ಜೇನಿಗೆ ಕಲ್ಲು ಹೊಡೆಯೋ ಕೆಲಸ ಬೇಡ : ಮಧು ಬಂಗಾರಪ್ಪ

By Kannadaprabha News  |  First Published Nov 10, 2020, 2:49 PM IST

ಜೇನಿಗೆ ಕಲ್ಲು ಹೊಡೆಯುವ ಕೆಲಸ ಬೇಡ ಎಂದು ಮುಖಂಡ ಮಧು ಬಂಗಾರಪ್ಪ ಎಚ್ಚರಿಕೆ ನೀಡಿದ್ದಾರೆ. 


ಶಿವಮೊಗ್ಗ (ನ.10):  ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ರಚಿಸಲಾಗಿರುವ ಮೇಲುಸ್ತುವಾರಿ ಮತ್ತು ಸಲಹಾ ಸಮಿತಿಯನ್ನು ತಕ್ಷಣ ರದ್ದುಗೊಳಿಸಿ ಈ ಹಿಂದಿನ ಟ್ರಸ್ಟ್‌ಗೆ ಅಧಿಕಾರ ವಹಿಸಿಕೊಡಬೇಕು. ಇನ್ನು 15 ದಿನಗಳೊಳಗಾಗಿ ಸರ್ಕಾರ ತನ್ನ ನಿಲುವನ್ನು ಬದಲಿಸದೆ ಇದ್ದರೆ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲು ಸಿಗಂದೂರು ಉಳಿಸಿ ಹೋರಾಟದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ ಮಧು ಬಂಗಾರಪ್ಪ ಮತ್ತಿತರರು ಈ ಬಗ್ಗೆ ಮಾಹಿತಿ ನೀಡಿ, ಹೋರಾಟದ ಮೊದಲ ಭಾಗವಾಗಿ ಸಿಗಂದೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Tap to resize

Latest Videos

ಸಿಎಂ ಭೇಟಿ ಮಾಡಿದ ಶಾಸಕ ಹಾಲಪ್ಪ, ಶ್ರೀಗಳ ನಿಯೋಗ : ನಡೆದ ಚರ್ಚೆ ಏನು? ...

ಸಿಗಂದೂರು ದೇವಸ್ಥಾನ ಎಲ್ಲ ಜಾತಿಯ ಭಕ್ತರ ಧಾರ್ಮಿಕ ಅಸ್ಮಿತೆಯಾಗಿದೆ ಎಂಬ ಕಾರಣಕ್ಕೆ ದಲಿತ ಹಾಗೂ ಹಿಂದುಳಿದ ವರ್ಗದ ಎಲ್ಲ ಸಮುದಾಯಗಳ ಮುಖಂಡರು ಇಂದಿನ ಸಭೆಯಲ್ಲಿ ಭಾಗವಹಿಸಿದ್ದರು. ಸರ್ಕಾರದ ನಿಲುವಿನ ವಿರುದ್ಧ ಬೀದಿಗಳಿದು ಹೋರಾಡಲು ನಿರ್ಣಯ ಕೈಗೊಳ್ಳಲಾಗಿದೆ. ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರ ಗೌರವ ಅಧ್ಯಕ್ಷತೆ ಮತ್ತು ಈಡಿಗ ಸಮಾಜದ ಗುರುಗಳು, ಸಮಾಜದ ಸರ್ವಜಾತಿ, ಸರ್ವ ಪಕ್ಷಗಳ ನೇತೃತ್ವದಲ್ಲಿ ಹೋರಾಟ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ. ಎಲ್ಲ ಹಿಂದುಳಿದ ಜಾತಿಗಳ ಮಠಾಧೀಶರು, ಜನಪ್ರತಿನಿಧಿಗಳು ಈ ಹೋರಾಟದಲ್ಲಿ ಭಾಗಿಯಾಗುವಂತೆ ಕೋರಲಾಗಿದೆ ಎಂದು ಹೇಳಿದರು.

ಇಂದಿನ ಸಭೆಯ ನಿರ್ಣಯವನ್ನು ಮನವಿ ರೂಪದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಬೇಕು. ಭಕ್ತರ ಭಾವನೆಗೆ ಗೌರವ ನೀಡಿ ಸರ್ಕಾರ ಈಗಿನ ಸಮಿತಿ ಬರ್ಕಾಸ್ತುಗೊಳಿಸಬೇಕು. ಹಿಂದಿನಂತೆಯೇ ಸರ್ಕಾರದ ಹಸ್ತಕ್ಷೇಪವಿಲ್ಲದೆ ದೇಗುಲದಲ್ಲಿ ಪೂಜಾ ವಿಧಿವಿಧಾನಗಳು ನಡೆದುಕೊಂಡು ಹೋಗುವಂತೆ ಮಾಡಬೇಕು. ಕಾಗೋಡು ತಿಮ್ಮಪ್ಪ ಅವರ ಮಾರ್ಗದರ್ಶನದಲ್ಲಿ ತಕ್ಷಣವೇ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಮುಖಂಡರ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಕಿಮ್ಮನೆ ರತ್ನಾಕರ್‌ ಹೇಳಿದರು.

ಜೇನಿಗೆ ಕಲ್ಲು ಹೊಡೆಯೋ ಕೆಲಸ ಬೇಡ : ಮಾಜಿ ಶಾಸಕ ಮಧು ಬಂಗಾರಪ್ಪ ಮಾತನಾಡಿ, ಮುಜರಾಯಿಗೆ ಸೇರಿಸಲ್ಲ ಎಂದು ಸರ್ಕಾರ ಹೇಳಿದೆ. ಆದರೆ, ಸಮಿತಿ ನೇಮಕ ಮಾಡಿರುವ ಹಿಂದಿನ ಉದ್ದೇಶ ಏನೆಂಬುದು ಗೊತ್ತಾಗಬೇಕಿದೆ. ಸಿಗಂದೂರು ದೇವಿಗೆ ರಾಜ್ಯ ಮತ್ತು ಹೊರದೇಶದಲ್ಲೂ ಭಕ್ತರಿದ್ದಾರೆ. ಅವರ ಭಾವನೆಗೆ ಧಕ್ಕೆ ತರಬಾರದು. ಸರ್ಕಾರ ಜೇನುಗೂಡಿಗೆ ಕೈ ಹಾಕುವುದಿಲ್ಲ ಎಂಬ ಭರವಸೆ ಇನ್ನೂ ಇದೆ ಎಂದರು.

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಸಿಗಂದೂರು ಉಳಿಸಿ ಹೋರಾಟದ ಪೂರ್ವಭಾವಿ ಸಭೆಗೆ ಹಿಂದುಳಿದ ಎಲ್ಲ ಸಮಾಜಗಳೊಂದಿಗೆ ಒಕ್ಕಲಿಗೆ, ಲಿಂಗಾಯತ ಸಮಾಜದ ಮುಖಂಡರು ಬಂದಿದ್ದಾರೆ. ಅಂದರೆ ದೇವಿಯ ಎಲ್ಲ ಭಕ್ತರೂ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಇದನ್ನು ಒಂದು ಆಂದೋಲನವಾಗಿ ಮಾಡಲಾಗುವುದು. ಎಲ್ಲ ಸಮಾಜಗಳ ಧಾರ್ಮಿಕ ನಾಯಕರು, ಸ್ವಾಮೀಜಿಗಳನ್ನು ಮುಂದಿನ ಹೋರಾಟಕ್ಕೆ ಆಹ್ವಾನಿಸಲಾಗುವುದು. ಅದೇ ರೀತಿ ಸಾಗರ, ಸೊರಬ ಕ್ಷೇತ್ರದ ಶಾಸಕರನ್ನು ಹೋರಾಟ ಸಮಿತಿಯ ಭಾಗವಾಗಿಸಬೇಕೆಂದು ಕಿಮ್ಮನೆ ರತ್ನಾಕರ್‌ ಹೇಳಿದ್ದು, ಎಲ್ಲರನ್ನೂ ಕೂಡಿಕೊಂಡೇ ಹೋರಾಟ ಮಾಡುವುದಾಗಿ ತಿಳಿಸಿದರು.

ಮಾಜಿ ಶಾಸಕಿ ಶಾರದಾ ಪೂರ್ಯನಾಯ್ಕ, ಮಾಜಿ ಶಾಸಕ ಡಾ.ಜಿ.ಡಿ.ನಾರಾಯಣಪ್ಪ, ಹಿಂದೂಪರ ಹೋರಾಟಗಾರ ಮಂಗಳೂರಿನ ಸತ್ಯಜಿತ್‌ ಸೂರತ್ಕಲ್‌, ಮಡಿವಾಳ ಸಮಾಜದ ರಾಜು ತಲ್ಲೂರ್‌, ದೇವಾಂಗ ಸಮಾಜ ಗಿರಿಯಪ್ಪ, ಸಾಧುಶೆಟ್ಟಿಸಮುದಾಯದ ಎನ್‌.ರಮೇಶ್‌, ಕುರುಬ ಸಮಾಜದ ಗೋಣಿ ಮಾಲತೇಶ್‌, ಜಿಪಂ ಸದಸ್ಯ ಕಲಗೋಡು ರತ್ನಾಕರ್‌, ಬಂಡಿ ರಾಮಚಂದ್ರ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಪ್ರಗತಿಪರ ಹೋರಾಟಗಾರ ಕೆ.ಪಿ.ಶ್ರೀಪಾಲ್‌, ಶಿರಸಿಯ ಈಡಿಗ ಸಮಾಜದ ಮುಖಂಡ ಭೀಮಣ್ಣನಾಯ್ಕ, ಹುಲ್ತಿಕೊಪ್ಪ ಶ್ರೀಧರ್‌, ಮಂಜುನಾಥ್‌ ನಾಯ್ಕ, ಹಿಂದುಳಿತ ಜಾತಿಗಳ ಒಕ್ಕೂಟದ ವಿ.ರಾಜು ಮತ್ತಿತರರಿದ್ದರು.

click me!