ರೇಷ್ಮೆ ಕೃಷಿಯಿಂದ ರೈತರು ಇಂದು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವು ನೀಡಿದೆ ಎಂದು ರೇಷ್ಮೆ ಇಲಾಖೆ ಆಯುಕ್ತ ಎಂ.ಬಿ.ರಾಜೇಶ್ ಗೌಡ ತಿಳಿಸಿದರು.
ತುಮಕೂರು : ರೇಷ್ಮೆ ಕೃಷಿಯಿಂದ ರೈತರು ಇಂದು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವು ನೀಡಿದೆ ಎಂದು ರೇಷ್ಮೆ ಇಲಾಖೆ ಆಯುಕ್ತ ಎಂ.ಬಿ.ರಾಜೇಶ್ ಗೌಡ ತಿಳಿಸಿದರು.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆದ ಬೆಳೆಗಾರರ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು ರೇಷ್ಮೆ ಇಂದು ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ಸೃಷ್ಟಿಗೆ ಅವಕಾಶವನ್ನು ಕಲ್ಪಿಸಿದೆ. ರಾಮನಗರ, ಶಿಡ್ಲಘಟ್ಟ, ಹಾವೇರಿ ಮತ್ತು ಗುಲ್ಬರ್ಗ ರೇಷ್ಮೆ ಗೆ ಹೆಚ್ಚಿನ ಅನುದಾನ ನೀಡುವ ಮೂಲಕ ರೈತರಿಗೆ ಹೆಚ್ಚಿನ ಆದಾಯ ದೊರಕಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಮಾತನಾಡಿ, ಭೂಮಿಗೆ ವಿರುದ್ಧವಾಗಿ ಹೋದಾಗ ಕೆಟ್ಟದ್ದು ಆಗುತ್ತದೆ. ಆಗಾಗಿ ತಾಳ್ಮೆ, ಪ್ರೀತಿಯಿಂದ ಭೂಮಿಯನ್ನು ಉಳುಮೆ ಮಾಡಬೇಕು. ರೇಷ್ಮೆ ಇಲಾಖೆಯ ಅಧಿಕಾರಿಗಳು ರೈತರೊಂದಿಗೆ ನಿರಂತರ ಸಂಪರ್ಕ ಹೊಂದುವ ಮೂಲಕ ರೈತ ಸ್ನೇಹಿಯಾಗಿ ಕೆಲಸ ಮಾಡುತ್ತಿದೆ. ಕೆಲವು ಇಲಾಖೆಗಳು ಸಹಾಯಧನಗಳನ್ನು ಹಂಚಿಕೆ ಮಾಡಲಷ್ಟೇ ಸೀಮಿತವಾಗಿವೆ. ಜಿಲ್ಲೆಯಲ್ಲಿ ರೇಷ್ಮೆ ಕೃಷಿಗೆ ಯೋಗ್ಯ ವಾತಾವರಣ ಇದೆ ರೈತರು ಇದನ್ನು ಅರ್ಥ ಮಾಡಿಕೊಳ್ಳಬೇಕು, ಬೆಂಗಳೂರು ಹತ್ತಿರವಿದೆ ಎನ್ನುವ ಕಾರಣಕ್ಕೆ ಎಲ್ಲರೂ ಉದ್ಯೋಗಕ್ಕೆ ಹೊರಡುತ್ತಾರೆ. ರೈತರು ಇರುವ ಭೂಮಿಯಲ್ಲಿ ಬಂಗಾರ ಬೆಳೆಯುವ ಅವಕಾಶವಿದ್ದರೂ ಸಹ ಬೆಂಗಳೂರಿನ ಮೋಹಕ್ಕೆ ಒಳಗಾಗುವುದನ್ನು ಬಿಡಬೇಕು ಎಂದರು.
ಸುಸ್ಥಿರ ಕೃಷಿಗಳಲ್ಲಿ ಒಂದಾಗಿರುವ ರೇಷ್ಮೆ ಕೃಷಿ, ರೈತರಿಗೆ ನಿಶ್ಚಿತ ಆದಾಯವನ್ನು ಒದಗಿಸಿಕೊಡುತ್ತಿದ್ದು, ರೈತರು ಸರ್ಕಾರಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಸುಸ್ಥಿರ ಬದುಕನ್ನು ಕಟ್ಟಿಕೊಳ್ಳಬೇಕು. ರಾಜ್ಯದಲ್ಲಿ ರೇಷ್ಮೆ ಬೆಳೆಯುವ ಜಿಲ್ಲೆಗಳ ಪಟ್ಟಿಯಲ್ಲಿ ಜಿಲ್ಲೆ ಏಳನೇ ಸ್ಥಾನದಲ್ಲಿದೆ. ರೈತರು ಹಾಗೂ ಅಧಿಕಾರಿಗಳು ಹೆಚ್ಚು ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಜಿಲ್ಲೆಯನ್ನು ಪ್ರಥಮ ಸ್ಥಾನಕ್ಕೆ ತರಬೇಕು ಹಾಗೂ ಇಲಾಖೆ ಹೆಚ್ಚಿನ ಅನುದಾನವನ್ನು ನೀಡಬೇಕೆಂದು ರೇಷ್ಮೆ ಆಯುಕ್ತರಲ್ಲಿ ಮನವಿ ಮಾಡಿದರು.
ರೇಷ್ಮೆ ಇಲಾಖೆ ಉಪ ನಿರ್ದೇಶಕ ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ, ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ರೇಷ್ಮೆ ಬೆಳೆಯಲಾಗುತ್ತಿದ್ದು, ದಕ್ಷಿಣ ಭಾರತದಲ್ಲಿಯೆ ತುರುವೇಕೆರೆ ಮತ್ತು ಶಿರಾ ತಾಲೂಕಿನಲ್ಲಿ ವಿಶ್ವದರ್ಜೆ ಗುಣಮಟ್ಟಇದೆ. ಪ್ರತಿದಿನ 25ರಿಂದ 26 ಟನ್ ರೇಷ್ಮೆ ಗೂಡನ್ನು ಮಾರುಕಟ್ಟೆಗೆ ನೀಡಲಾಗುತ್ತಿದೆ. ಜಿಲ್ಲೆಯ ರೇಷ್ಮೆ ಬೆಳೆಗಾರರು ಹಾಗೂ ಇಲಾಖೆ ತಾಂತ್ರಿಕತೆಯನ್ನು ಅಳವಡಿಸಿಕೊಂಡಿರುವ ಕಾರಣದಿಂದ ರೇಷ್ಮೆ ಅಭಿವೃದ್ಧಿಯನ್ನು ಸಾಧಿಸಿದೆ. ಕಳೆದ ಎರಡು ವರ್ಷಗಳಲ್ಲಿ 2,500 ಎಕರೆ ಭೂಮಿಯನ್ನು ರೇಷ್ಮೆ ಕೃಷಿಗೆ ಹೊಸದಾಗಿ ಪರಿಚಯಿಸಲಾಗಿದೆ. ಹೊಸ ಬೆಳೆಗಾರರು ರೇಷ್ಮೆ ಕೃಷಿ ಮಾಡಲು ಆಸಕ್ತಿ ತೋರುತ್ತಿದ್ದು, ರೈತರಿಗೆ ಅಗತ್ಯ ತಾಂತ್ರಿಕ ಮಾರ್ಗದರ್ಶನ ಮಾಡುವುದಾಗಿ ತಿಳಿಸಿದರು.
ಕಾರ್ಯಾಗಾರದಲ್ಲಿ ರೇಷ್ಮೆ ಕೃಷಿ ವಿಜ್ಞಾನಿ ಶ್ರೀನಿವಾಸಲು, ಡಾ.ನರೇಂದ್ರ ಕುಮಾರ್, ಉಪನಿರ್ದೇಶಕ ಬೋಜೇಗೌಡ ಸೇರಿದಂತೆ ವಿವಿಧ ತಾಲೂಕುಗಳ ರೈತ ಮಹಿಳೆಯರು ಭಾಗವಹಿಸಿದ್ದರು.
ಜಿಲ್ಲೆಯಲ್ಲಿ ರೇಷ್ಮೆ ಬೆಳೆ ಮತ್ತು ಮಾರುಕಟ್ಟೆಗೆ ಉತ್ತಮ ವ್ಯವಸ್ಥೆ ಇದೆ. ರೇಷ್ಮೆಯಿಂದ ಉತ್ತಮ ಜೀವನ ನಡೆಸಲು ರೇಷ್ಮೆ ಅವಕಾಶ ಕಲ್ಪಿಸಿದೆ, ಬೇರೆ ಬೆಳೆಗಳಿಂತ ಹೆಚ್ಚಿನ ಆದಾಯ ರೇಷ್ಮೆ ಕೃಷಿಯಿಂದ ಪಡೆಯಬಹುದಾಗಿದೆ. ನರೇಗಾ ಯೋಜನೆಯನ್ನು ಬಳಸಿಕೊಂಡು ರೇಷ್ಮೆ ಕೃಷಿ ವಿಸ್ತರಣೆಗೆ ಅವಕಾಶ ಕಲ್ಪಿಸಲಾಗಿದ್ದು, ಈ ವರ್ಷ 600 ಎಕರೆ ಪ್ರದೇಶದಲ್ಲಿ ಹೊಸದಾಗಿ ರೇಷ್ಮೆ ಕೃಷಿ ವಲಯವನ್ನು ವಿಸ್ತರಿಸಲಾಗಿದೆ, ರೈತರಿಗೆ ಹೆಚ್ಚು ಅನುಕೂಲ ಇರುವ ಈ ಬೆಳೆಯನ್ನು ಹೆಚ್ಚು ವಿಸ್ತರಿಸಲು ಇಲಾಖೆಗೆ ಸೂಚನೆ ನೀಡಲಾಗಿದೆ.
ಡಾ.ವಿದ್ಯಾಕುಮಾರಿ ಜಿಲ್ಲಾ ಪಂಚಾಯತಿ ಸಿಇಒ