ಸಿರಿಗೆರೆ (ಅ.8) : ತಡ ಮುಂಗಾರಿಗೆ ಹರಿದು ಬಂದ ನೀರಿನ ಒತ್ತಡಕ್ಕೆ ಕೆರೆ ಏರಿಯೇ ಸರಿದಿರುವ ಸಿರಿಗೆರೆಯ ಹೊಸಕೆರೆ ಮತ್ತು ದೊಡ್ಡ ಪ್ರಮಾಣದಲ್ಲಿ ಬಿರುಕುಗಳು ಕಾಣಿಸಿರುವ ಐತಿಹಾಸಿಕ ಭರಮಣ್ಣ ನಾಯಕನ ಕೆರೆಗೆ ಶುಕ್ರವಾರ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭೇಟಿ ನೀಡಿ ಪರಿಶೀಲಿಸಿ ಇಂಜಿನಿಯರ್, ಅಧಿಕಾರಿಗಳು ಮತ್ತು ಸಾರ್ವಜನಿಕರೊಡನೆ ಚರ್ಚಿಸಿದರು.
ಒತ್ತಡ ಕಡಿಮೆ ಮಾಡಿ:
ಎರಡೂ ಕೆರೆಗಳಲ್ಲಿನ ಅಪಾರ ನೀರನ್ನು ಉಳಿಸಿ ಲಭ್ಯವಿರುವ ಆಧುನಿಕ ತಂತ್ರಜ್ಞಾನ ಬಳಸಿ ಕೆರೆಗಳನ್ನು ರಕ್ಷಿಸಬೇಕಿದೆ. ಎರಡೂ ಕೆರೆಗಳು ಸದ್ಯಕ್ಕೆ ಅಪಾಯದ ಅಂಚು ತಲುಪಿಲ್ಲ. ಆದರೆ ಜನ, ಜಾನುವಾರು, ಕೃಷಿ ಗಮನದಲ್ಲಿಟ್ಟು ರಕ್ಷಣೆಗೆ ಬೇಕಾದ ಅಗತ್ಯ ಕ್ರಮಗಳ ಕೂಡಲೇ ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದರು. ಭರಮಸಾಗರ ಏತ ನೀರಾವರಿ ಯೋಜನೆಗೆ 43 ಕೆರೆಗಳು ಒಳಪಟ್ಟಿವೆ. ತಾಂತ್ರಿಕ ತೊಂದರೆಯಿಂದ 8 ಕೆರೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಉಳಿದ 35 ಕೆರೆಗಳಿಗೆ ಇಂದಿನಿಂದಲೇ ನೀರು ಪಂಪ್ ಮಾಡಿ ಭರಮಸಾಗರ ಕೆರೆಯಲ್ಲಿನ ಒತ್ತಡ ಕಡಿಮೆ ಮಾಡಿಕೊಳ್ಳಬೇಕು ಎಂದು ಶ್ರೀಗಳು ಇಂಜಿನಿಯರ್‌ಗಳಿಗೆ ಸೂಚಿಸಿದರು.
ತಂತ್ರಜ್ಞಾನ ಬಳಸಿ ರಕ್ಷಿಸಿ:
ಕೆರೆಯ ಮೂಲ ಏರಿಗೆ ಯಾವುದೇ ಅಪಾಯ ಇಲ್ಲ. ಏರಿಯನ್ನು ಅಗಲ ಮಾಡಿ ರಸ್ತೆ ನಿರ್ಮಿಸುವಾಗ ಆಗಿರುವ ಕಾಮಗಾರಿ ದೋಷದಿಂದ ಈ ತೊಂದರೆ ಪುನರಾವರ್ತನೆ ಆಗುತ್ತಿದೆ. ಆಳದವರೆಗೂ ಮಣ್ಣು ತೆಗೆದು ಲಭ್ಯ ಇರುವ ತಂತ್ರಜ್ಞಾನ ಬಳಸಿ ಇದನ್ನು ರಕ್ಷಿಸಬೇಕು. ಗ್ರೋಟಿಂಗ್ ತಂತ್ರಜ್ಞಾನ ಬಳಸಿ ಮಣ್ಣನ್ನು ಗಟ್ಟಿಗೊಳಿಸುವುದು, ನೆಲದ ಆಳದಲ್ಲಿ ಸಿಮೆಂಟ್ ಕಾಂಕ್ರಿಟ್ ಗೋಡೆ ನಿರ್ಮಿಸಿ ನೀರು ಬಸಿಯುವಿಕೆ ತಡೆಗಟ್ಟುವ ಕುರಿತು ಶ್ರೀಗಳು ಚರ್ಚೆ ಮಾಡಿದರು.
ಸ್ಥಳದಿಂದಲೇ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಮಾಹಿತಿ ಸಂಗ್ರಹಿಸಿದರು. ಜನರು ಹಾಗೂ ಕೆರೆಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ರಕ್ಷಣೆಯ ಕೆಲಸವನ್ನು ಕೂಡಲೇ ಆರಂಭಿಸಲು ಶ್ರೀಗಳು ಅಧಿಕಾರಿಗಳಿಗೆ ಒತ್ತಾಯಿಸಿದರು.
ಇಂಜಿನಿಯರ್ ಮನೋಜ್ ಕುಮಾರ್, ಮಂಜುನಾಥ್, ಕೆರೆ ಸಮಿತಿ ಅಧ್ಯಕ್ಷ ಚೌಲಿಹಳ್ಳಿ ಶಶಿ ಪಾಟೀಲ್, ಜಿಪಂ ಮಾಜಿ ಸದಸ್ಯ ಡಿವಿ ಶರಣಪ್ಪ, ಕಾಂಗ್ರೆಸ್ ಮುಖಂಡ ಎಚ್.ಎನ್.ತಿಪ್ಪೇಸ್ವಾಮಿ, ಬಿಜೆಪಿ ಮುಖಂಡರಾದ ಸಾಮಿಲ್ ಶಿವಣ್ಣ, ಶೈಲೇಶ್ ಕುಮಾರ್, ಪೊಲೀಸ್ ಅಧಿಕಾರಿ ಟಿ.ಎಸ್. ಮಧು, ಗ್ರಾಪಂ ಅಧ್ಯಕ್ಷೆ ಮಂಜುಳಾ ಕರಿಬಸಪ್ಪ, ಚಿಕ್ಕಬೆನ್ನೂರು ಕೃಷಿ ಸಹಕಾರ ಸಂಘದ ಅಧ್ಯಕ್ಷ ಬಿ.ಜಿ.ತೀರ್ಥಪ್ಪ ಮುಂತಾದವರಿದ್ದರು.
ವಾಹನಗಳ ಸಂಚಾರ ನಿಬಂರ್‍ಧಿಸಿ
ಭರಮಸಾಗರ ಕೆರೆಯ ಮೇಲಿನ ಎಲ್ಲಾ ವಾಹನಗಳ ಸಂಚಾರ ಕೂಡಲೇ ನಿರ್ಬಂಧಿಸಬೇಕು. ಜನರ ಹಿತದೃಷ್ಟಿಯಿಂದ ಇಂತಹ ಮುನ್ನೆಚ್ಚರಿಕೆ ಅಗತ್ಯ. ಏರಿಯ ಎರಡೂ ಕಡೆ ತಡೆಗೋಡೆಗಳನ್ನು ಕಟ್ಟಿಯಾವ ವಾಹನವೂ ಸಂಚರಿಸದಂತೆ ನೋಡಿಕೊಳ್ಳಬೇಕು. ಎಚ್ಚರಿಕೆ ಮೀರಿ ನಡೆಯುವವರ ವಿರುದ್ಧ ಪೊಲೀಸ್ ಇಲಾಖೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಶ್ರೀಗಳು ಸೂಚಿಸಿದರು.
ನೀರಿನ ಒತ್ತಡದಿಂದ ಹೊಸಕೆರೆ ಏರಿ ಬಿರುಕು
ಸಿರಿಗೆರೆಯ ಹೊಸಕೆರೆಗೆ ಶುಕ್ರವಾರ ಭೇಟಿ ನೀಡಿದ ಶ್ರೀಗಳು ಅಲ್ಲಿ ಆಗುತ್ತಿರುವ ಕಾಮಗಾರಿಯ ಮಾಹಿತಿಯನ್ನು ಕಾರ್ಯಪಾಲಕ ಇಂಜಿನಿಯರ್ ರಾಧಾಕೃಷ್ಣರಿಂದ ಪಡೆದರು. ನೀರಿನ ಒತ್ತಡದಿಂದ ಕೆರೆಯ ಏರಿಯೇ ದಿನವೂ ಸರಿಯುತ್ತಿದೆ. ಅದರಿಂದ ಬಿರುಕುಗಳು ಕಾಣಿಸಿವೆ. ತಾತ್ಕಾಲಿಕ ಮಣ್ಣಿನ ಚೀಲಗಳ ತಡೆಗೋಡಿ ನಿರ್ಮಾಣ ಮಾಡಿ ಅದಕ್ಕೆ ಮಣ್ಣಿನ ಭದ್ರಗೋಡೆ ಮಾಡಿದ ನಂತರ ಬಿರುಕು ಬಿಟ್ಟಿರುವ 30 ಮೀಟರ್ ಏರಿ ದುರಸ್ತಿ ಮಾಡಿ ಸರಿಪಡಿಸಲಾಗುವುದು ಎಂದು ರಾಧಾಕೃಷ್ಣ ಹೇಳಿದರು.
ಏರಿಯ ಪೂರ್ವ ಭಾಗದಿಂದ ಪಶ್ಚಿಮ ಭಾಗದಲ್ಲಿರುವ ಕೆರೆಯ ಕೋಡಿವರೆಗೂ ಶ್ರೀಗಳು ಓಡಾಡಿ ಕೆರೆಯ ಸುರಕ್ಷತೆ ಬಗ್ಗೆ ಮಾಹಿತಿ ಪಡೆದರು. ನೀರು ಖಾಲಿ ಮಾಡಲು ಒಡೆದಿರುವ ಕೋಡಿಯನ್ನು ಜರ್ಮನ್ ಸಿಮೆಂಟ್ ತಂತ್ರಜ್ಞಾನದಿಂದ ದುರಸ್ತಿ ಮಾಡಲು ಶ್ರೀಗಳು ಅಧಿಕಾರಿಗಳಿಗೆ ತಿಳಿಸಿದರು.
ಮಣ್ಣಿನ ಮಾದರಿ ಸಂಗ್ರಹ:
ಮೈಸೂರಿನಿಂದ ಗುರುವಾರ ಆಗಮಿಸಿದ್ದ ತಜ್ಞರು ಏರಿಯ ಮಣ್ಣಿನ ಮಾದರಿಯ ಸಂಗ್ರಹಿಸಿದ್ದಾರೆ. ಅವರಿಂದ ವರದಿ ಬಂದ ತಕ್ಷಣವೇ ಕಾಯಂ ಕಾಮಗಾರಿ ಆರಂಭಿಸಲಾಗುವುದು. ಈಗ ಕೆರೆಗೆ ಯಾವುದೇ ಅಪಾಯ ಸಂಭವಿಸಬಾರದೆಂದು ತಾತ್ಕಾಲಿಕ ಮುನ್ನೆಚ್ಚರಿಕಾ ಕೆಲಸಗಳ ಮಾಡುತ್ತಿದ್ದೇವೆ ಎಂದರು. ಇಂಜಿನಿಯರ್ ನೀಡಿದ ಮಾಹಿತಿಗೆ ಶ್ರೀಗಳು ಮೆಚ್ಚುಗೆ ಸೂಚಿಸಿದರು.
ಇಂಜಿನಿಯರ್ ನವೀನ್, ಶರಬೇಂದ್ರಯ್ಯ, ಗ್ರಾಪಂ ಅಧ್ಯಕ್ಷ ಎಂ.ಜಿ. ದೇವರಾಜ್, ಕಂದಾಯ ಇಲಾಖೆ ಅಧಿಕಾರಿ ರಮೇಶ್, ಪಿಡಿಒ ಹನ್ಸಿರಾ ಬಾನು, ಸಿ.ಆರ್.ನಾಗರಾಜ್, ಬಿ.ಎಸ್.ತಿಮ್ಮರಾಜು, ಚೇತನ್, ಗಂಗಜ್ಜೆರ ಉಮಾಪತಿ, ಎಂ.ಬಸವರಾಜಯ್ಯ, ಆರ್.ಶಿವಮೂರ್ತಯ್ಯ, ಕೃಷಿ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ಮಂಜುನಾಥ್ ಮುಂತಾದವರಿದ್ದರು.