ಮಾಜಿ ಸಿಎಂ ಯಡಿಯೂರಪ್ಪಗೆ ಬಸವರತ್ನ ಪ್ರಶಸ್ತಿ

By Kannadaprabha NewsFirst Published Oct 28, 2021, 12:29 PM IST
Highlights

*  ಭೀಮಣ್ಣ ಖಂಡ್ರೆಗೆ ಶರಣ ಸಕ್ಕರೆ ಕರಡೀಶ ಪ್ರಶಸ್ತಿ
*  ಅ. 31ರಂದು ಬಳ್ಳಾರಿಯಲ್ಲಿ ಪ್ರಶಸ್ತಿ ಪ್ರದಾನ
*  ವಿವಿಧ ಕ್ಷೇತ್ರಗಳ ಸಾಧನೆಗೈದವರಿಗೆ ಸನ್ಮಾನ 
 

ಬಳ್ಳಾರಿ(ಅ.28): ಅ. 31ರಂದು ಹಾನಗಲ್ಲ ಕುಮಾರ ಮಹಾಶಿವಯೋಗಿಗಳ 154ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಶ್ರೀಶರಣ ಬಸವರತ್ನ ಪ್ರಶಸ್ತಿ(Shrisharana Basavaratna Award) ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಗೌರವಾಧ್ಯಕ್ಷ ಡಾ. ಭೀಮಣ್ಣ ಖಂಡ್ರೆ(Bheemanna Khandre) ಅವರಿಗೆ ಶರಣ ಸಕ್ಕರೆ ಕರಡೀಶ ಪ್ರಶಸ್ತಿ(Award) ಪ್ರದಾನ ಮಾಡಲಾಗುವುದು ಎಂದು ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಎನ್‌. ತಿಪ್ಪಣ್ಣ, ರಾಜ್ಯ ಕಾರ್ಯದರ್ಶಿ ಕೆ.ಬಿ. ಶ್ರೀನಿವಾಸ ರೆಡ್ಡಿ ಹಾಗೂ ಜಿಲ್ಲಾಧ್ಯಕ್ಷ ಚಾನಾಳ್‌ ಶೇಖರ್‌ ತಿಳಿಸಿದ್ದಾರೆ. 

ಬುಧವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, 117 ವರ್ಷಗಳ ಬಳಿಕ ಬಳ್ಳಾರಿ(Ballari) ನಗರದಲ್ಲಿ ಪ್ರಥಮವಾಗಿ ಮಹಾಸಭಾದ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆ ಆಯೋಜಿಸಲಾಗುತ್ತಿದೆ. ಹಾನಗಲ್ಲ ಕುಮಾರಸ್ವಾಮಿಗಳ 154ನೇ ಜಯಂತ್ಯುತ್ಸವದಲ್ಲಿ ಡಾ. ಸಂಗನಬಸವ ಮಹಾಸ್ವಾಮಿಗಳ ಗುರುವಂದನ ಸಮಾರಂಭ ಆಯೋಜಿಸಲಾಗಿದೆ ಎಂದರು.

ಅ. 30ರಂದು ಬೆಳಗ್ಗೆ 10 ಗಂಟೆಗೆ ವೀರಶೈವ ಮಹಾಸಭಾದ ವಿವಿಧ ಘಟಕಗಳು ಹಾಗೂ ವಿಭಾಗಗಳ ಪದಾಧಿಕಾರಿಗಳ ಕಾರ್ಯಾಗಾರ ನಡೆಯಲಿದ್ದು, ಡಾ. ಸಂಗನಬಸವ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಬಿ.ಎಸ್‌. ಪರಮಶಿವಯ್ಯ, ಬಾಗಲಕೋಟೆ ತೋಟಗಾರಿಕೆ ಕೃಷಿ ವಿವಿಯ ವಿಶ್ರಾಂತ ಕುಲಪತಿ ಡಾ. ಎಸ್‌.ಬಿ. ದಂಡಿನ್‌, ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಎಚ್‌.ಎಂ. ರೇಣುಕಾ ಪ್ರಸನ್ನ ಅವರು ಭಾಗವಹಿಸುವರು. ಸಂಜೆ 4 ಗಂಟೆಗೆ ರಾಜ್ಯ ಸಮಿತಿಯ ಕಾರ್ಯಕಾರಿ ಸಮಿತಿ ಸಭೆ ಜರುಗಲಿದ್ದು, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ(Shamanur Shivashankarappa) ಅವರು ಉದ್ಘಾಟಿಸುವರು. ಈಶ್ವರ ಖಂಡ್ರೆ(Ehwar Khandre) ಅವರು ಉಪಸ್ಥಿತರಿರುವರು ಎಂದರು.

ಯಡಿಯೂರಪ್ಪಗೆ ಪ್ರಶಸ್ತಿ ಕೊಟ್ಟಿದ್ದು ಯಾವ ಸಾಧನೆಗೆ: ಸಿದ್ದು

ಅ. 31ರಂದು ಬೆಳಗ್ಗೆ 8 ಗಂಟೆಗೆ ಹಾನಗಲ್ಲ ಕುಮಾರೇಶ್ವರ ಮಹಾಶಿವಯೋಗಿಗಳ ಭಾವಚಿತ್ರ ಮೆರವಣಿಗೆ ನಡೆಯಲಿದ್ದು, ಬಳಿಕ ಬಸವಭವನದಲ್ಲಿ ಜಯಂತ್ಯುತ್ಸವ ಸಮಾರಂಭಕ್ಕೆ ಚಾಲನೆ ಸಿಗಲಿದೆ. ಉಜ್ಜಯಿನಿ ಸದ್ಧರ್ಮ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಬಾಲೇಹೊಸೂರು ದಿಂಗಾಲೇಶ್ವರ ಮಹಾಸ್ವಾಮಿ ಹಾಗೂ ಡಾ. ಸಂಗನಬಸವ ಸ್ವಾಮಿ ಸಾನ್ನಿಧ್ಯ ವಹಿಸಲಿದ್ದು, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಎನ್‌. ತಿಪ್ಪಣ್ಣ ಅಧ್ಯಕ್ಷತೆ ವಹಿಸುವರು. ಬಿ.ವೈ. ವಿಜಯೇಂದ್ರ, ಬಿ.ವೈ. ಅರುಣಾದೇವಿ, ಶಾಸಕ ವೀರಣ್ಣ ಚರಂತಿಮಠ ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ರಾಜ್ಯದ ಅನೇಕ ಗಣ್ಯರು ಸೇರಿದಂತೆ ಆಂಧ್ರಪ್ರದೇಶ(Andhra Pradesh), ತೆಲಂಗಾಣ(Telangana), ತಮಿಳುನಾಡು(Tamil Nadu) ರಾಜ್ಯಗಳ ಮಹಾಸಭಾದ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧನೆಗೈದವರಿಗೆ ಸನ್ಮಾನ ನಡೆಯಲಿದೆ. ಜ್ಯೋತಿಷ್ಯಶಾಸ್ತ್ರ(Astrology) ನಿಪುಣ ಡಾ. ಜೆ.ಎಂ. ಪಂಪಾಪತಿ ಶಾಸ್ತ್ರಿ, ಮಾಜಿ ಸಂಸದ ಕೋಳೂರು ಬಸವನಗೌಡ, ಸಂಡೂರಿನ ಬಿಕೆಜಿ ಮೈನ್ಸ್‌ ಉದ್ಯಮಿ ಬಿ. ನಾಗನಗೌಡ, ಜಿಂದಾಲ್‌ನ ಡಾ. ರಾಜಶೇಖರ ಪಟ್ಟಣಶೆಟ್ಟಿ, ತಾರಾನಾಥ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ರಾಜಶೇಖರ ಗಾಣಿಗೇರ, ಗೃಹ ಇಲಾಖೆಯ ಉಪ ಕಾರ್ಯದರ್ಶಿ ಗೆಣಿಕೆಹಾಳ್‌ ಪಂಪನಗೌಡ, ಸಮರ್ಥನಂ ಅಂಗವಿಕಲ ಸಂಸ್ಥೆಯ ಅಶ್ವಿನಿ ಅಂಗಡಿ ಅವರನ್ನು ಗೌರವಿಸಲಾಗುವುದು. ಸಂಜೆ ಜರುಗುವ ಸಮಾರೋಪ ಸಮಾರಂಭದಲ್ಲಿ ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಮಹಾಸ್ವಾಮಿ(Gavisiddeshwara Shri) ಸಾನ್ನಿಧ್ಯ ವಹಿಸಲಿದ್ದು, ಕಮ್ಮರಚೇಡು ಕಲ್ಯಾಣಸಂಸ್ಥಾನ ಮಠದ ಶ್ರೀ ಕಲ್ಯಾಣಸ್ವಾಮಿ ಆಶೀರ್ವದಿಸುವರು ಎಂದರು.

ಮಹಾಸಭಾದ ಮುಖಂಡರಾದ ಯಾಳ್ಪಿ ದಿವಾಕರಗೌಡ, ಚೋರನೂರು ರುದ್ರೇಶ್‌, ಗಂಗಾವತಿ ವೀರೇಶ್‌, ಆನಂದ ಬಿ.ಎಚ್‌. ಹೇಮಾದ್ರಿ, ಡಾ. ಗಡಗಿ ಚೇತನಾ, ಕೋರಿ ವಿರುಪಾಕ್ಷಪ್ಪ, ಲೇಪಾಕ್ಷಪ್ಪ, ಸುಮಾರೆಡ್ಡಿ, ವನಜಾಕ್ಷಿ, ಆನೆ ರೂಪಾ, ನಾಗರತ್ನ, ನಾಡಗೌಡ್ರ ಚಂದ್ರಗೌಡ, ಹೊನ್ನನಗೌಡ, ಎಸ್‌. ರಾಜಶೇಖರ ಶಾನವಾಸಪುರ, ಶಂಕರ್‌ ಡಿ.ಕಗ್ಗಲ್‌, ಪುಟ್ಟು ಹಾಗೂ ಕೊಟ್ಟೂರುಸ್ವಾಮಿಮಠದ ವ್ಯವಸ್ಥಾಕ ಬಸವರಾಜ್‌ ಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.
 

click me!