ಬಹುದೊಡ್ಡ ವ್ಯಕ್ತಿತ್ವವಾದರೂ ತುಂಬ ಸರಳವಾಗಿದ್ರು ಎಸ್ಬಿಪಿ ಎನ್ನುತ್ತಾರೆ ಗಾಯಕಿ ಮಾಲಾಶ್ರೀ ಕಣವಿ| ಎದೆ ತುಂಬಿ ಹಾಡುವೆನು ಸ್ಪರ್ಧೆಯಲ್ಲಿ 1 ವರ್ಷ ಬಾಲು ಸರ್ ಜೊತೆ ಕಳೆದ ಅನುಭವ ಮರೆಯಲಾಗದು| ಮಾಲಾಶ್ರೀ ಕಣವಿ ಇದೀಗ ಕಲ್ಯಾಣ ನಾಡಿನ ಹೆಸರಾಂತ ಗಾಯಕಿ|
ಕಲಬುರಗಿ(ಸೆ.26): ಬಾಲು ಸರ್ ಬಹು ದೊಡ್ಡ ವ್ಯಕ್ತಿತ್ವದವರು, ಆದರೂ ಅಷ್ಟೇ ಸರಳ, ತಾವು ಅಷ್ಟೊಂದು ದೊಡ್ಡ ಗಾಯಕರಾದರೂ ಅರಳುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುತ್ತಿದ್ದ ಪರಿ ಎಂದೂ ಮರೆಯಲಾಗದು, ಅವರ ನಿಧನ ನಮಗೆಲ್ಲರಿಗೂ ನೋವುಂಟು ಮಾಡಿದೆ.
ಟಿವಿ ವಾಹಿನಿಯೊಂದರ ಎದೆ ತುಂಬಿ ಹಾಡುವೆನು ಸ್ಪರ್ಧೆ ಸರಣಿಯಲ್ಲಿ ಪಾಲ್ಗೊಂಡು ಬಾಲಸುಬ್ರಹ್ಮಣ್ಯಂ ಅವರಿಂದ ಶಹಬಾಸ್‌ಗಿರಿ ಪಡೆದುಕೊಂಡ ಕಲಬುರಗಿ ಗಾಯಕಿ ಮಾಲಾಶ್ರೀ ಕಣವಿ ಮಾತುಗಳಿವು. 2004ರಲ್ಲಿ ಟಿವಿ ವಾಹಿನಿಯೊಂದರ ಯುವ ಗಾಯಕರ ಶೋಧಿಸುವ ಎದೆತುಂಬಿ ಹಾಡುವೆನು ಗಾಯನ ಸ್ಪರ್ಧೆಯ ಯಾನದಲ್ಲಿ ಬಾಲಸುಬ್ರಹ್ಮಣ್ಯಂ ಜೊತೆಗೆ ಹೆಚ್ಚುಕಮ್ಮಿ 1 ವರ್ಷ ಕಾಲ ಕಳೆದವರು ಮಾಲಾಶ್ರೀ ಕಣವಿ.
ಕಲಬುರಗಿ ಭಾಗದಿಂದ ಈ ಸ್ಪರ್ಧೆಗೆ ಆಯ್ಕೆಯಾಗಿದ್ದ ನಾನು ಬೆಂಗಳೂರಿಗೆ ಶೂಟಿಂಗ್‌ಗೆ ಹೋಗೋದಿತ್ತು. ರಸ್ತೆ ಮೂಲಕ ಹೋಗುವಾಗ ತುಂಬ ತಡವಾಗಿತ್ತು. ಬಾಲು ಸರ್ ಮೊದಲ್ಗೊಂಡು ಎಲ್ಲರೂ ನನ್ನ ಬರುವಿಕೆಗಾಗಿಯೇ ಕಾಯುತ್ತಿದ್ದರು. ದಾರಿಯಲ್ಲಿ ಕರೆ ಮಾಡಿದಾಗ ನಾನಿನ್ನೂ ತುಮಕೂರಲ್ಲಿದ್ದೆ. ನನ್ನಿಂದಲೇ ವಿಳಂಬವಾಯ್ತಲ್ಲ, ಬಾಲು ಸರ್‌ರಂತಹ ದಿಗ್ಗಜರು ನನಗಾಗಿ ಕಾಯುವಂತಾಯ್ತಲ್ಲ ಎಂದು ಮನದಲ್ಲೇ ಅಂಜಿದ್ದ ನಾನು ಉಳಿದೆಲ್ಲ ಸ್ಪರ್ಧಿಗಳ ಸಾಲಲ್ಲಿ ಹೋಗಿ ಕುಳಿತೆ. ಇದನ್ನು ಗಮನಿಸಿದ್ದ ಎಸ್ಪಿ ಸರ್ ನಾನಿದ್ದಲ್ಲಿಗೆ ಬಂದು ಉಭಯಕುಶಲೋಪರಿ ವಿಚಾರಿಸಿದರಲ್ಲದೆ ಶುಭ ಕೋರಿದರಷ್ಟೆ, ವಿಳಂಬ ಆಗಮನಕ್ಕೆ ಏನೂ ಆಕ್ಷೇಪಣೆ ಎತ್ತದೆ ನಮ್ಮನ್ನೆಲ್ಲ ಹುರಿದುಂಬಿಸಿ ಸ್ಪರ್ಧೆಯ ಶೂಟಿಂಗ್ ಆರಂಭಿಸಿದ್ದರು. ಇಂತಹ ಸರಳ ವ್ಯಕ್ತಿತ್ವ ನಾನು ಕಂಡಿದ್ದು ಇದೇ ಮೊದಲು’ ಎಂದು ಮಾಲಾ ಕಣವಿ ಅವರು ಬಾಲು ಸರ್ ಜೊತೆಗೆ ತಾವು ಕಳೆದ ಸಮಯವನ್ನ ಸ್ಮರಿಸಿದರು.
ಹೈದ್ರಾಬಾದ್‌ನಿಂದ ಕಾರಿನಲ್ಲೇ ವಿಜಯಪುರಕ್ಕೆ ಆಗಮಿಸಿ ಸಂಗೀತ ಸುಧೆ ಹರಿಸಿದ್ದ ಎಸ್‌ಪಿಬಿ
ವಚನಗಳ ಬಗ್ಗೆ ತುಂಬ ಆಸಕ್ತಿ ಇತ್ತು:
ಬಸವಣ್ಣ ಮೊದಲ್ಗೊಂಡು ಶರಣ, ಶರಣೆಯರು ರಚಿಸಿದ ವಚನಗಳ ಬಗ್ಗೆಯೂ ಎಸ್ಪಿಗೆ ತುಂಬ ಆಸಕ್ತಿ. ಎದೆ ತುಂಬಿ ಹಾಡುವೆನು ಸರಣಿಯ ಕೊನೆಯಲ್ಲಿ ಬಾಲು ಸರ್ ವಚನ, ಪದ ಹೇಳುತ್ತ ಸಂದೇಶ ಒಂದನ್ನು ಸಾರುತ್ತಿದ್ದರು. ನಾನು ಅನೇಕ ಬಾರಿ ಅವರಿಗೆ ವಚನಗಳನ್ನು ಆಯ್ದು ಕೊಟ್ಟು ಅದರ ಭಾವಾರ್ಥ ಚರ್ಚಿಸಿದ್ದೇನೆ. ಅವರು ಅದನ್ನೆಲ್ಲ ಮೆಚ್ಚಿಕೊಂಡು ನನ್ನನ್ನು ಹುರಿದುಂಬಿಸುತ್ತಿದ್ದರು. ಎದೆ ತುಂಬಿ ಹಾಡುವೆನು ಸರಣಿಯ ಕೊನೆಯಲ್ಲಿ ಹೇಳುವ ಅನೇಕ ಸಂದದೇಶಗಳಲ್ಲಿ ವಚನಗಳೇ ಮಂಚಿದ್ದವು. ಬಾಲು ಸರ್ ಅನೇಕ ವಚನಗಳ ಬಗ್ಗೆ ತುಂಬ ಪ್ರಬಾವಿತರಾಗಿದ್ದಿತ್ತು’ ಎನ್ನುವ ಮಾಲಾಶ್ರೀ ದೊಡ್ಡ ಗಾಯಕರು ಇನ್ನಿಲ್ಲವಲ್ಲ ಎಂಬುದೇ ದುಃಖದ ಸಂಗತಿ ಎಂದು ಕಣ್ಣೀರಾದರು.
ಗಾಯನದಲ್ಲಿ ಹಳೇ ಮೈಸೂರು ಗಾಯಕರ ಕಂಠವೇ ಬೇರೆ, ಉತ್ತರ ಕರ್ನಾಟಕ, ಕಲ್ಯಾಣ ಸೀಮೆಯ ಕಂಠವೇ ಬೇರೆ. ನಾನು ಮೊದಲು ಸರಣಿಯಲ್ಲಿ ಹಾಡಿದಾಗ ಉ.ಕ. ಕಂಠಸಿರಿ ಕಂಚಿನ ಕಂಠ... ಎಂದು ಬಾಲು ಸರ್ ಸರಣಿ ಕೊನೆಯಲ್ಲಿ ಓಡೋಡಿ ಬಂದು ನನ್ನನ್ನು ಹುರಿದುಂಬಿಸಿದ್ದೆ. ಅನೇಕ ಬಾರಿ ಇಂತಹ ಕ್ಷಣಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ಅವೆಲ್ಲವೂ ಇಂದು ನನ್ನ ಸ್ಮೃತಿ ಪಟಲದಲ್ಲಿ ಹಾದು ಹೋಗುತ್ತಿವೆ ಎಂದು ಮಾಲಾ ಕಣವಿ ಬಾಲು ಸರ್ ವ್ಯಕ್ತಿತ್ವ, ಪ್ರತಿಭೆಗಳಿಗೆ ಪ್ರೋತಿಸಾಹಿಸುವ ಅವರ ಪರಿಯನ್ನೆಲ್ಲ ವಿವರವಾಗಿ ’ಕನ್ನಡಪ್ರಭ’ ಜೊತೆ ಮಾತನಾಡುತ್ತ ಮಾಹಿತಿ ನೀಡಿದರು.
ಬಾಲಸುಬ್ರಹ್ಮಣ್ಯ ಅವರ ಎದೆ ತುಂಬಿ ಹಾಡುವೆನು ಸರಣಿಯಲ್ಲಿ ಮೊದಲ ಬಹುಮಾನ ಪಡೆದ ಮಾಲಾಶ್ರೀ ಕಣವಿ ಇದೀಗ ಕಲ್ಯಾಣ ನಾಡಿನ ಹೆಸರಾಂತ ಗಾಯಕಿ, ಶರಣರ ವಚನಗಳು, ದಾಸರ ಪದಗಳನ್ನು ತುಂಬ ಸರಳವಾಗಿ ಸುಂದರವಾಗಿ ಪ್ರಸ್ತುತ ಪಡಿಸುವ ಅವರಿಗೆ ಬಾಲು ಸರ್ ಜೊತೆಗಿನ ಒಡನಾಟ ಹೊಸ ಬ್ರೇಕ್ ನೀಡಿತ್ತು.