ಹುಬ್ಬಳ್ಳಿಯಲ್ಲಿ ಸಿದ್ದೇಶ್ವರ ಶ್ರೀಗಳ ಪ್ರವಚನ: ಕಾದು ಕುಳಿತ ಸಾವಿರಾರು ಭಕ್ತರು

By Kannadaprabha NewsFirst Published Mar 1, 2020, 8:14 AM IST
Highlights

ಇಂದಿನಿಂದ ಸಿದ್ದೇಶ್ವರ ಶ್ರೀಗಳ ಪ್ರವಚನ| ಗೋಕುಲ ಗ್ರಾಮದಲ್ಲಿ ಪ್ರವಚನ| ಬೆಳಗ್ಗೆ 6.30ರಿಂದ 7.30ರ ವರೆಗೆ ಪ್ರವಚನ| ಪ್ರತಿದಿನ 30 -40 ಸಾವಿರ ಜನರು ಸೇರುವ ನಿರೀಕ್ಷೆ|

ಹುಬ್ಬಳ್ಳಿ(ಮಾ.01): ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಆಧ್ಯಾತ್ಮಿಕ ಪ್ರವಚನವು ಗೋಕುಲ ಗ್ರಾಮದಲ್ಲಿ ಮಾ. 1ರಿಂದ ಒಂದು ತಿಂಗಳ ಕಾಲ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳು ನಡೆದಿದೆ. ಪ್ರತಿದಿನ ಬೆಳಗ್ಗೆ 6.30ರಿಂದ 7.30ರ ವರೆಗೆ ಪ್ರವಚನ ನಡೆಯಲಿದ್ದು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಮಾಡಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿಯಿಂದ ಮಾರ್ಚ್ 1ರಿಂದ ಒಂದು ತಿಂಗಳ ವರೆಗೆ ಹುಬ್ಬಳ್ಳಿ ಹೊರವಲಯದ ಗೋಕುಲ ಗ್ರಾಮದ ಶ್ರೀ ಬಸವಂತಪ್ಪ ಬ. ಹೊಸಮನಿ ಬಂಧುಗಳಿಗೆ ಸೇರಿದ ಸುಮಾರು 10 ಎಕರೆ ಕೃಷಿ ಜಮೀನಿನಲ್ಲಿ 4 ಎಕರೆ ಜಮೀನು ಈಗ ಆಧ್ಯಾತ್ಮಿಕ ಪ್ರವಚನದ ತಾಣವಾಗಿ ಮಾರ್ಪಡುತ್ತಿದೆ. ಜಮೀನು ಸುತ್ತಲೂ ಹಸಿರು ನೆಟ್‌ನ ತಾತ್ಕಾಲಿಕ ಆವರಣ ಗೋಡೆ ನಿರ್ಮಿಸಲಾಗಿದೆ. ಪ್ರತಿದಿನ ಸಾವಿರಾರು ಸಂಖ್ಯೆಯ ಜನರು ಪ್ರವಚನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಜನರು ಹೆಚ್ಚಾದರೆ ತಾತ್ಕಾಲಿಕ ಗೋಡೆಗಳನ್ನು ವಿಸ್ತರಿಸಲು ಸಂಘಟಕರು ನಿರ್ಧರಿಸಿದ್ದಾರೆ. 16/20 ಅಳತೆಯ ವೇದಿಕೆಯಲ್ಲಿ ಸಿದ್ದೇಶ್ವರ ಶ್ರೀಗಳು ಪ್ರವಚನಕ್ಕೆ ವೇದಿಕೆ ನಿರ್ಮಿಸಲಾಗುವುದು. ಪ್ರತಿದಿನ 30-40 ಸಾವಿರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಬಸ್‌ ವ್ಯವಸ್ಥೆ

ನಗರದ ಪ್ರತಿ ಬಡಾವಣೆ ಹಾಗೂ ಅಕ್ಕಪಕ್ಕದ ಗ್ರಾಮಗಳಿಂದ ಸಾರಿಗೆ ಬಸ್‌ಗಳ ವ್ಯವಸ್ಥೆ ಮಾಡಲಾಗುತ್ತದೆ. ಗೋಕುಲ ಗ್ರಾಮದ ಕೆರೆ ಪಕ್ಕದಲ್ಲಿ ಬಸ್‌ಗಳ ನಿಲುಗಡೆಗೆ ವ್ಯವಸ್ಥೆ ಮಾಡಿದ್ದು, ಇನ್ನಿತರ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಇನ್ನು ಗೋಕುಲ ಗ್ರಾಮ ಸ್ವಚ್ಛಗೊಳಿಸುವ ಕಾರ್ಯ ನಡೆದಿದ್ದು, ಮಹಾನಗರ ಪಾಲಿಕೆ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ರಸ್ತೆ ಉದ್ದಕ್ಕೂ ತೋರಣ ಕಟ್ಟಲಾಗಿದೆ.

ಶ್ರೀಗಳ ಸಾನಿಧ್ಯ

ಪ್ರವಚನ ಉದ್ಘಾಟನಾ ಕಾರ್ಯಕ್ರಮ ಮಾ. 1ರಂದು ಬೆಳಗ್ಗೆ 6.15ಕ್ಕೆ ನಡೆಯಲಿದ್ದು, ಮೂರುಸಾವಿರಮಠದ ಶ್ರೀ ಗುರುಸಿದ್ಧರಾಜ ಯೋಗೀಂದ್ರ ಸ್ವಾಮಿಜಿ, ಶ್ರೀ ಅಭಿನವ ಶಿವಾನಂದ ಸ್ವಾಮೀಜಿ, ಶ್ರೀ ಸದಾಶಿವಾನಂದ ಸ್ವಾಮೀಜಿ, ಶ್ರೀ ಚಂದ್ರಶೇಖರ ಶಿವಯೋಗಿ ರಾಜಯೋಗೀಂದ್ರ ಸ್ವಾಮೀಜಿ, ಶ್ರೀ ಚಿದ್ರುಪಾನಂದ ಸ್ವಾಮೀಜಿ, ಶ್ರೀ ಬಸವಾನಂದ ಸ್ವಾಮೀಜಿ, ಶ್ರೀ ಅಭಿನವ ಸಿದ್ಧಾರೂಢ ಸ್ವಾಮೀಜಿ, ಶ್ರೀ ಅಭಿನವ ರೇವಣಸಿದ್ಧೇಶ್ವರ ಸ್ವಾಮೀಜಿ, ಶ್ರೀ ಹರ್ಷಾನಂದ ಸ್ವಾಮೀಜಿ, ಶ್ರೀ ವೀರೇಶ್ವರ ದೇವರು, ಶ್ರೀ ಮಲ್ಲಯ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು. ಜನಪ್ರತಿನಿಧಿಗಳು ಸೇರಿದಂತೆ ಅನೇಕರು ಭಾಗಹಿಸಲಿದ್ದಾರೆ.

ಇಂಗ್ಲಿಷ್‌ ಪ್ರವಚನ:

ಇನ್ನು ಪ್ರತಿ ಭಾನುವಾರ ಸಂಜೆ 5ರಿಂದ 6ರ ವರೆಗೆ ಶ್ರೀಗಳು ಇಂಗ್ಲೀಷನಲ್ಲಿ ಪ್ರವಚನ ನೀಡುವರು. ಶಿವಣ್ಣ ಮುದ್ದಿ ಆ್ಯಂಡ್‌ ಸನ್ಸ್‌ ಅವರ ತಾರಿಹಾಳದ ಮಾವಿನ ತೋಟದಲ್ಲಿನ ನೂತನ ಕಟ್ಟಡದಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ವಾಸ್ತವ್ಯ ಮಾಡಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಇಲ್ಲಿಂದ ಬಸ್‌ ವ್ಯವಸ್ಥೆ

ಸಿದ್ಧೇಶ್ವರ ಶ್ರೀಗಳ ಪ್ರವಚನದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆಗಳಿಂದ ಸಾರಿಗೆ ಸಂಸ್ಥೆಯೂ ಬೆಳಿಗ್ಗೆ ವಿಶೇಷ ಬಸ್‌ ವ್ಯವಸ್ಥೆ ಮಾಡಿದೆ. ಸಿಬಿಟಿಯಿಂದ ಬೆಳಗ್ಗೆ 5.45ಕ್ಕೆ ಹೊರಡುವ ಬಸ್‌ ಹೊಸಬಸ್‌ ನಿಲ್ದಾಣ, ಅಕ್ಷಯ ಪಾರ್ಕ್ ಮಾರ್ಗವಾಗಿ ಸಂಚರಿಸಲಿದೆ. ಸಿದ್ಧಾರೂಢ ಮಠದಿಂದ ಬೆಳಗ್ಗೆ 5.30ಕ್ಕೆ ಹೊರಡುವ ಬಸ್‌, ಹಳೆ ಹುಬ್ಬಳ್ಳಿ, ಚನ್ನಪೇಟ ಹಾಗೂ ಗೋಕುಲ ಪ್ರವಚನ ಸ್ಥಳಕ್ಕೆ ತೆರಳಲಿದೆ. ಗಾಮನಗಟ್ಟಿಯಿಂದ 5.30ಕ್ಕೆ ಬಸ್‌ ಹೊರಡಲಿದೆ. ಇದು ನವನಗರ, ಹೊಸೂರು ಮಾರ್ಗವಾಗಿ ಗೋಕುಲ ತಲುಪಲಿದೆ. ಗಬ್ಬೂರು ಕ್ರಾಸ್‌ನಿಂದ 5.45ಕ್ಕೆ ಹೊರಡುವ ಬಸ್‌ ಹಳೆಬಸ್‌ ನಿಲ್ದಾಣ ಮಾರ್ಗವಾಗಿ ಗೋಕುಲ ತಲುಪಲಿದೆ. ಧಾರವಾಡ ಹೊಸ ಬಸ್‌ ನಿಲ್ದಾಣದಿಂದ 5.15ಕ್ಕೆ ಹೊರಡುವ ಬಸ್‌ ಉಣಕಲ್‌ ಲಿಂಗರಾಜನಗರ ಮಾರ್ಗವಾಗಿ ಗೋಕುಲ ತಲುಪಲಿದೆ. ಬೆಳಗ್ಗೆ 5.45ಕ್ಕೆ ತಾಜನಗರದಿಂದ ಹೊರಡುವ ಬಸ್‌ ಸಾಯಿನಗರ, ಉಣಕಲ್‌ ಮಾರ್ಗವಾಗಿ ಸಂಚರಿಸಲಿದೆ. ಬ್ಯಾಹಟ್ಟಿಯಿಂದ 5.30ಕ್ಕೆ ಹೊರಡುವ ಬಸ್‌ ಕುಸುಗಲ್‌, ಆಕ್ಸ್‌ಪರ್ಡ್‌ ಕಾಲೇಜ್‌ ಮಾರ್ಗವಾಗಿ ಪ್ರವಚನ ಸ್ಥಳ ತಲುಪಲಿದೆ. ಸಾರ್ವಜನಿಕರ ಇದರ ಉಪಯೋಗಪಡೆದುಕೊಳ್ಳಬಹುದು ಎಂದು ನಗರ ಸಾರಿಗೆಯ ವಿಭಾಗೀಯ ನಿಯಂತ್ರಕ ವಿವೇಕ ವಿಶ್ವಜ್ಞ ತಿಳಿಸಿದ್ದಾರೆ.
 

click me!