ಈಗ ನಮ್ಮ ಸರ್ಕಾರ ಇಲ್ಲ, ನಾನು ಸಿಎಂ ಅಲ್ಲ; ಆಶಾ ಸಮಸ್ಯೆ ಡಿಕೆಶಿ ಬಗೆಹರಿಸಬಹುದು: ಸಿದ್ದರಾಮಯ್ಯ

Published : Nov 28, 2026, 09:25 AM IST
siddaramaiah On Asha Worker

ಸಾರಾಂಶ

ಆಶಾ ಕಾರ್ಯಕರ್ತೆಯರ ಮುಷ್ಕರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಬಾಲಕೃಷ್ಣ ಮತ್ತು ಸಚಿವ ಯು.ಟಿ. ಖಾದರ್ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರ್ಕಾರ ಆಶಾ ಕಾರ್ಯಕರ್ತೆಯರನ್ನು ಕೈಬಿಟ್ಟಿದೆ ಎಂದು ಖಾದರ್ ಆರೋಪಿಸಿದ್ದರೆ, ಲಿಖಿತ ಭರವಸೆ ನೀಡಲು ಸಾಧ್ಯವಿಲ್ಲ ಎಂದು ಬಾಲಕೃಷ್ಣ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು (ನ.28): ಆಶಾ ಕಾರ್ಯಕರ್ತೆಯರ ಅಹರ್ನಿಶಿ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಈಗ ನಮ್ಮ ಸರ್ಕಾರ ಇಲ್ಲವಲ್ಲ. ನಾನು ಮುಖ್ಯಮಂತ್ರಿಯೂ ಅಲ್ಲ’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಶುಕ್ರವಾರ ಶಾಸಕರ ಭವನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಪ್ರಸ್ತುತ ಸರ್ಕಾರದ ಮುಖ್ಯಸ್ಥರು ಡಿ.ಕೆ. ಶಿವಕುಮಾರ್‌. ಅವರು ಸಮಸ್ಯೆ ಬಗೆಹರಿಸಬಹುದು ಅಂದುಕೊಂಡಿದ್ದೇನೆ’ ಎಂದು ತಿಳಿಸಿದರು. ನಾನು ಮುಖ್ಯಮಂತ್ರಿಯಾದರೆ ಮಹಿಳೆಯರಿಗೆ ಎರಡು ಹಸು ನೀಡುವುದಾಗಿ ಹೇಳಿರುವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ನಾವು ಪಶು ಭಾಗ್ಯ ಯೋಜನೆ ಕೊಟ್ಟಿದ್ದೇವೆ. ಪಶುಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ ಎಲ್ಲವನ್ನೂ ನಾವೇ ನೀಡಿದ್ದೇವೆ. ಅವರು ಈಗಾಗಲೇ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರು. ಆಗ ಯಾಕೆ ಹಸುಗಳನ್ನು ಕೊಡಲಿಲ್ಲ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಆಶಾ ಕಾರ್ಯಕರ್ತೆಯರಿಗೆ ಲಿಖಿತ ಭರವಸೆ ಕೊಡಲು ಆಗಲ್ಲ: ಬಾಲಕೃಷ್ಣ

ರಾಮನಗರ (ನ.28): ಆಶಾ ಕಾರ್ಯಕರ್ತೆಯರಿಗೆ ಲಿಖಿತ ಭರವಸೆ ನೀಡಲು ಸಾಧ್ಯವಿಲ್ಲ. ಒಬ್ಬರಿಗೆ ಲಿಖಿತ ಭರವಸೆ ನೀಡಿದರೆ, ಮುಂದೆ ಎಲ್ಲರೂ ಅದೇ ರೀತಿ ಹೋರಾಟ ಆರಂಭಿಸುತ್ತಾರೆ. ಹೀಗೆ ಎಲ್ಲರಿಗೂ ಲಿಖಿತ ಭರವಸೆ ಕೊಟ್ಟು ಸರ್ಕಾರ ನಡೆಸಲು ಸಾಧ್ಯವೇ ಎಂದು ಪೌರಾಡಳಿತ ಸಚಿವ ಎಚ್.ಸಿ ಬಾಲಕೃಷ್ಣ ಪ್ರಶ್ನಿಸಿದರು. ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಈಗಾಗಲೇ ಆಶಾ ಕಾರ್ಯಕರ್ತೆಯರ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ. ನಿಮ್ಮ ಹೋರಾಟಕ್ಕೆ ಬೆಲೆ ಇದೆ, ಮುಷ್ಕರ ಕೈಬಿಡಿ ಎಂದು ಮನವಿ ಮಾಡಿದರು. ಆಶಾ ಕಾರ್ಯಕರ್ತೆಯರ ಬೇಡಿಕೆ ನ್ಯಾಯಯುತವಾಗಿಯೇ ಇದೆ. ಆದರೆ, ಅದನ್ನು ಈಡೇರಿಸಲು ಸಮಯ ಬೇಕು. ಎಲ್ಲವನ್ನೂ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಮೊಂಡುತನದ ಹೋರಾಟವನ್ನು ಬಿಟ್ಟು ಸಿಎಂ ಮೇಲೆ ವಿಶ್ವಾಸವಿಟ್ಟು ಕಾಲಾವಕಾಶ ನೀಡಬೇಕು ಎಂದರು.

ಆಶಾ ಕಾರ್ಯಕರ್ತೆಯರನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ: ಸಚಿವ ಖಾದರ್

ಶಿವಮೊಗ್ಗ (ನ.28): ಆಶಾ ಕಾರ್ಯಕರ್ತೆಯರನ್ನು ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ನೇಮಕ ಮಾಡಿಕೊಂಡಿದ್ದು, ಆದರೆ ಕೇಂದ್ರ ಸರ್ಕಾರವೇ ಕಾರ್ಯಕರ್ತೆಯರನ್ನು ಕೈಬಿಟ್ಟಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್‌ ಹೇಳಿದರು. ಈ ಕುರಿತು ಮಾತನಾಡಿದ ಅವರು, ಕಾರ್ಯಕರ್ತೆಯರಿಗೆ ಆರಂಭದಲ್ಲಿ ಅತ್ಯಲ್ಪ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ 2014ರಲ್ಲಿ ತಾವು ಆರೋಗ್ಯ ಸಚಿವರಾಗಿದ್ದಾಗ ಕೇಂದ್ರ ಸರ್ಕಾರ ನೀಡುವ ಅನುದಾನಕ್ಕೆ ಸಮನಾಗಿ ರಾಜ್ಯ ಸರ್ಕಾರವೂ ಮ್ಯಾಚಿಂಗ್‌ ಗ್ರಾಂಟ್‌ ನೀಡುವ ನಿರ್ಧಾರ ಕೈಗೊಂಡಿತ್ತು. ಬಳಿಕ ಕೇಂದ್ರ ಸರ್ಕಾರ ಅದನ್ನು ಕೈಬಿಟ್ಟಿದೆ ಎಂದರು. ಆನಂತರದಲ್ಲಿ ಕೇಂದ್ರ ಸರ್ಕಾರದ ಅನುದಾನ ಕಡಿಮೆಯಾದ ಸಂದರ್ಭದಲ್ಲಿ ರಾಜ್ಯ ಸರ್ಕಾರವೇ ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ನೆರವು ನೀಡುವ ಜವಾಬ್ದಾರಿ ವಹಿಸಿಕೊಂಡಿದೆ. ಪ್ರಸ್ತುತ ಕನಿಷ್ಠ ೮ ಸಾವಿರ ರು. ಪ್ರೋತ್ಸಾಹಧನ ದೊರೆಯುತ್ತಿದೆ ಎಂದರು.

PREV
Read more Articles on
click me!

Recommended Stories

ಕಲ್ಯಾಣ ಕರ್ನಾಟಕದ ನೀರಿನ ಸಮಸ್ಯೆ ನಿವಾರಣೆಗೆ ಮಹಾರಾಷ್ಟ್ರದ ಶಿರಪುರ ಮಾದರಿ, 200 ಕೋಟಿ ವೆಚ್ಚದಲ್ಲಿ ಜಲ ಸಂರಕ್ಷಣೆ
ಬೆಂಗಳೂರಲ್ಲಿ ದೇಶದ ಮೊದಲ ಬುಲೆಟ್ ಟ್ರೈನ್ ನಿರ್ಮಾಣದ ವಿಡಿಯೋ ಹಂಚಿಕೊಂಡ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌