತ್ರಿ ಸುರಿದ ಭಾರಿ ಮಳೆಗೆ ಇಡೀ ರಸ್ತೆಯೇ ನೀರಿನಲ್ಲಿ ಕೊಚ್ಚಿಹೋಗಿದೆ. ಕೇವಲ ಒಂದು ಮಳೆಗೆ ಸುಸಜ್ಜಿತವಾಗಿರಬೇಕಾದ ರಸ್ತೆ ಸಂಪೂರ್ಣವಾಗಿ ಧರಾಶಾಹಿಯಾಗಿರುವುದು ಸ್ಥಳೀಯ ಆಡಳಿತದ ಕಳಪೆ ಕಾಮಗಾರಿಯನ್ನು ಎದ್ದು ಕಾಣಿಸುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕೇವಲ ಎರಡು ತಿಂಗಳ ಹಿಂದಷ್ಟೇ ನಡೆದಿತ್ತು ಕಾಮಗಾರಿ!

ಸ್ಥಳೀಯ ನಿವಾಸಿಗಳ ಪ್ರಕಾರ, ಕೇವಲ ಎರಡು ತಿಂಗಳ ಹಿಂದಷ್ಟೇ ಈ ಭಾಗದಲ್ಲಿ ತಡೆಗೋಡೆ (Retaining Wall) ನಿರ್ಮಿಸಿ, ರಸ್ತೆಯ ಮೇಲೆ ಮಣ್ಣು ಹಾಕಿ ಸಮತಟ್ಟು ಮಾಡಲಾಗಿತ್ತು. ಆದರೆ, ಗುತ್ತಿಗೆದಾರರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕಳಪೆ ಮಟ್ಟದ ಕಾಮಗಾರಿಯಿಂದಾಗಿ ಮೊದಲ ಮಳೆಯನ್ನೇ ತಡೆದುಕೊಳ್ಳಲು ಈ ರಸ್ತೆಗೆ ಸಾಧ್ಯವಾಗಿಲ್ಲ. ಮಧ್ಯರಾತ್ರಿ ಸುರಿದ ಧಾರಾಕಾರ ಮಳೆಯ ರಭಸಕ್ಕೆ ರಸ್ತೆಗೆ ಹಾಕಲಾಗಿದ್ದ ಮಣ್ಣು ಕೊಚ್ಚಿಹೋಗಿದ್ದು, ಇಡೀ ರಸ್ತೆ ಕುಸಿದು ಬಿದ್ದಿದೆ. ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಓಮಿನಿ ವಾಹನ ಹಾಗೂ ಬೈಕ್‌ಗಳಿಗೂ ಈ ಅವಘಡದಿಂದ ಭಾರಿ ಹಾನಿಯಾಗಿದೆ.

ಮನೆಯಿಂದ ಹೊರಬರಲಾಗದೆ ನಿವಾಸಿಗಳ ಪೇಚಾಟ

ರಸ್ತೆ ಸಂಪೂರ್ಣವಾಗಿ ಕುಸಿದು ದೊಡ್ಡ ಕಂದಕ ನಿರ್ಮಾಣವಾಗಿರುವುದರಿಂದ ಗಣೇಶನಗರದ ಎರಡನೇ ವಾರ್ಡಿನ ನಿವಾಸಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಜನರು ತಮ್ಮ ಮನೆಗಳಿಂದ ಹೊರಗೆ ಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ಕಾಂಪೌಂಡ್ ಹಾಗೂ ಪ್ರಮುಖ ಸಂಪರ್ಕ ಕೊಂಡಿಯೇ ಕಟ್ ಆಗಿರುವುದರಿಂದ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಮನೆಯೊಳಗೇ ಬಂಧಿಯಾಗುವಂತಾಗಿದೆ.

8 ಮನೆಗಳಿಗೆ ತೂಗುಗತ್ತಿ!

ಈ ರಸ್ತೆಯ ಕೆಳಭಾಗದಲ್ಲಿ ತಗ್ಗು ಪ್ರದೇಶಗಳಿದ್ದು, ಅಲ್ಲಿ ಹಲವಾರು ಕುಟುಂಬಗಳು ವಾಸಿಸುತ್ತಿವೆ. ಪ್ರಸ್ತುತ ರಸ್ತೆ ಕುಸಿತದಿಂದಾಗಿ ಅಲ್ಲಿನ ತಡೆಗೋಡೆ ತೀವ್ರ ದುರ್ಬಲಗೊಂಡಿದೆ. ‘ಮಳೆ ಹೀಗೆಯೇ ಮುಂದುವರಿದರೆ ರಸ್ತೆಯ ರಕ್ಷಣೆಗೆಂದು ಕಟ್ಟಲಾದ ತಡೆಗೋಡೆ ಸಂಪೂರ್ಣವಾಗಿ ಕುಸಿದು ಕೆಳಗಿರುವ ಮನೆಗಳ ಮೇಲೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಇದರಿಂದಾಗಿ ಇಲ್ಲಿನ ಸುಮಾರು ಎಂಟು ಮನೆಗಳಿಗೆ ನೇರ ಅಪಾಯ ಎದುರಾಗಿದೆ’ ಎಂದು ಸ್ಥಳೀಯರು ಕಣ್ಣೀರು ಹಾಕುತ್ತಿದ್ದಾರೆ.

ಯಾವುದೇ ಕ್ಷಣದಲ್ಲಾದರೂ ಭಾರಿ ಅನಾಹುತ ಸಂಭವಿಸುವ ಮುನ್ನವೇ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ, ತಾತ್ಕಾಲಿಕವಾಗಿಯಾದರೂ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಕಳಪೆ ಕಾಮಗಾರಿ ನಡೆಸಿ ಸಾರ್ವಜನಿಕರ ಪ್ರಾಣದ ಜೊತೆ ಚೆಲ್ಲಾಟವಾಡಿರುವ ಗುತ್ತಿಗೆದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಗಣೇಶನಗರದ ನಿವಾಸಿಗಳು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

ಮೋದಿ ಸಾಗುವ ದಾರಿಯಲ್ಲಿ ಜಿಲೆಟಿನ್ ಸ್ಪೋಟಕ ಪತ್ತೆ: ಭದ್ರತಾ ಲೋಪ ಹಿನ್ನೆಲೆ ಪಿಎಸ್‌ಐ ಸೇರಿ 6 ಪೊಲೀಸರ ಅಮಾನತು!
ಬೆಂಗಳೂರು: 50 ವರ್ಷದ ಬಾಕ್ಸಿಂಗ್ ಕೋಚ್‌ನಿಂದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ಪೋಕ್ಸೋ ಕೇಸ್ ದಾಖಲು