ಮೋದಿ ಸಾಗುವ ದಾರಿಯಲ್ಲಿ ಜಿಲೆಟಿನ್ ಸ್ಪೋಟಕ ಪತ್ತೆ: ಭದ್ರತಾ ಲೋಪ ಹಿನ್ನೆಲೆ ಪಿಎಸ್‌ಐ ಸೇರಿ 6 ಪೊಲೀಸರ ಅಮಾನತು!

Published : May 24, 2026, 01:41 PM IST
Ramanagara 6 Police Suspended

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಯ ವೇಳೆ ಭದ್ರತಾ ಲೋಪ ಎಸಗಿದ ಆರೋಪದ ಮೇಲೆ ಪಿಎಸ್‌ಐ ಸೇರಿದಂತೆ 6 ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಮೋದಿ ಸಂಚರಿಸಬೇಕಿದ್ದ ರಸ್ತೆಯಲ್ಲಿ ಸ್ಫೋಟಕ ಪತ್ತೆಯಾಗಿದ್ದರೂ, ನಿರ್ಲಕ್ಷ್ಯ ತೋರಿದ್ದರಿಂದ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು/ರಾಮನಗರ (ಮೇ 24): ರಾಜಧಾನಿ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಗೆ ಸಂಬಂಧಿಸಿದಂತೆ ಉಂಟಾಗಿದ್ದ ಗಂಭೀರ ಲೋಪದ ಬೆನ್ನಲ್ಲೇ ಇದೀಗ ದೊಡ್ಡ ಮಟ್ಟದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಮೋದಿ ಸಂಚರಿಸಬೇಕಾಗಿದ್ದ ರಸ್ತೆಯ ಪಕ್ಕದಲ್ಲೇ ಸ್ಫೋಟಕಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಸೇರಿದಂತೆ ಒಟ್ಟು ಆರು ಜನ ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಬೆಂಗಳೂರು ದಕ್ಷಿಣ ಎಸ್ಪಿ ಕಠಿಣ ಆದೇಶ

ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ ಅಧೀಕ್ಷಕರಾದ (SP) ಶ್ರೀನಿವಾಸ್ ಗೌಡ ಅವರು ಈ ಅಮಾನತು ಆದೇಶವನ್ನು ಹೊರಡಿಸಿದ್ದಾರೆ. ಅಮಾನತುಗೊಂಡವರಲ್ಲಿ ಒಬ್ಬರು ಪಿಎಸ್‌ಐ (PSI), ಒಬ್ಬರು ಎಎಸ್‌ಐ (ASI) ಹಾಗೂ ನಾಲ್ವರು ಪೊಲೀಸ್ ಪೇದೆಗಳು (Constables) ಸೇರಿದ್ದಾರೆ. ವಿವಿಐಪಿ (VVIP) ಭದ್ರತೆಯಂತಹ ಅತ್ಯಂತ ಸೂಕ್ಷ್ಮ ಜವಾಬ್ದಾರಿಯ ಸಮಯದಲ್ಲಿ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ತೋರಿದ ಕಾರಣಕ್ಕಾಗಿ ಇವರ ವಿರುದ್ಧ ಈ ಕಠಿಣ ಕ್ರಮ ಜರುಗಿಸಲಾಗಿದೆ.

ಭದ್ರತಾ ಸ್ಥಳದ ಬಳಿಯೇ ಸಿಕ್ಕಿದ್ದವು ಸ್ಫೋಟಕಗಳು!

ಕಳೆದ ಮೇ 10ರಂದು ಬೆಂಗಳೂರು ದಕ್ಷಿಣ ತಾಲೂಕಿನ ವಡೇರಹಳ್ಳಿ ಗೇಟ್ ಬಳಿ ಈ ಆಘಾತಕಾರಿ ಘಟನೆ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಭೇಟಿಯ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಭಾರಿ ಬಂದೋಬಸ್ತ್ ನಿಯೋಜಿಸಲಾಗಿತ್ತು. ಅಮಾನತುಗೊಂಡಿರುವ ಆರು ಜನ ಪೊಲೀಸರನ್ನು ಸ್ಫೋಟಕಗಳು ಪತ್ತೆಯಾದ ವಡೇರಹಳ್ಳಿ ಗೇಟ್‌ನ ನಿಗದಿತ ಜಾಗದಲ್ಲೇ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಆದರೆ, ಇವರು ಕರ್ತವ್ಯದಲ್ಲಿದ್ದ ಸ್ಥಳದ ಅತ್ಯಂತ ಸಮೀಪದಲ್ಲೇ ತೀವ್ರ ತರಹದ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು ಇಡೀ ಪೊಲೀಸ್ ಇಲಾಖೆಯನ್ನು ತಲ್ಲಣಗೊಳಿಸಿತ್ತು.

ಅಲರ್ಟ್ ಇರಲಿಲ್ಲ ಪೊಲೀಸರು; ಹಿರಿಯ ಅಧಿಕಾರಿಗಳ ತರಾಟೆ

ವಿವಿಐಪಿಗಳು ಬರುವ ಮುನ್ನ ಇಡೀ ಮಾರ್ಗವನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿ ಹದ್ದಿನ ಕಣ್ಣಿಡಬೇಕಾದದ್ದು ಕರ್ತವ್ಯದ ನಿಯಮ. ಆದರೆ ಸ್ಫೋಟಕಗಳು ಪತ್ತೆಯಾದ ಸ್ಥಳದಲ್ಲೇ ಇದ್ದರೂ ಈ ಸಿಬ್ಬಂದಿಗಳು ಯಾವುದೇ ರೀತಿಯ ಮುನ್ನೆಚ್ಚರಿಕೆ ವಹಿಸಿಲ್ಲ ಹಾಗೂ ಅಲರ್ಟ್ ಆಗಿರಲಿಲ್ಲ ಎನ್ನುವುದು ಉನ್ನತ ಮಟ್ಟದ ತನಿಖೆಯಲ್ಲಿ ಸಾಬೀತಾಗಿದೆ. ಕರ್ತವ್ಯದ ವೇಳೆ ತೋರಿದ ಈ ಅತಿಯಾದ ಅಲಕ್ಷ್ಯವು ಪ್ರಧಾನಿಯವರ ಸುರಕ್ಷತೆಗೆ ಧಕ್ಕೆ ತರುವಂತಹ ಗಂಭೀರ ಲೋಪ ಎಂದು ಪರಿಗಣಿಸಿ, ಎಸ್‌ಪಿ ಶ್ರೀನಿವಾಸ್ ಗೌಡ ಅವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಎಲ್ಲ ಆರು ಜನರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ಪ್ರಧಾನಿ ಮಾರ್ಗದಲ್ಲಿ ಸ್ಫೋಟಕ ಪತ್ತೆಯಾದ ದಿನದಿಂದಲೇ ಆಂತರಿಕ ತನಿಖೆ ಚುರುಕುಗೊಂಡಿತ್ತು. ಸದ್ಯ ಪೊಲೀಸರ ಅಮಾನತು ನಡೆಸಿರುವುದು ಇಲಾಖೆಯ ಇತರೆ ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದಂತಾಗಿದೆ. ಈ ಪ್ರಕರಣದ ಕುರಿತು ಮತ್ತಷ್ಟು ತನಿಖೆ ಮುಂದುವರಿದಿದೆ.

PREV
Read more Articles on
click me!

Recommended Stories

ಬೆಂಗಳೂರು: 50 ವರ್ಷದ ಬಾಕ್ಸಿಂಗ್ ಕೋಚ್‌ನಿಂದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ಪೋಕ್ಸೋ ಕೇಸ್ ದಾಖಲು
ಬೆಂಗಳೂರಿನ ಶಿಕ್ಷಕಿ ಡಿಜಿಟಲ್ ಅರೆಸ್ಟ್: ₹24 ಕೋಟಿ ದೋಚಿದರೂ ತೀರದ ದಾಹ, ಸುಳಿವು ಕೊಟ್ಟ ICICI Bank ಮ್ಯಾನೇಜರ್!