ಮಳೆ ಬಂದರೆ ಸಾಕು ಕೆಸರು ಗದ್ದೆಯಾಗುವ ಸಿಂಧನೂರಿನ ರಸ್ತೆ

By Web DeskFirst Published Sep 23, 2019, 10:29 AM IST
Highlights

ಸಿಂಧನೂರು ನಗರದ ಹೃದಯ ಭಾಗದಲ್ಲಿರುವ 19ನೇ ವಾರ್ಡ್‌ನಲ್ಲಿ ಪ್ರಮುಖ ರಸ್ತೆಯೇ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ| ಇದಕ್ಕೆ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ| ಈ ರಸ್ತೆಯ ಮೂಲಕ ವಿದ್ಯಾರ್ಥಿಗಳು ಶಾಲೆಗೆ ಹೋಗುವುದೇ ದುಸ್ತರವಾಗಿದೆ| ಪಾಲಕರು ಮಕ್ಕಳನ್ನು ಕೆಸರು ತುಂಬಿರುವ ರಸ್ತೆಯಲ್ಲಿಯೇ ಕರೆದುಕೊಂಡು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ| 

ಸಿಂಧನೂರು:(ಸೆ.23) ನಗರದ ಹೃದಯ ಭಾಗದಲ್ಲಿರುವ 19ನೇ ವಾರ್ಡ್‌ನಲ್ಲಿ ವಿವಿಧ ವ್ಯಾಪಾರಿಗಳು, ಗಣ್ಯರು, ಸರ್ಕಾರಿ ಅಧಿಕಾರಿಗಳು, ಸಮಾಜ ಸೇವಕರು, ನಗರಸಭೆ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು ಸೇರಿದಂತೆ ಹಲವಾರು ಗಣ್ಯರು ವಾಸ ಮಾಡುತ್ತಿದ್ದಾರೆ. ಆದರೆ ‘ದೀಪದ ಕೆಳಗೆ ಕತ್ತಲು’ ಇರುವಂತೆ ಈ ವಾರ್ಡ್‌ನಲ್ಲಿ ಪ್ರಮುಖ ರಸ್ತೆಯೇ ಕೆಸರು ಗದ್ದೆಯಾಗಿ ಮಾರ್ಪಟ್ಟಿದ್ದರೂ ಜನಪ್ರತಿನಿಧಿಗಳು ಗಮನ ಹರಿಸದಿರುವುದು ವಿಪರ್ಯಾಸವಾಗಿದೆ.

ಈ ಬಗ್ಗೆ ಮಾತನಾಡಿದ ವಾರ್ಡಿನ ನಿವಾಸಿಗಳು ಮಳೆ ಬಾರದಿರುವಾಗ ವಿಪರೀತ ಧೂಳಿನಿಂದ ಕೂಡಿರುವ ರಸ್ತೆ, ಮಳೆ ಬಂದರೆ ಸಾಕು ಅಕ್ಷರಶಃ ಕೆಸರು ಗದ್ದೆಯಂತಾಗುತ್ತದೆ. ಆದರೆ ನಗರಸಭೆಯ ಸದಸ್ಯರು ಮತ್ತು ಅಧಿಕಾರಿಗಳು ಕನಿಷ್ಠ ಪ್ರಮಾಣದ ಕ್ರಮಗಳನ್ನು ಕೈಗೊಳ್ಳದಿರುವುದಕ್ಕೆ ಬೇಸರವಾಗಿದೆ ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಯಚೂರು-ಗಂಗಾವತಿ ಮುಖ್ಯರಸ್ತೆಯಿಂದ ಪೂರ್ವಾಭಿಮುಖವಾಗಿ ಹೋಲಿ ಫ್ಯಾಮಿಲಿ ಶಾಲೆಗೆ ಹೋಗುವ ರಸ್ತೆಗೆ ಸಂಪರ್ಕವೇ ಇಲ್ಲದಂತಾಗಿದೆ. ವಿದ್ಯಾರ್ಥಿಗಳು ಶಾಲೆಗೆ ಹೋಗುವುದೇ ದುಸ್ತರವಾಗಿದೆ. ಪಾಲಕರು ಮಕ್ಕಳನ್ನು ಕೆಸರು ತುಂಬಿರುವ ರಸ್ತೆಯಲ್ಲಿಯೇ ಕರೆದುಕೊಂಡು ಹೋಗಬೇಕಾಗಿದೆ. ನಗರಸಭೆ ಸದಸ್ಯ ಹೆಚ್‌.ಬಾಷಾ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಸಾರ್ವಜನಿಕರು ಅವರನ್ನು ಭೇಟಿ ಮಾಡುವುದು ದುಸ್ತರವಾಗಿದೆ ಎಂದು ವಾರ್ಡಿನ ನಿವಾಸಿಗಳಾದ ಎಂ.ಎಸ್‌. ಶ್ರೀನಿವಾಸಗೌಡ, ದಾದಾಸಾಬ, ಹುಲಿಗೆಪ್ಪ ಮ್ಯಾದರ್‌, ತಮ್ಮಣ್ಣ ಮ್ಯಾದರ್‌, ನವಾಬಸಾಬ್‌ ಹೇಳುತ್ತಾರೆ.

ಬಾದರ್ಲಿ ಹಂಪನಗೌಡರು ಶಾಸಕರಾಗಿದ್ದ ಸಂದರ್ಭದಲ್ಲಿ ನಗರದ ಹೆಚ್ಚುವರಿ ಬಡಾವಣೆಗಳಲ್ಲಿ ಹಲವಾರು ಹೊಸ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಸಿಸಿ ಮತ್ತು ಡಾಂಬರ್‌ ರಸ್ತೆಗಳನ್ನು ಮಾಡಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ಆದರೆ 19ನೇ ವಾರ್ಡಿನ ಈ ರಸ್ತೆಗೆ ಮಾತ್ರ ಕಾಯಕಲ್ಪ ದೊರೆತಿಲ್ಲ ಎಂದು ಹಿರಿಯ ನಾಗರಿಕ ಬಾಲಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ ಅವರು, ನಗರಸಭೆ ಅನುದಾನ ಬಂದಾಕ್ಷಣ ಪ್ರಥಮ ಆದ್ಯತೆ ನೀಡಿ ರಸ್ತೆ ಡಾಂಬರೀಕರಣ ಮಾಡುವ ಮೂಲಕ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ಹೇಳಿದರು.

click me!